ಹಳಿಯಾಳ:
ಗ್ರಾಹಕರ ಸೊಗಿನಲ್ಲಿ ಬಂಗಾರ ಖರೀದಿಸುವ ನೆಪ ಮಾಡಿಕೊಂಡು ಬಂದ ಮಹಿಳೆಯರ ತಂಡವೊಂದು ಪಟ್ಟಣದ ಚಿಣ್ಣದ ಅಂಗಡಿಯೊಂದರಲ್ಲಿ ಅಂದಾಜು 416 ಗ್ರಾಂ ಚಿನ್ನದ ಆಭರಣ ಕಳವು ಮಾಡಿ ಪರಾರಿಯಾದ ಘಟನೆ ಸಂಭವಿಸಿದೆ. ಈ ಕುರಿತು ಹಳಿಯಾಳ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.ಭಾನುವಾರ ಸಂತೆಯ ದಿನ ಮಧ್ಯಾಹ್ನ ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದ ವಾಣಿಜ್ಯ ಮಳಿಗೆಯಲ್ಲಿನ ಪ್ರಕಾಶ ಗಡಾದ ಮಾಲಿಕತ್ವದ ಜ್ಯೋತಿ ಜ್ಯುವೆಲ್ಲರಿ, ಅಂಗಡಿಗೆ ಬಂಗಾರ ಖರೀದಿಸುವ ನೆಪದಲ್ಲಿ ಬಂದ ಬೂರ್ಖಾ ಧರಿಸಿದ ಮೂವರು ಮಹಿಳೆಯರು ಮತ್ತು ಮಾಸ್ಕ್ ಧರಿಸಿದ ಓರ್ವ ಯುವಕ ಅಂಗಡಿ ಮಾಲಿಕನ ಗಮನವನ್ನು ಬೇರೆಡೆ ಸೆಳೆದು ಅಂಗಡಿ ಕೌಂಟರನಲ್ಲಿದ್ದ 366 ಗ್ರಾಂ ಚಿನ್ನಾಭರಣ ಹಾಗೂ ಬೇರೆ ಗ್ರಾಹಕರು ದುರಸ್ತಿಗಾಗಿ ನೀಡಿದ 50 ಗ್ರಾಂ ಚಿನ್ನ ಸೇರಿದಂತೆ ಒಟ್ಟು 416 ಗ್ರಾಂ ಚಿನ್ನ ಕದ್ದು ಅಂಗಡಿಯಿಂದ ಹೊರನಡೆದಿದ್ದಾರೆ.
ಬಹುಹೊತ್ತಿನ ನಂತರ ಅಂಗಡಿಯ ಮಾಲಿಕ ಅನುಮಾನಗೊಂಡು ಕೌಂಟರ್ ಕೆಳಭಾಗದಲ್ಲಿ ಚಿನ್ನಾಭರಣ ತುಂಬಿದ ಡಬ್ಬವನ್ನು ಮಾಯವಾಗಿದ್ದನ್ನು ಕಂಡು ಹುಡುಕಾಡಿದ್ದಾನೆ, ತಕ್ಷಣ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿನ್ನಾಭರಣ ತುಂಬಿದ ಡಬ್ಬ ಕಳುವು ಮಾಡುವ ದೃಶ್ಯ ಸೆರೆಯಾಗಿದೆ. ಕಳುವಾದ ಬಂಗಾರದ ಒಟ್ಟು ಮೌಲ್ಯವು ₹ 22 ಲಕ್ಷಕ್ಕಿಂತ ಅಧಿಕವೆಂದು ಹೇಳಲಾಗುತ್ತಿದೆ.ತಕ್ಷಣ ಠಾಣೆಗೆ ಧಾವಿಸಿದ ಅಂಗಡಿ ಮಾಲಿಕ ನಡೆದ ಘಟನೆಯನ್ನು ಪೊಲೀಸರ ಗಮನಕ್ಕ ತಂದು ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಹಳಿಯಾಳ ಸಿಪಿಐ ಜೈಪಾಲ ಪಾಟೀಲ, ಪಿಎಸ್ಐ ಮಹಾಂತೇಶ ಕುಂಬಾರ, ಅಪರಾಧ ವಿಭಾಗದ ಪಿಎಸೈ ಅಮಿನ ಅತ್ತಾರ ಹಾಗೂ ಎಎಸ್ಐ ಪರಶುರಾಮ ಸೊಲ್ಲಾಪುರ ಅವರನ್ನೊಳಗೊಂಡ ತಂಡವು ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿತು.