ವಿವಿಧೆಡೆ ಕಳವು: ನಗದು, ಚಿನ್ನ, ಬೆಳ್ಳಿ ವಶ

KannadaprabhaNewsNetwork |  
Published : Apr 13, 2026, 02:15 AM IST
 | Kannada Prabha

ಸಾರಾಂಶ

2025- 26ರಲ್ಲಿ ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲಿಸ್ ಇಲಾಖೆ 6.09 ಲಕ್ಷ ರು. ನಗದು, 228.29 ಗ್ರಾಂ ಚಿನ್ನ, 2.422 ಕೆ.ಜಿ. ಬೆಳ್ಳಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

2025- 26ರಲ್ಲಿ ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲಿಸ್ ಇಲಾಖೆ 6.09 ಲಕ್ಷ ರು. ನಗದು, 228.29 ಗ್ರಾಂ ಚಿನ್ನ, 2.422 ಕೆ.ಜಿ. ಬೆಳ್ಳಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಎಫ್‌ಎಂಸಿ ಕಾಲೇಜು ಹಿಂಭಾಗದ ಬಡಾವಣೆಯಲ್ಲಿ ವಾಸವಿದ್ದ ಡಾ. ಪಾರ್ಥಸಾರಥಿ ಎಂಬವರ ಮನೆಯಲ್ಲಿ 80 ಗ್ರಾಂ ತೂಕದ ಚಿನ್ನಾಭರಣ ಹಾಗೂ 5,50,000 ರು. ನಗದು ಕಳವು ಪ್ರಕರಣವು 28 - 02- 2026ರಂದು ದಾಖಲಾಗಿತ್ತು. ಪ್ರಕರಣದ ಹಿನ್ನೆಲೆ ತನಿಖೆ ನಡೆಸಿದ ಸಂದರ್ಭ ಡಾ. ಪಾರ್ಥಸಾರಥಿ ಅವರ ಮನೆಯಲ್ಲೇ ಇದ್ದ ಕೇರ್ ಟೇಕರ್ ಕೊಪ್ಪಳ ಜಿಲ್ಲೆ ಮೂಲದ ಮಹಂತೇಶ ಪೂಜಾರ(27) (ಭದ್ರಪ್ಪ ಬಸಪ್ಪ) ಎಂಬಾತನನ್ನು ಬಂಧಿಸಿ 5,09,000 ರು. ನಗದು, 137 ಗ್ರಾಂ ಚಿನ್ನಾಭಾರಣ, 1 ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಕರಣ 2:

ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೀಳೂರು ಗ್ರಾಮದಲ್ಲಿನ ಆದೇಂಗಡ ಕುಟುಂಬದ ಐನ್‌ಮನೆಯಲ್ಲಿ ಪೊನ್ನಪ್ಪಸಂತೆಯ ಕಲ್ಲುಗುಡ್ಡೆ ಈಶ್ವರ ದೇವಸ್ಥಾನದ ಪಾರಂಪರಿಕ ಚಿನ್ನ ಮತ್ತು ಬೆಳ್ಳಿಯ ಆಭರಣಗಳು 23- 2 - 2026ರಂದು ಕಳವಾಗಿತ್ತು. ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಿ 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ 50,700 ರು. ನಗದು, 2.422 ಕೆ.ಜಿ. ಬೆಳ್ಳಿ, 5.5 ಗ್ರಾಂ ಚಿನ್ನ, ದ್ವಿಚಕ್ರ ವಾಹನ, 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ 3:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಚಿನ್ನಾಭರಣ, ಕಾಫಿ ಹಾಗೂ ಎರಡು ಕಾರು ಕಳವು ಮಾಡಿರುವ ಕುರಿತು 3 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ 63.19 ಗ್ರಾಂ ಚಿನ್ನ, 6495 ಕೆಜಿ ಕಾಫಿ, ಟೋಯೋಟಾ ಇಟೋಸ್, ಹುಂಡೈ ಐ 20 ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ 4:

ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಚಿನ್ನಾಭರಣ ಹಾಗೂ ಕಾಫಿ ಮತ್ತು ಕಾಳುಮೆಣಸು ಕಳವು ಕುರಿತು 4 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿತರಿಂದ 22.60 ಗ್ರಾಂ ಚಿನ್ನ, 5 ಚೀಲ ಪಾರ್ಚ್‌ಮೆಂಟ್ ಕಾಫಿ, 50,000 ರು. ನಗದು, 75 ಕೆ.ಜಿ ಕಾಳುಮೆಣಸು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

54 ಮೊಬೈಲ್ ಪತ್ತೆ:

ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿರುವ 54 ಮೊಬೈಲ್‌ಗಳನ್ನು ಸೈಬರ್ ಕ್ರೈಂ ಪೊಲೀಸರು \ಪತ್ತೆ ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭ 2025- 26ರಲ್ಲಿ ಜಿಲ್ಲೆಯ ವಿವಿಧೆಡೆ ನಡೆದ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರೀಸುದಾರರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಿಂದಿರುಗಿಸಲಾಯಿತು. ವಿವಿಧ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಮಾಡಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್‍ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್‌ಪಿ ಶ್ಲಾಘಿಸಿದರು.

ಈ ಸಂದರ್ಭ ಮಡಿಕೇರಿ ವೃತ್ತ ನಿರೀಕ್ಷಕ ರಾಜು, ಡಿವೈಎಸ್‌ಪಿ ಮಹೇಶ್, ಡಿವೈಎಸ್‌ಪಿ ಸೂರಜ್, ಅಪರಾಧ ಪತ್ತೆ ವಿಭಾಗದ ವೃತ್ತನಿರೀಕ್ಷರಾದ ಮೇದಪ್ಪ ಹಾಗೂ ಅಧಿಕಾರಿ, ಸಿಬ್ಬಂದಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಸುಬ್ರಹ್ಮಣ್ಯ ಶ್ರೀ
ಕಾರ್ಕಳ: 19ರಂದು ಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ