ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳದ್ದೇ ದರ್ಬಾರ!

KannadaprabhaNewsNetwork |  
Published : Sep 06, 2024, 01:01 AM IST
ಬೈಲಹೊಂಗಲ ಪಟ್ಟಣದಿಂದ ಅಳ್ನಾವರ-ಬೆಟಗೇರಿ ರಸ್ತೆ (ಮುರಗೋಡ ರಸ್ತೆ) ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿರುವುದು. | Kannada Prabha

ಸಾರಾಂಶ

ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿಪಡಿಸಿದ ಅಳ್ನಾವರ-ಬೆಟಗೇರಿ ರಾಜ್ಯ ಹೆದ್ದಾರಿ ಮುರಗೋಡವರೆಗೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಸಂಚಾರಕ್ಕೆ ಸರ್ಕಸ್‌ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸವಾರರು ಅಧಿಕಾರಿಗಳ ವಿರುದ್ಧ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಅಭಿವೃದ್ಧಿಪಡಿಸಿದ ಅಳ್ನಾವರ-ಬೆಟಗೇರಿ ರಾಜ್ಯ ಹೆದ್ದಾರಿ ಮುರಗೋಡವರೆಗೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಸಂಚಾರಕ್ಕೆ ಸರ್ಕಸ್‌ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸವಾರರು ಅಧಿಕಾರಿಗಳ ವಿರುದ್ಧ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.2018-19ನೇ ಸಾಲಿನ ಅಪೆಂಡಿಕ್ಸ್ ಇ ಯೋಜನೆಯಡಿ ₹17 ಕೋಟಿ ವೆಚ್ಚದಲ್ಲಿ 10.09 ಕಿಮೀ ರಸ್ತೆಯನ್ನು ಸುಮಾರು 3 ಹಂತದಲ್ಲಿ ನಿರ್ಮಿಸಲಾಗಿತ್ತು. ಪ್ರಾರಂಭದ ಹಂತದಲ್ಲಿಯೇ ಕಾಮಗಾರಿ ಕಳಪೆಯಾಗಿರುವ ಕುರಿತು ನಾಗರಿಕರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿ, ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ.

ರಸ್ತೆ ನಿರ್ಮಾಣವಾದ 4-5 ವರ್ಷಗಳಲ್ಲಿಯೇ ಅಲ್ಲಲ್ಲಿ ತೆಗ್ಗು-ದಿಣ್ಣೆ, ಹೊಂಡಗಳು ನಿರ್ಮಾಣಗೊಂಡಿವೆ. ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ಮಧ್ಯೆ ಭಾಗದಲ್ಲೇ ಗುಂಡಿಗಳು ನಿರ್ಮಾಣವಾಗಿದ್ದು, ಗುಂಡಿಯಲ್ಲಿ ಮಳೆನೀರು ನಿಲ್ಲುವುದರಿಂದ ವಾಹನ ಸವಾರರಿಗೆ ಗುಂಡಿಯ ಆಳದ ಬಗ್ಗೆ ಗೊತ್ತಾಗುವುದೇ ಇಲ್ಲ. ವೇಗವಾಗಿ ಸಂಚರಿಸುವ ವಾಹನಗಳು ದಿಢೀರ್‌ ತೆಗ್ಗು ಎದುರಾಗುವುದರಿಂದ ತಪ್ಪಿಸಲು ಹೋಗಿ ಅನೇಕ ಬಾರಿ ಅಪಘಾತಗಳಾಗಿರುವುದು ಉಂಟು. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ವಾಹನ ಚಲಾಯಿಸಬೇಕಾಗಿದೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿದರೇ ಪ್ರಾಣಕ್ಕೆ ಕುತ್ತು ಬರೋದು ಗ್ಯಾರಂಟಿ. ಈ ಕುರಿತು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಪ್ರಶ್ನಿಸಿದರೇ ಬೇಜವಾಬ್ದಾರಿ ಉತ್ತರ ನೀಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.ರಸ್ತೆ ಡಾಂಬರೀಕರಣ ಸಾಧ್ಯವಾಗದಿದ್ದರೂ ಕನಿಷ್ಠಪಕ್ಷ ಪ್ಯಾಚ್‌ ವರ್ಕ್‌ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದ್ದ ಇಲಾಖೆ ಉದಾಸೀನತೆ ತೋರುತ್ತಿದೆ. ಅಲ್ಲದೇ ರಸ್ತೆಯ ಎರಡು ಬದಿಯಲ್ಲಿ ನಿರ್ಮಿಸಿದ ಪುಟ್‌ಪಾತ್‌ ಕಸ-ಕಡ್ಡಿಗಳಿಂದ ತುಂಬಿಕೊಂಡಿದ್ದು, ವಾಯುವಿಹಾರಕ್ಕೆ ತೆರಳುವ ನಾಗರಿಕರು ಛೀಮಾರಿ ಹಾಕುತ್ತಿದ್ದಾರೆ. ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕು. ರಸ್ತೆ ಬದಿಯ ಪುಟ್‌ಪಾತ್‌ಗಳನ್ನು ಸ್ವಚ್ಛಗೊಳಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.ಬೈಲಹೊಂಗಲದಿಂದ ಮುರಗೋಡ ಗ್ರಾಮದವರೆಗೆ ರಾಜ್ಯ ಹೆದ್ದಾರಿ ಮಾಡಿದ ಕೆಲವೇ ವರ್ಷಗಳಲ್ಲಿ ಸಂಪೂರ್ಣ ಹಾಳಾಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈ ಕನ್ನಡಿಯಾಗಿದೆ. ಇದರಿಂದ ನಿತ್ಯ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಸಾಲದು ಎಂಬಂತೆ ಆ ತೆಗ್ಗಿನಲ್ಲಿ ಮಣ್ಣು ಹಾಕಿ ಮತ್ತಷ್ಟು ಹಾಳು ಮಾಡುತ್ತಿದ್ದಾರೆ. ರಸ್ತೆ ಮಾಡಿದ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಬೇಕು.

-ಗುಂಡಪ್ಪ ಸನದಿ ನಾಗರಿಕರು, ಬೈಲಹೊಂಗಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ