ಬಳ್ಳಾರಿ: ಹೊಸ ಆಲೋಚನೆಗಳು, ಸಾಮಾಜಿಕ ಸಂದೇಶಗಳು, ಸಾಂಸ್ಕೃತಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ರಂಗಭೂಮಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹಿರಿಯ ಬಯಲಾಟ ಕಲಾವಿದೆ ಉಷಾರಾಣಿ ತಿಳಿಸಿದರು.
ಇತ್ತೀಚೆಗೆ ಯುವ ಕಲಾವಿದರು, ನಾಟಕ ತಂಡಗಳು ನವೀನ ವಿಷಯಗಳನ್ನು ಆಧರಿಸಿಕೊಂಡು ಪ್ರಾಯೋಗಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದು, ಪ್ರೇಕ್ಷಕರ ಮನಸ್ಸಿನಲ್ಲಿ ಹೊಸ ಚಿಂತನೆಗಳನ್ನು ಮೂಡಿಸುತ್ತಿವೆ ಎಂದರು.
ಇದೇ ವೇಳೆ ಉಷಾರಾಣಿ ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಯುವ ರಂಗ ಸಂಶೋಧಕ ಜೆ.ದಿವಾಕರ, ರಂಗಭೂಮಿಗೂ ಶಿಕ್ಷಣಕ್ಕೂ ಅವಿನಾಭಾವ ಸಂಬಂಧವಿದೆ. ರಂಗಭೂಮಿ ಅಕ್ಷರಸ್ಥರಿಗೂ ಮತ್ತು ಅನಕ್ಷರಸ್ಥರಿಗೂ ಏಕಕಾಲದಲ್ಲಿ ಅರಿವು ಉಂಟು ಮಾಡುವ ವಿಶಿಷ್ಟ ಮಾಧ್ಯಮವಾಗಿದೆ. ರಂಗಭೂಮಿಯಲ್ಲಿ ಆಂಗಿಕ ಮತ್ತು ವಾಚನ ಭಾಷೆಯಿದೆ. ವಿದ್ಯಾರ್ಥಿಗಳು ಸಂವಹನ ಕಲೆಯನ್ನು ರಂಗಭೂಮಿಯ ಮೂಲಕ ಕರಗತ ಮಾಡಿಕೊಳ್ಳಬಹುದು ಎಂದು ವಿಶ್ಲೇಷಿಸಿದರು.
ರಂಗಭೂಮಿ ಪ್ರಧಾನವಾಗಿ ತೊಡಗಿಸಿಕೊಳ್ಳುವಿಕೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕಲೆ ಹಾಗೂ ಸಹಭಾಗಿತ್ವವನ್ನು ಕಲಿಸಿಕೊಡುತ್ತದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹುಚ್ಚೂಸಾಬ್ ಸಂಡೂರು ಸಮಾಜದಲ್ಲಿರುವ ನ್ಯೂನತೆಗಳನ್ನು ಸರಿಪಡಿಸುತ್ತ, ಸಮಸ್ಯೆಗಳ ಬಗೆಗೆ ಹೊಸ ಪ್ರಜ್ಞೆಯನ್ನು ಹುಟ್ಟು ಹಾಕುವ ರಂಗಭೂಮಿಗೆ ಎಂದಿಗೂ ಸಾವಿಲ್ಲ. ಕಾಲಕ್ಕೆ ತಕ್ಕ ಹಾಗೆ ಅನೇಕ ಪಲ್ಲಟಗಳನ್ನು ಹೊಂದಿ ಬೆಳೆಯುತ್ತಿದೆ ಎನ್ನುವುದಕ್ಕೆ ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳೇ ಜೀವಂತ ಸಾಕ್ಷಿ ಎಂದರು. ನಾಟಕ ವಿಭಾಗದ ಅತಿಥಿ ಉಪನ್ಯಾಸಕ ಆರ್.ಪಿ. ಮಂಜುನಾಥ ಹಾಗೂ ಉಪನ್ಯಾಸಕ ಹನುಮಂತರಾಯ ಉಪಸ್ಥಿತರಿದ್ದರು.