-ಸೋಮಶೇಖರ್ ಲಾವಿಗೆರೆ ಸ್ಪಷ್ಟನೆ । ರತ್ನಾಕರ ಹೊನಗೋಡು ದುರ್ಬಳಕೆ ಆರೋಪ ಹುರುಳಿಲ್ಲದ್ದು
ಕಾಗೋಡು ತಿಮ್ಮಪ್ಪನವರಿಗೆ ನೀಡಿದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಗಿದೆ ಎಂದು ರತ್ನಾಕರ ಹೊನಗೋಡು ಆರೋಪಿಸುತ್ತಿರುವುದು ಸರಿ ಇಲ್ಲ ಎಂದು ಕಾಗೋಡು ತಿಮ್ಮಪ್ಪ ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೆರೆ ವಾಗ್ದಾಳಿ ನಡೆಸಿದ್ದಾರೆ.
ಅವರು ಕಡ್ಲೆ ಹಂಕ್ಲು ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಗೋಡು ತಿಮ್ಮಪ್ಪನವರಿಗೆ ಆನಂದಪುರದಲ್ಲಿ ನಡೆದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಕೋಟ್ಯಂತರ ಹಣ ದುರ್ಬಳಕೆಯಾಗಿದೆ ಎಂದು ರತ್ನಾಕರ ಹೊನಗೋಡು ಪದೇಪದೇ ಆರೋಪಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಒಟ್ಟು ₹5,81,000 ಸಂಗ್ರಹಕ್ಕೆ ರಶೀದಿ ಹಾಕಲಾಗಿತ್ತು. ಆದರೆ, ರಸೀದಿ ಪಡೆದುಕೊಂಡಿದ್ದ ಕೆಲವರು ಹಣ ಪಾವತಿಸಲು ಸಾಧ್ಯವಾಗದ ಕಾರಣ ₹1,24,000 ಸಂಗ್ರಹವಾಗಿರಲಿಲ್ಲ. ಅಂತಿಮವಾಗಿ 4,57,000 ರು. ಮಾತ್ರ ಸಂಗ್ರಹವಾಗಿತ್ತು.ಕಾರ್ಯಕ್ರಮಕ್ಕೆ ಒಟ್ಟು ₹5,58,000 ವೆಚ್ಚವಾಗಿದ್ದು, ಸಂಗ್ರಹವಾದ ಹಣಕ್ಕಿಂತ ಹೆಚ್ಚುವರಿಯಾಗಿ ಒಂದು ಲಕ್ಷ ಅಧಿಕ ಹಣವನ್ನು ನಮ್ಮ ಸ್ವಂತ ಖರ್ಚಿನಿಂದ ಹಾಗೂ ಕಾರ್ಯಕರ್ತರ ಸಹಕಾರದಿಂದ ಭರಿಸಲಾಗಿದೆ ಎಂದರು.
ನಾವು ನಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಕಾರ್ಯಕ್ರಮ ನಡೆಸಿದ್ದೇವೆ. ಇದರಲ್ಲಿ ಒಂದು ರುಪಾಯಿ ದುರುಪಯೋಗಪಡಿಸಿಕೊಂಡಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿರುವವರಿಗೆ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಪ್ರಧಾನ ಕಾರ್ಯದರ್ಶಿ ಉಮೇಶ್ ಮಾತನಾಡಿ, ಯಾವುದೇ ಆರೋಪ ಮಾಡುವ ಮೊದಲು ಅದರ ಸಾಧಕ-ಬಾಧಕ ಹಾಗೂ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಮಾತನಾಡಬೇಕು. ನಾಗರಿಕ ಸನ್ಮಾನ ಕಾರ್ಯಕ್ರಮದ ಖರ್ಚು-ವೆಚ್ಚದ ಸಂಪೂರ್ಣ ವಿವರಗಳನ್ನು ಯಾರು ಬೇಕಾದರೂ ಬಂದು ಕೇಳಿದರೆ ನೀಡಲು ಸಿದ್ಧರಿದ್ದೇವೆ. ಕಾಗೋಡು ತಿಮ್ಮಪ್ಪ ನಾಗರಿಕ ಸನ್ಮಾನ ವಿಚಾರದಲ್ಲಿ ಅನಗತ್ಯವಾಗಿ ರಾಜಕಾರಣ ಮಾಡುವುದು ಸರಿಯಿಲ್ಲ ಎಂದರು.
ಫೋಟೋ: 4 ಎ, ಎನ್, ಪಿ 1