ಮಕ್ಕಳಲ್ಲಿ ರಂಗಭೂಮಿ ಅಭಿರುಚಿ ಬೆಳೆಸಬೇಕು

KannadaprabhaNewsNetwork | Published : Nov 6, 2023 12:47 AM

ಸಾರಾಂಶ

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆಂಚಪ್ಪನವರ್

ಕನ್ನಡಪ್ರಭ ವಾರ್ತೆ ಸಾಗರ ಪರಿಸರ ಸಮತೋಲನದಲ್ಲಿ ಪ್ರಾಣಿ, ಪಕ್ಷಿಗಳ ಪಾತ್ರವೂ ಇದೆ. ಪಕ್ಷಿ ಸಂಕುಲಗಳನ್ನು ಸಂರಕ್ಷಿಸಿಕೊಂಡಾಗ ಮಾತ್ರ ಮನುಷ್ಯನ ಬದುಕಿಗೆ ನೆಮ್ಮದಿ ಸಾಧ್ಯ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆಂಚಪ್ಪನವರ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ನಟನಾಟ್ಯ ಟ್ರಸ್ಟ್ ಏರ್ಪಡಿಸಿದ್ದ ''''ಗುಬ್ಬಿ'''' ಮಕ್ಕಳ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಪರಿಸರ ಸಂಬಂಧಿ ವಿಷಯಗಳ ಅರಿವು ಮೂಡಿಸುವುದು ಅಗತ್ಯ ಎಂದರು.

ಪರಿಸರ, ಗುಬ್ಬಿ ಮತ್ತು ನಾಟಕ ಈ ಮೂರು ಸಂಗತಿಗಳೂ ಇಂದು ಕುಸಿಯುತ್ತಿವೆ. ಪರಿಸರದ ಮೇಲಾಗುತ್ತಿರುವ ಪರಿಣಾಮದಿಂದ ಗುಬ್ಬಿ ಸಂತತಿ ಕಡಿಮೆಯಾಗುತ್ತಿದೆ. ಹೆಚ್ಚುತ್ತಿರುವ ನಗರೀಕರಣ, ಮೊಬೈಲ್ ಟವರ್, ಅರಣ್ಯ ನಾಶ ಮುಂತಾದ ಕಾರಣಗಳಿಂದ ಗುಬ್ಬಿಗಳು ನೋಡಲು ಸಿಗುತ್ತಿಲ್ಲ. ಹಾಗೆಯೇ ನಾಟಕ ಪ್ರದರ್ಶನವೂ ಕಡಿಮೆಯಾಗಿದೆ. ಮಕ್ಕಳಲ್ಲಿ ರಂಗಭೂಮಿಯ ಅಭಿರುಚಿ ಬೆಳೆಸಬೇಕು ಎಂದು ಹೇಳಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪುರುಷೋತ್ತಮ ತಲವಾಟ ಮಾತನಾಡಿ, ಪರಿಸರದಲ್ಲಿ ಎಲ್ಲವೂ ಇದ್ದಾಗ ಮನುಷ್ಯನ ಬದುಕೂ ನೆಮ್ಮದಿಯಿಂದಿರುತ್ತದೆ. ಮನುಷ್ಯನ ದುರಾಸೆಯಿಂದ ಪರಿಸರ ಅಸಮತೋಲನಗೊಳ್ಳುತ್ತಿದೆ. ಇದರ ಪರಿಣಾಮವನ್ನು ಅರಿತು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.

ನಾಟ್ಯತರಂಗ ಸಂಸ್ಥೆ ವಿದ್ವಾನ್ ಜಿ.ಬಿ. ಜನಾರ್ದನ್ ಮಾತನಾಡಿ, ಮಕ್ಕಳಲ್ಲಿ ಸದಭಿರುಚಿ ಬೆಳೆಸಬೇಕು. ಇಲ್ಲವಾದರೆ ಅವರು ಹಾದಿ ತಪ್ಪುವ ಅಪಾಯ ಇರುತ್ತದೆ. ಬಾಲ್ಯದಿಂದಲೇ ರಂಗಾಸಕ್ತಿಯನ್ನು ಬೆಳೆಸಿದರೆ ಅವರು ತಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯವನ್ನೂ ರೂಪಿಸುತ್ತಾರೆ ಎಂದರು. ನಟನಾಟ್ಯ ಟ್ರಸ್ಟ್ ಉಪಾಧ್ಯಕ್ಷ ಸಂತೋಷ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಅಂಬಿಕಾ ಕಸ್ವೆ ನಿರೂಪಿಸಿ, ವಂದಿಸಿದರು. ಅನಂತರ ದರ್ಶನ್ ನೀನಾಸಮ್ ನಿರ್ದೇಶನದಲ್ಲಿ ಮಕ್ಕಳ ರಂಗತರಗತಿಯ ಮಕ್ಕಳು `ಗುಬ್ಬಿ'''''''' ನಾಟಕ ಪ್ರದರ್ಶಿಸಿದರು.

- - - -05ಕೆ.ಎಸ್.ಎ.ಜಿ.2: ''''ಗುಬ್ಬಿ'''' ಮಕ್ಕಳ ನಾಟಕ ನಾಟಕದ ದೃಶ್ಯ.

Share this article