ಹೂವಿನಹಡಗಲಿ: ರಂಗಭೂಮಿ ನಮ್ಮ ಭಾಷೆ, ಸಂಸ್ಕೃತಿ, ಸಾಹಿತ್ಯದ ಪ್ರತಿಬಿಂಬವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ರಂಗಕರ್ಮಿ ಮ.ಬ. ಸೋಮಣ್ಣ ಹೇಳಿದರು.
ಮಲ್ಟಿ ಮೀಡಿಯಾಗಳ ಹಾವಳಿಯಿಂದಾಗಿ, ಇಂದಿನ ಜನ ರಂಗಭೂಮಿಯ ಆಸಕ್ತಿ ಕಳೆದುಕೊಂಡಿದ್ದಾರೆ. ಅದರಲ್ಲೂ ಯುವಕರಿಗೆ ನಾಟಕಗಳ ಬಗ್ಗೆ ಅರಿವು ಇಲ್ಲದಂತಾಗಿದೆ. ರಂಗಭೂಮಿ ಉಳಿಯಬೇಕಾದರೆ ಪ್ರತಿ ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ಸರ್ಕಾರ ನೇಮಿಸಬೇಕಿದೆ. ಆ ಮೂಲಕ ನಾಟಕ ಅಭಿನಯ, ನೃತ್ಯ, ಹಾಡುಗಾರಿಕೆಯನ್ನು ಮಕ್ಕಳಲ್ಲಿ ಬೆಳೆಸಿ ಸಾಂಸ್ಕೃತಿಕವಾಗಿ ಮಕ್ಕಳನ್ನು ಶ್ರೀಮಂತಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ಮಾತನಾಡಿ, ರಂಗ ಕಲಾವಿದರು ಜಗತ್ತಿನ ಸಾಂಸ್ಕೃತಿಕ ರಾಯಭಾರಿಗಳು, ಮಲ್ಲಿಗೆ ನಾಡಿನಲ್ಲಿ ರಂಗ ಪರಂಪರೆ ಬೆಳೆಯಲು ರಂಗಕರ್ಮಿ ಎಂ.ಪಿ. ಪ್ರಕಾಶ್ ಮತ್ತು ಅವರ ಕುಟುಂಬ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. 1964ರಲ್ಲಿ ರಂಗಭಾರತಿ ಸಂಸ್ಥೆ ಸ್ಥಾಪಿಸಿ, ಆ ಮೂಲಕ ಎಲ್ಲ ರೀತಿಯ ಕಲೆಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಎಂ.ಪಿ. ಪ್ರಕಾಶ ಅವರು ಈ ನಾಡಿನ ಎಲ್ಲ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಸಂಚಾಲಕ ಪ್ರಕಾಶ ಮತ್ತಿಹಳ್ಳಿ, ರಂಗಭಾರತಿ ಕಾರ್ಯಾಧ್ಯಕ್ಷೆ ಸುಮಾ ವಿಜಯ್, ಉಪನ್ಯಾಸಕ ಪ್ರಭು ಸೊಪ್ಪಿನ್, ಪಿ.ಎಂ. ಕೊಟ್ರಸ್ವಾಮಿ, ಎಸ್.ಎಂ. ಕೂಡ್ಲಯ್ಯ, ಸಂತೋಷ ಜೈನ್ ಇತರರಿದ್ದರು.
ಪ್ರಕಾಶ್ ಜೈನ್, ಚಂದ್ರಪ್ಪ ಸೋಗಿ, ಯುವರಾಜ್ ಗೌಡ ಇವರು ಸಂಗ್ಯಾ ಬಾಳ್ಯ, ಜೋಕುಮಾರಸ್ವಾಮಿ ನಾಟಕದ ಗೀತೆಗಳನ್ನು ಹಾಡಿದರು.