ಕನ್ನಡಪ್ರಭ ವಾರ್ತೆ, ತುಮಕೂರುರಂಗಭೂಮಿ ಎಂಬುದು ಗಂಧರ್ವ ಕಲೆಯಾಗಿದೆ ಎಂದು ಸಮಾಜ ಸೇವಕ ಎಸ್.ಟಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.ಅವರು ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಸಂಶೋಧನಾ ಸಂಸ್ಥೆ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ತುಮಕೂರು ವಿವಿ ಮುಂಭಾಗ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೀದಿಯ ನಡುವೆ ತಾವೇ ತಯಾರಿಸಿದ ಚೌಕಟ್ಟಿನಲ್ಲಿ ನಟರು ಕುಳಿತುಕೊಳ್ಳುವರು. ತಮ್ಮ ಸರದಿ ಬಂದಾಗ ಎದ್ದು ನಟಿಸುವರು. ನಾಲ್ಕು ಕಡೆ ಬೀದಿಯ ಹಾದಿ ಹೋಕರೆ ಪ್ರೇಕ್ಷಕರಾಗಿ ನಿಂತಿರುತ್ತಾರೆ. ಹಾಡುಗಳು, ಭಾಷಣ, ಮೊದಲಾದವನ್ನು ಅನೇಕ ತಂತ್ರಗಳ ಸಹಾಯದಿಂದ ಪ್ರತಿಪಾದಿಸಲಾಗುತ್ತದೆ. ಸಮಾಜದಲ್ಲಿನ ಜನ ಜೀವನಕ್ಕೆ ಜೀವಂತವಾಗಿ ಪ್ರತಿಸ್ಪಂದಿಸುವುದೇ ಬೀದಿ ನಾಟಕದ ಮುಖ್ಯ ಗುರಿ. ಹಲವಾರು ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಲವಾರು ಕಥಾ ಹಂದರಗಳನ್ನು ಇಟ್ಟುಕೊಂಡು ಬೀದಿ ನಾಟಕವನ್ನು ಆಯೋಜಿಸುತ್ತಾ ಬರಲಾಗಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಿಕ್ಕಪ್ಪಯ್ಯ ಮಾತನಾಡಿ, ಬೀದಿ ನಾಟಕವೆಂಬುದು ಸತ್ವಯುತ ಅಸ್ತ್ರವಿದ್ದಂತೆ. ಸಮಾಜವನ್ನು ತಿದ್ದುವ, ಪ್ರಭುತ್ವವನ್ನು ಪ್ರಶ್ನಿಸುವ ಮೂಲಕ ಬೀದಿ ನಾಟಕಗಳು ಚಾಟಿ ಬೀಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಿಕ್ಕ ಹನುಮಂತಯ್ಯ ಮಾತನಾಡಿ, ಅನ್ಯಾಯ, ಶೋಷಣೆ, ಸಮಾಜದ ಅನಿಷ್ಟ ಪದ್ಧತಿ, ಪರಂಪರೆಗಳನ್ನು ವಿಮರ್ಶೆ, ವಿಶ್ಲೇಷಣೆಗೆ ಒಳಪಡಿಸುವ, ಜನರನ್ನು ಆ ವಿಷಯಗಳ ಬಗ್ಗೆ ಚಿಂತಿಸುವಂತೆ ಬೀದಿ ನಾಟಕ ಮಾಡುತ್ತದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ನಾಟಕ ಅಕಾಡೆಮಿ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಾಸ್ಯ ಬ್ರಹ್ಮ ನರಸಿಂಹರಾಜು ನಾಟಕ, ಸಿದ್ಧಗಂಗಾ ಮಠದಲ್ಲಿ ಶರಣರ ನಾಟಕ, ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ನಾಟಕೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು. ರಂಗಕರ್ಮಿ ಎಸ್.ಎ. ಖಾನ್ ರಂಗಸಂದೇಶ ವಾಚಿಸಿದರು. ಬಳಿಕ ತುಮಕೂರು ವಿವಿ ಡಿವಿಜಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಡಾ. ಅಣ್ಣಮ್ಮ, ನಾಗಭೂಷಣ ಬಗ್ಗನಡು ಪಾಲ್ಗೊಂಡಿದ್ದರು. ಸಾಲು ಮರದ ತಿಮ್ಮಕ ಸಾಂಸ್ಕೃತಿಕ ಬಳಗದಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.