ಉತ್ತಮ ಸಮಾಜ ನಿರ್ಮಾಣಕ್ಕೆ ರಂಗಕಲೆ ಸಹಕಾರಿ

KannadaprabhaNewsNetwork | Published : May 4, 2024 12:31 AM

ಸಾರಾಂಶ

ನಾಟಕದಲ್ಲಿ ಕಲಾವಿದರು ಸಮಾಜದಲ್ಲಿರುವ ಎಲ್ಲ ಪಾತ್ರಗಳನ್ನು ಅಭಿನಯಿಸುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ರಂಗದ ಮೇಲೆ ತಮ್ಮ ಪಾತ್ರದ ಮೂಲಕ ಅಭಿನಯಿಸಿ ಜನರಿಗೆ ಉತ್ತಮ ಸಂದೇಶ ನೀಡಲಾಗುತ್ತದೆ.

ಮರಿಯಮ್ಮನಹಳ್ಳಿ: ರಂಗಕಲೆಯು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ವಕೀಲ ಹಾಗೂ ಲಲಿತ ಕಲಾರಂಗದ ಕಾರ್ಯದರ್ಶಿ ಜಿ.ಎಂ. ಕೊಟ್ರೇಶ್‌ ಹೇಳಿದರು.

ಇಲ್ಲಿನ ದುರ್ಗಾದಾಸ ರಂಗಮಂದಿರದಲ್ಲಿ ರಂಗಚೇತನ ಕಲಾ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆದ ಮಸ್ತ್ ಮಜಾ ಮಕ್ಕಳ ರಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ನಾಟಕದಲ್ಲಿ ಕಲಾವಿದರು ಸಮಾಜದಲ್ಲಿರುವ ಎಲ್ಲ ಪಾತ್ರಗಳನ್ನು ಅಭಿನಯಿಸುವ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ರಂಗದ ಮೇಲೆ ತಮ್ಮ ಪಾತ್ರದ ಮೂಲಕ ಅಭಿನಯಿಸಿ ಜನರಿಗೆ ಉತ್ತಮ ಸಂದೇಶ ನೀಡಲಾಗುತ್ತದೆ. ಪಠ್ಯದ ಜೊತೆಗೆ ಸಾಂಸ್ಕೃತಿಕ ರಂಗ ಚಟುವಟಿಕೆಗಳಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರದ ಮೂಲಕ ತೊಡಗಿಸಿ ಉತ್ತಮ ಕಲಾವಿದರನ್ನಾಗಿ ರೂಪಿಸಬೇಕು ಎಂದು ಅವರು ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಾತಾ ಬಿ. ಮಂಜಮ್ಮ ಜೋಗತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಕಲೆ ನಿತ್ಯ ನೂತನವಾಗಿರುತ್ತದೆ. ಎಲ್ಲ ಕಾಲದ ಆತಂಕಗಳಿಗೂ ಉತ್ತರ ಕಂಡುಕೊಳ್ಳುವ ಶಕ್ತಿ ರಂಗಭೂಮಿಗೆ ಇದೆ. ಶಿಕ್ಷಣದ ಜೊತೆ ಮಕ್ಕಳಿಗೆ ಸೃಜನಾತ್ಮಕ ರಂಗ ಶಿಕ್ಷಣದ ಅಗತ್ಯವಿದೆ. ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಇಂದಿನ ಮಕ್ಕಳು, ಯುವಕರ ಎಲ್ಲರೂ ಮೊಬೈಲ್ ದಾಸರಾಗುತ್ತಿದ್ದಾರೆ. ಇಂತಹ ರಂಗಕಲೆಯಲ್ಲಿ ಪಾಲ್ಗೊಳ್ಳುವುದು ವಿರಳವಾಗುತ್ತಿದೆ. ಇದು ಬೇಸರದ ಸಂಗತಿಯಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ರಂಗಕಲೆ ಸಹಕಾರಿಯಾಗಿದೆ ಎಂದರು.

ಲಲಿತ ಕಲಾರಂಗದ ಅಧ್ಯಕ್ಷ ಎಚ್‌.ಮಂಜುನಾಥ, ಪಪಂ ಸದಸ್ಯರಾದ ಕೆ.ಮಂಜುನಾಥ, ರಂಗಚೇತನ ಕಲಾ ಟ್ರಸ್ಟ್‌ ನ ಅಧ್ಯಕ್ಷ ಯೋಗೇಶ್‌ ಸಭೆಯಲ್ಲಿ ಉಪಸ್ಥಿತರಿದ್ದರು.

ರಂಗ ನಿರ್ದೇಶಕ ಬಿ.ಎಂ.ಎಸ್‌. ಪ್ರಭು ಸ್ವಾಗತಿಸಿ, ನಿರೂಪಿಸಿದರು. ನಂತರ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಂದ ನೃತ್ಯ, ನಾಟಕ ಪ್ರದರ್ಶನಗೊಂಡಿತು.

Share this article