ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಹೇಮಾವತಿ ಕ್ರೀಡಾಂಗಣದಲ್ಲಿ ಶನಿವಾರ ಮುಂಜಾನೆ ವಾಕಿಂಗ್ ಮಾಡುವರಿಗೆ ಒಳಾಂಗಣ ಕ್ರೀಡಾಂಗಣದ ಕಟ್ಟಡದ ಸುತ್ತಲಿನ ಕಿಟಕಿಗಳಿಗೆ ಪಿವಿಸಿ ಫ್ರೇಮ್‌ಗಳಲ್ಲಿ ಕಟ್ಟಡದ ಅಂದವಾಗಿಸುವ ಗಾಜುಗಳನ್ನು ಅಳವಡಿಸಲಾಗಿತ್ತು, ಆದರೆ ಕಳ್ಳರು ಕಟ್ಟಡದ ಸುತ್ತಮುತ್ತಲಿನ ಕಿಟಕಿಗಳ ಪಿವಿಸಿ ಫ್ರೇಮ್‌ಗಳ ಸಮೇತ ಗಾಜುಗಳನ್ನು ಕದ್ದೊಯ್ದಿದ್ದಾರೆ.
೪.೫ ಕೋಟಿ ರು. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ, ಒಳಗೆ ಕ್ರೀಡಾ ಸವಲತ್ತು ನೀಡಲು ಇನ್ನೂ ೩ ಕೋಟಿ ರು.ನಷ್ಟು ಅನುದಾನದ ನಿರೀಕ್ಷಿಸಲಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ ಕೇಂದ್ರ ಸರಕಾರದ ಅನುದಾನ ಕೋರಲಾಗಿದೆ. ಜತೆಗೆ ಇದೇ ನಿರೀಕ್ಷೆಯಲ್ಲಿ ಕಳೆದ ೬ ವರ್ಷಗಳಿಂದ ಉದ್ಘಾಟನೆಯಾಗದೇ ಒಳಾಂಗಣ ಕ್ರೀಡಾಂಗಣ ಹಾಗೇ ಉಳಿದಿದೆ. ಇದರ ಜತೆಗೆ ಕಿಟಕಿಗಳ ಕಳ್ಳತನದಿಂದಾಗಿ ಕಟ್ಟಡಕ್ಕೆ ಭದ್ರತೆಯ ಪ್ರಶ್ನೆ ಎದ್ದಿದೆ. ಕ್ರೀಡಾಂಗಣ ನಿರ್ಮಾಣದ ಹೊಣೆಗಾರಿಕೆ ಲೋಕೋಪಯೋಗಿ ಇಲಾಖೆಯದಾಗಿದ್ದರೂ ಕೋಟಿಗಟ್ಟಲೆ ಅನುದಾನ ಬಳಸಿ ನಿರ್ಮಿಸಿರುವ ಕಟ್ಟಡ ರಕ್ಷಣೆಗಾಗಿ ವಾಚಕರನ್ನೂ ನೇಮಿಸಿಲ್ಲದಿರುವುದು ವಿಪರ್ಯಾಸವಾಗಿದೆ. ಕಳ್ಳತನದ ಬಗ್ಗೆ ವಿಚಾರಿಸಲು ಪಿಡ್ಬ್ಲೂಡಿ ಕಚೇರಿ ನಾಲ್ಕನೇ ಶನಿವಾರದ ರಜೆ ಇದೆ. ಎಇಇ ರುಕ್ಮಾಂಗದ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಗುತ್ತಿಗೆ ನಿರ್ವಹಿಸಿ ಬಿಲ್ ಪಡೆದಿರುವ ಸಾದಿಕ್ ಎಂಬುವರು ಟೆಂಡರ್‌ನಲ್ಲಿ ಪಡೆದಿದ್ದ ಗುತ್ತಿಗೆ ಕಾಮಗಾರಿ ಮುಗಿಸಿದ್ದೇನೆ. ದೂರು ನೀಡಬೇಕಿರುವುದು ಪಿಡಬ್ಲ್ಯೂಡಿ ಅಧಿಕಾರಿಗಳ ಜವಾಬ್ದಾರಿ ಎಂದಿದ್ದಾರೆ.