ಆಸ್ಪತ್ರೆಯಲ್ಲಿ 14 ತಿಂಗಳಿಂದ ಮಕ್ಕಳ ವೈದ್ಯರಿಲ್ಲ!

KannadaprabhaNewsNetwork |  
Published : Nov 04, 2026, 02:00 AM IST
 ರಾಮದುರ್ಗ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಹೊರ ನೋಟ. | Kannada Prabha

ಸಾರಾಂಶ

ಈರಣ್ಣ ಬುಡ್ಡಾಗೋಳಕನ್ನಡಪ್ರಭ ವಾರ್ತೆ ರಾಮದುರ್ಗಸರ್ಕಾರ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡುತ್ತಿದೆ. ಆದರೆ, ರಾಮದುರ್ಗ ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 14 ತಿಂಗಳಿಂದ ಮಕ್ಕಳ ತಜ್ಞ ವೈದ್ಯರಿಲ್ಲದೆ ನವಜಾತ ಶಿಶುಗಳು ಹಾಗೂ ಮಕ್ಕಳ ಚಿಕಿತ್ಸೆಗೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ.

ಈರಣ್ಣ ಬುಡ್ಡಾಗೋಳ

ಕನ್ನಡಪ್ರಭ ವಾರ್ತೆ ರಾಮದುರ್ಗ

ಸರ್ಕಾರ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡುತ್ತಿದೆ. ಆದರೆ, ರಾಮದುರ್ಗ ತಾಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 14 ತಿಂಗಳಿಂದ ಮಕ್ಕಳ ತಜ್ಞ ವೈದ್ಯರಿಲ್ಲದೆ ನವಜಾತ ಶಿಶುಗಳು ಹಾಗೂ ಮಕ್ಕಳ ಚಿಕಿತ್ಸೆಗೆ ತೀವ್ರ ತೊಂದರೆಯಾಗುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತಾಗಿದೆ.

ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಮೂವರು ಸ್ತ್ರೀರೋಗ ತಜ್ಞರು, ಮೂಳೆ ಮತ್ತು ಕೀಲು ತಜ್ಞರು, ಇಬ್ಬರು ದಂತ ವೈದ್ಯರು, ಶಸ್ತ್ರಚಿಕಿತ್ಸಾ ತಜ್ಞರು ಸೇರಿ ಹಲವು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಮಕ್ಕಳ ತಜ್ಞ ವೈದ್ಯರೇ ಇಲ್ಲದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ಬಂದರೆ, ಸಾಮಾನ್ಯ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಔಷಧ ನೀಡುತ್ತಾರೆ. ಅದರಿಂದ ಗುಣಮುಖರಾಗದಿದ್ದರೆ ಖಾಸಗಿ ಮಕ್ಕಳ ತಜ್ಞರ ಬಳಿ ಕರೆದೊಯ್ಯುವಂತೆ ಸಲಹೆ ನೀಡುತ್ತಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಾಗೂ ಸುಲಭವಾಗಿ ದೊರೆಯಬೇಕಾದ ಚಿಕಿತ್ಸೆಗಾಗಿ ಬಡವರು ಖಾಸಗಿ ಆಸ್ಪತ್ರೆಗಳಿಗೆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಇರುವವರು ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು. ಬಡವರು ಎಲ್ಲಿಗೆ ಹೋಗಬೇಕು ಎಂಬುದು ಬಡವರ ಪ್ರಶ್ನೆ.

ಮಗುವೊಂದು ಖಾಸಗಿ ಆಸ್ಪತ್ರೆಯಲ್ಲಿ, ತಾಯಿ ಸರ್ಕಾರಿ ಆಸ್ಪತ್ರೆಲಿ!:

ತಾಲೂಕು ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಮೂವರು ಸ್ತ್ರೀರೋಗ ತಜ್ಞರು ಇರುವುದರಿಂದ ಹೆರಿಗೆ ಸೇವೆ ಉತ್ತಮವಾಗಿ ನಡೆಯುತ್ತಿದೆ. ಪ್ರತಿ ತಿಂಗಳು ಸರಾಸರಿ 100ರಿಂದ 120 ಹೆರಿಗೆಗಳು ಇಲ್ಲಿ ನಡೆಯುತ್ತಿವೆ. ಆದರೆ, ಹೆರಿಗೆ ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞ ವೈದ್ಯರಿಲ್ಲದಿರುವುದು ತಾಯಂದಿರಿಗೆ ಸಂಕಷ್ಟ ತಂದೊಡ್ಡಿದೆ.

ನವಜಾತ ಶಿಶುಗಳಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಆಸ್ಪತ್ರೆಯಲ್ಲಿರುವ ವೈದ್ಯರು ಆರೈಕೆ ಮಾಡುತ್ತಾರೆ. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಖಾಸಗಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಲಾಗುತ್ತದೆ. ಆಗ ಬಾಣಂತಿ ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ಉಳಿಯಬೇಕಾದರೆ, ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗುತ್ತದೆ. ತಾಯಿ ಮತ್ತು ಮಗುವನ್ನು ಬೇರ್ಪಡಿಸುವ ಈ ಪರಿಸ್ಥಿತಿಯಿಂದ ಬಾಣಂತಿಯರು ಮಾನಸಿಕ ಹಾಗೂ ದೈಹಿಕ ಸಂಕಷ್ಟ ಅನುಭವಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಾಯಿ-ಮಗುವಿನ ಆರೈಕೆಯ ಹೊಣೆ ಯಾರದ್ದು ಎಂಬ ಪ್ರಶ್ನೆ ಕಾಡುತ್ತಿದೆ.

ವೈದ್ಯರ ನೇಮಕಕ್ಕೆ ಅಧಿಕಾರಿಗಳ ನಿರೀಕ್ಷೆ:

ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ ಅವರು, ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರ ಕೊರತೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಮಕ್ಕಳ ವೈದ್ಯರಿಲ್ಲದಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆ ಆಧಾರದ ಮೇಲೆ ವೈದ್ಯರು ಬಂದರೂ ವಿವಿಧ ಕಾರಣಗಳಿಂದ ಮುಂದುವರಿಯುತ್ತಿಲ್ಲ. ವೈದ್ಯರು ಯಾರೂ ಲಭ್ಯವಾಗುತ್ತಿಲ್ಲ. ಯಾರಾದರೂ ಆಸಕ್ತ ವೈದ್ಯರು ಇದ್ದರೆ ತಿಳಿಸಿ ಎಂದು ಹೇಳಿದ್ದಾರೆ.

ರಾಮದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ರಾವಸಾಹೇಬ ಬಂತಿ ಅವರನ್ನು ಸಂಪರ್ಕಿಸಿದಾಗ, ಮಕ್ಕಳ ವೈದ್ಯರ ನೇಮಕಾತಿ ತಾಲೂಕು ಆಸ್ಪತ್ರೆಯ ವ್ಯಾಪ್ತಿಗೆ ಬರುತ್ತದೆ. ಈ ಕುರಿತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳನ್ನು ವಿಚಾರಿಸುವಂತೆ ತಿಳಿಸಿದ್ದಾರೆ.

ಬಡವರ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಯಾವಾಗ?:

ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸೇವೆ ಲಭ್ಯವಿದ್ದರೂ, ಹೆರಿಗೆಯ ನಂತರ ನವಜಾತ ಶಿಶುಗಳಿಗೆ ಅಗತ್ಯವಿರುವ ಚಿಕಿತ್ಸೆ ದೊರೆಯದಿರುವುದು ಗಂಭೀರ ಸಮಸ್ಯೆಯಾಗಿದೆ. ಮಕ್ಕಳ ವೈದ್ಯರ ನೇಮಕಾತಿ ಕುರಿತು ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆಯೇ ಹೊರತು, ವೈದ್ಯರ ಕೊರತೆ ನೀಗಿಸುವ ನಿಖರ ಕಾಲಮಿತಿಯನ್ನು ತಿಳಿಸುತ್ತಿಲ್ಲ. ಹೀಗಾಗಿ ಕಳೆದ 14 ತಿಂಗಳಿಂದ ಮುಂದುವರಿದಿರುವ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಿ, ಬಡವರ ಮಕ್ಕಳಿಗೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಮರ್ಪಕ ಚಿಕಿತ್ಸೆ ದೊರೆಯುವಂತೆ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಮಕ್ಕಳ ವೈದ್ಯರಿಲ್ಲದಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದು ನಿಜ. ವೈದ್ಯರ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ನಡೆಯುವುದರಿಂದ ಈವರೆಗೆ ಯಾರೂ ನೇಮಕಗೊಂಡಿಲ್ಲ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ವರ್ಗಾವಣೆಯಲ್ಲಿ ಮಕ್ಕಳ ವೈದ್ಯರು ಬರುವ ನಿರೀಕ್ಷೆಯಿದೆ.

-ಡಾ.ನವೀನ ನಿಜಗುಲಿ, ಮುಖ್ಯ ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆ

ಮಗುವಿನ ಆರೋಗ್ಯದಲ್ಲಿ ಹೆರಿಗೆಯ ನಂತರ ಸಮಸ್ಯೆ ಕಾಣಿಸಿಕೊಂಡಿದೆ. ಮಕ್ಕಳ ತಜ್ಞರು ಇಲ್ಲದ ಕಾರಣ, ಜೊತೆಯಲ್ಲಿದ್ದವರ ಸಹಾಯದಿಂದ ಮಗುವನ್ನು ಆಸ್ಪತ್ರೆಯ ಸಮೀಪದ ಖಾಸಗಿ ದವಾಖಾನೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಪರಿಸ್ಥಿತಿ ಎದುರಾಗಿದೆ. ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

-ರಂಕಲಕೊಪ್ಪ ಗ್ರಾಮದ ಬಾಣಂತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾರಾಷ್ಟ್ರ ನಡೆ ಖಂಡಿಸಿ ರೈತರ ಪ್ರತಿಭಟನೆ
ಹಳ್ಳಿಗಳ ಅಭಿವೃದ್ಧಿಯಿಂದ ಗ್ರಾಮ ಸ್ವರಾಜ್ಯ ಸಾಕಾರ