ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡ ಎರಡು ದಿನಗಳ ರಂಗಭೂಮಿ ರಂಗ ಶಿಕ್ಷಣ ಅಭಿಯಾನದ ಮಕ್ಕಳ ನಾಟಕೋತ್ಸವದ ಸಮಾರೋಪ ನೆರವೇರಿತು.
ಉಡುಪಿ ರಂಗಭೂಮಿಯಿಂದ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ಸಮಾರೋಪ
ಉಡುಪಿ: ರಂಗಶಿಕ್ಷಣ ಮಕ್ಕಳ ಜೀವನ ಪರಿವರ್ತನೆಗೆ ನಾಂದಿಯಾಗಲಿದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭಾಶಕ್ತಿಯನ್ನು ಹೊರ ತರುವುದೇ ಈ ರಂಗಶಿಕ್ಷಣದ ಉದ್ದೇಶವಾಗಿದೆ. ಈ ಉದ್ದೇಶ ಸಾಕಾರಗೊಳ್ಳುತ್ತಿದೆ. ಜಿಲ್ಲೆಯ 11 ಶಿಕ್ಷಣ ಸಂಸ್ಥೆಗಳ 250ಕ್ಕೂ ಅಧಿಕ ಮಕ್ಕಳು ರಂಗಶಿಕ್ಷಣ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ರಂಗಶಿಕ್ಷಣವನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡ ಎರಡು ದಿನಗಳ ರಂಗಭೂಮಿ ರಂಗ ಶಿಕ್ಷಣ ಅಭಿಯಾನದ ಮಕ್ಕಳ ನಾಟಕೋತ್ಸವದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಲ್ಲಾ ಕ್ಷೇತ್ರಗಳಲ್ಲಿಯೂ ನಿವೃತ್ತಿ ಎಂಬುದಿದೆ ಆದರೆ ಕಲಾವಿದರಿಗೆ ನಿವೃತ್ತಿಯಿಲ್ಲ, ಮಕ್ಕಳಿಗೆ ರಂಗ ಶಿಕ್ಷಣ ನೀಡಿ ಅವರನ್ನು ನಾಡಿನ ಉತ್ತಮ ನಾಗರಿಕರನ್ನಾಗಿಸುವ ರಂಗಭೂಮಿಯ ಈ ಅಭಿಯಾನದಲ್ಲಿ ಸಂಘಸಂಸ್ಥೆಗಳು ಕೈ ಜೋಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿ ಅದಾನಿ ಪವರ್‌ನ ಎಜಿಎಂ ರವಿ ಜರೆ ಮಾತನಾಡಿ, ಕಳೆದ 6 ದಶಕಗಳಿಂದ ರಂಗಭೂಮಿಯ ಕಂಪನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ರಂಗಭೂಮಿ ಉಡುಪಿ ಸಂಸ್ಥೆ ಇದೀಗ ಮಕ್ಕಳನ್ನು ನಾಟಕದತ್ತ ಸೆಳೆಯಲು ರಂಗ ಶಿಕ್ಷಣವನ್ನು ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದರು. ಉದ್ಯಮಿ ಶ್ರೀಶ ನಾಯಕ್ ಪೆರಣಂಕಿಲ ಮಾತನಾಡಿ, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳನ್ನು ನಾಟಕದತ್ತ ಸೆಳೆಯುವ ರಂಗಭೂಮಿ ಉಡುಪಿಯ ಪ್ರಯತ್ನ ಶ್ಲಾಘನೀಯ. ನಾಟಕದ ಮೂಲಕ ರಂಗಭೂಮಿ ಸಮಾಜವನ್ನು ಎಚ್ಚರಿಸುವ ಕಾರ್ಯ ನಡೆಸುತ್ತಿದೆ ಎಂದರು.ರಂಗಶಿಕ್ಷಣ ಯೋಜನೆಯ ಸಂಚಾಲಕ ವಿದ್ಯಾವಂತ ಆಚಾರ್ಯ ಸಮಾರೋಪ ಭಾಷಣ ಮಾಡಿದರು. ಲಯನ್ಸ್ ಜಿಲ್ಲಾ ಗವರ್ನರ್ ಸುನೀಲ್ ಸಾಲ್ಯಾನ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಂಗ ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಹಾಗೂ ರಂಗಶಿಕ್ಷಣದ ಗುರುಗಳಿಗೆ ಗೌರವಾರ್ಪಣೆ ನಡೆಯಿತು.ಉದ್ಯಮಿ ಜಮಾಲುದ್ದೀನ್ ಅಬ್ಬಾಸ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಆರ್‌ಆರ್‌ಸಿ ನಿರ್ದೇಶಕ ಡಾ. ಜಗದೀಶ್ ಶೆಟ್ಟಿ, ರಂಗಭೂಮಿ ಉಡುಪಿಯ ಉಪಾಧ್ಯಕ್ಷರಾದ ರಾಜಗೋಪಾಲ್ ಬಲ್ಲಾಳ್ ಹಾಗೂ ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಸ್ವಾಗತಿಸಿದರು. ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅಮಿತಾಂಜಲಿ ಕಿರಣ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.