ಸಾಧನೆಗೆ ಸಮಸ್ಯೆಗಳು ಹೆಚ್ಚು: ಸಹಾಯಕ ಪ್ರಾಧ್ಯಾಪಕ ಶಂಕ್ರಯ್ಯ

KannadaprabhaNewsNetwork | Published : Mar 27, 2025 1:02 AM

ಸಾರಾಂಶ

ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದ್ದು ಆತ್ಮವಿಶ್ವಾಸದಿಂದ ಚೆನ್ನಾಗಿ ಓದಿ ಬದುಕು ಕಟ್ಟಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ತಾಳ್ಮೆ ಮತ್ತು ಇಚ್ಛಾಶಕ್ತಿ ಇರಬೇಕು. ಆಗ ಮಾತ್ರ ಉದ್ಯೋಗ ಪಡೆದುಕೊಳ್ಳಬಹುದು.

ಕೊಪ್ಪಳ:

ಸಾಧನೆಗೆ ಸಮಸ್ಯೆಗಳು ಹೆಚ್ಚು. ಅದರಿಂದ ಹಿಂದೇ ಸರಿಯದೆ ಅವುಗಳನ್ನು ದಾಟಿ ಮುನ್ನುಗ್ಗಬೇಕು ಎಂದು ಸಹಾಯಕ ಪ್ರಾಧ್ಯಾಪಕ ಶಂಕ್ರಯ್ಯ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಐಕ್ಯೂಎಸಿ ಮತ್ತು ಪ್ರೇರಣಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೇರಣಾ ಮೆಂಟರ್ ಶಿಪ್ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಹೆಚ್ಚು ಕಲಿತವರಿಗೆ ಹೆಚ್ಚು ಕೌಶಲ್ಯ ಇರುತ್ತವೆ ಎಂದರು.

ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದ್ದು ಆತ್ಮವಿಶ್ವಾಸದಿಂದ ಚೆನ್ನಾಗಿ ಓದಿ ಬದುಕು ಕಟ್ಟಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಲ್ಲಿ ತಾಳ್ಮೆ ಮತ್ತು ಇಚ್ಛಾಶಕ್ತಿ ಇರಬೇಕು. ಆಗ ಮಾತ್ರ ಉದ್ಯೋಗ ಪಡೆದುಕೊಳ್ಳಬಹುದು. ನಿಮ್ಮಲ್ಲಿ ನಿರಂತರ ಪ್ರಯತ್ನ ಮತ್ತು ಛಲ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರೇರಣಾ ಘಟಕದ ಸಂಚಾಲಕ ವಿಠೋಬ ಎಸ್. ಮಾತನಾಡಿ, ಪ್ರೇರಣಾ ಮೆಂಟರ್ ಶಿಪ್‌ ಮೂಲಕ ಸಂವಹನ ಕಲೆ, ಸಂಶೋಧನೆ, ಉದ್ಯೋಗದ ಕೌಶಲ್ಯ ಕಲಿಯಬಹುದು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಕುಂದು-ಕೊರತೆ ಗುರುತಿಸಿ ಅವುಗಳನ್ನು ಬಗೆಹರಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾನಸಿಕ ಮತ್ತು ಬೌದ್ಧಿಕವಾಗಿ ಎದುರಿಸುವುದು ಹೇಗೆ ಎಂಬುದನ್ನು ತಿಳಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಗಣಪತಿ ಲಮಾಣಿ, ಪದವಿ ಮುಗಿದ ನಂತರ ಏನು ಓದಬೇಕು, ಯಾವ ಪರೀಕ್ಷೆ ಬರೆಯಬೇಕು ಎಂಬುದನ್ನು ಈಗನಿಂದಲೇ ತಿಳಿದುಕೊಳ್ಳಬೇಕು. ಇದು ಸ್ಪರ್ಧಾತ್ಮಕ ಯುಗ. ನೀವು ಈಗನಿಂದಲೇ ಜ್ಞಾನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೊಪ್ಪಳದ ಮಾರ್ಗದರ್ಶಿ ಸ್ಟಡಿ ಸರ್ಕಲ್‌ನ ಗೌರವ ಮಾರ್ಗದರ್ಶಕ ಶರಣಯ್ಯ ಅಬಿಗೇರಮಠ, ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಅಶೋಕಕುಮಾರ, ಡಾ. ಪ್ರದೀಪಕುಮಾರ, ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಸುಮಿತ್ರಾ, ಉಮಾದೇವಿ ಮತ್ತು ಉಮೇಶ ಕಾತರಕಿ ಉಪಸ್ಥಿತರಿದ್ದರು. ನೇತ್ರಾವತಿ ನಿರೂಪಿಸಿದರು. ಸಹನಾ ವಂದಿಸಿದರು, ಮಹಾದೇವಿ ಪ್ರಾರ್ಥಿಸಿದರೆ ತಸ್ಲೀಫ್ ಸ್ವಾಗತಿಸಿದರು.

Share this article