ರಂಗಭೂಮಿ ನಾಡಿನ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ

KannadaprabhaNewsNetwork |  
Published : Mar 30, 2026, 03:00 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ಪಟ್ಟಣದ ವೇದಾವತಿ ನಗರದ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ರಂಗಭೂಮಿ ಎಂದರೆ ಅದು ಕೇವಲ ಕಲೆಯಲ್ಲ. ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಪ್ರತಿಬಿಂಬವಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ವೇದಾವತಿ ನಗರದ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ ಹಾಗೂ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ

ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತೀಕರಣ ಆಧುನಿಕರಣ ನಗರೀಕರಣದಿಂದ ದೇಶಿಯ ಕಲೆಗೆ ಪೆಟ್ಟು ಬಿದ್ದಿದ್ದು ರಂಗಭೂಮಿ ಮಾತ್ರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಾಟಕಗಳನ್ನು ಅಭಿನಯಿಸುತ್ತಿರುವುದರಿಂದ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಕಲಾವಿದರು ತಮ್ಮಲ್ಲಿ ನೋವು ಸಂಕಟ ವೇದನೆ ದುಃಖ ಇದ್ದರೂ ಸಹ ಪಾತ್ರಗಳಿಗೆ ಜೀವತುಂಬಿ ಅಭಿನಯಿಸುವ ಮೂಲಕ ನಾಡಿನ ರಂಗಭೂಮಿ ಕಲೆಯನ್ನು ಶ್ರೀಮಂತಿಕೆಗೊಳಿಸಿದ್ದಾರೆ ಎಂದರು.

ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಮಾಳಿಗೆ ಮಾತನಾಡಿ, ರಂಗಭೂಮಿಗೆ ಕಥೆ, ಸಂಭಾಷಣೆ ಹಾಗೂ ಕಲಾವಿದರೇ ಜೀವಾಳವಾಗಿದ್ದು ರಂಗಭೂಮಿ ಕಲೆ ನಶಿಸದಂತೆ ನೋಡಿಕೊಳ್ಳಬೇಕಿದೆ. ಕಲಾವಿದರು ತಮ್ಮ ಪಾತ್ರದ ಮೂಲಕ ಕ್ರಿಯೆಗೆ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಪ್ರೇಕ್ಷಕ ಮತ್ತು ಕಲಾವಿದರ ನಡುವೆ ನಾಟಕಗಳು ನೇರ ಸಂಪರ್ಕವನ್ನು ಹೊಂದುತ್ತವೆ. ಪ್ರತಿ ಪ್ರದರ್ಶನಗಳು ಹೊಸತನ ಲವಲವಿಕೆಯಿಂದ ಕೂಡಿದ್ದು ಹಳ್ಳಿಗಳಲ್ಲಿ ಇಂದಿಗೂ ಹಬ್ಬ ಹರಿದಿನ ಸುಗ್ಗಿಯ ಕಾಲದಲ್ಲಿ ಪೌರಾಣಿಕ ಸಾಮಾಜಿಕ ಐತಿಹಾಸಿಕ ನಾಟಕಗಳ ಪ್ರದರ್ಶನವನ್ನು ಕಾಣಬಹುದಾಗಿದೆ ಎಂದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ರಂಗಭೂಮಿ ಎಂಬುದು ವಿಶಿಷ್ಟ ಸಂಸ್ಕೃತಿಯ ಪ್ರತೀಕ. ಕಲಾವಿದರು ತನ್ನಲ್ಲಿ ಎಷ್ಟೇ ನೋವಿರಲಿ, ಸಂಕಟವಿರಲಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ನಾಡಿನ ರಂಗ ಕಲೆಯ ಉಳಿವಿಗೆ ಶ್ರಮಿಸಿದ್ದಾರೆ.

ಸರ್ಕಾರ ಕಲಾವಿದರಿಗೆ ನೀಡುವ ಮಾಸಾಶನದಿಂದ ಹೊಟ್ಟೆ ತುಂಬುವುದಿಲ್ಲ. ಅವರಿಗೆ ಜೀವನ ಭದ್ರತೆಯೂ ಇಲ್ಲ. ಆದ ಕಾರಣ ಕೇರಳ ಮತ್ತು ಆಂಧ್ರ ಮಾದರಿಯಲ್ಲಿ 7000 ಮತ್ತು 5000 ರು. ಮಾಶಾಸನವನ್ನು ಹೆಚ್ಚಿಸಬೇಕು. ಕಲಾವಿದರ ಮಕ್ಕಳಿಗಾಗಿ ಪ್ರತ್ಯೇಕವಾಗಿ ವಸತಿ ಶಾಲೆ ಆರಂಭಿಸಬೇಕು. ಉದ್ಯೋಗದಲ್ಲಿ ಕಲಾವಿದರ ಮಕ್ಕಳಿಗೆ ಮೀಸಲಾತಿ ನೀಡಬೇಕು. ಪ್ರಾಥಮಿಕ ಪ್ರೌಢ ಪದವಿ ಪೂರ್ವ ಹಾಗೂ ವಸತಿ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ ಮತ್ತು ನಾಟಕ ಶಿಕ್ಷಕರನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಪ್ರಾಂಶುಪಾಲ ಕಾಮಣ್ಣ ಮಾತನಾಡಿ, ರಂಗಭೂಮಿಗೆ ಡಾ.ರಾಜಕುಮಾರ್, ಕಲ್ಪನಾ, ನರಸಿಂಹರಾಜ್, ಬಾಲಕೃಷ್ಣ, ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ, ಬಿ.ಜಯಶ್ರೀ, ಮಂಡ್ಯ ರಮೇಶ್ ರಂತಹ ಹಲವಾರು ಕಲಾವಿದರು ಕೊಡುಗೆ ನೀಡಿದ್ದಾರೆ. ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕು ಕಲಾವಿದರ ಬೀಡಾಗಿದ್ದು ಬಹಳಷ್ಟು ನಾಟಕಗಳನ್ನು ಅಭಿನಯಿಸಿ ರಂಗ ಕಲೆಯನ್ನ ಜೀವಂತಗೊಳಿಸಿದ್ದಾರೆ ಎಂದರು.

ರಂಗಭೂಮಿ ಕಲಾವಿದರಾದ ಎನ್.ಚಿತ್ರಚಿತ್ ಯಾದವ್, ಕಳವಿಭಾಗಿ ಆರ್.ರಂಗನಾಥ್, ಪಿ.ತಿಮ್ಮಯ್ಯ ಬ್ಯಾಡರಹಳ್ಳಿ, ಸಿ.ಪರಮೇಶ್ವರಪ್ಪ ಮಸ್ಕಲ್, ಡಿ.ನಟರಾಜು ಮದ್ದನಕುಂಟೆ, ಟಿ.ಪಾಂಡುರಂಗಪ್ಪ, ಹರಿಯಬ್ಬೆ ಆನಂದಪ್ಪ, ರಾಜಪ್ಪ ಮಸ್ಕಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ನಿಜಲಿಂಗಪ್ಪ, ಕಾರ್ಯದರ್ಶಿ ಬಿ.ಟಿ.ಶಂಕರ್ ಲಿಂಗಯ್ಯ, ಹಾರ್ಮೋನಿಯಂ ವಾದಕ ಎಸ್. ಶಿವಲಿಂಗಪ್ಪ, ತಬಲ ವಾದಕರಾದ ವೈ .ಶಿವಲಿಂಗಪ್ಪ, ಸಿ .ಶ್ರೀನಿವಾಸ್, ಬಿ.ಟಿ ಕುಮಾರಪ್ಪ,ಎಸ್. ರುದ್ರಯ್ಯ, ಡಿ.ದಾಸಪ್ಪ, ಪುಟ್ಟೀರಜ್ಜ,ಲಕ್ಷ್ಮಿಕಾಂತ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರೂರು-ಬಾರಂಗಿ ಸಮಸ್ಯೆ: ನಾಳೆ ಬಿಜೆಪಿ ಪಾದಯಾತ್ರೆ
ಶನಿವಾರಸಂತೆ ಶ್ರದ್ಧಾಭಕ್ತಿಯ ಶ್ರೀರಾಮನವಮಿ