ರಾಜ್ಯದಲ್ಲಿ ಭಯೋತ್ಪಾದಕರ ಸರ್ಕಾರವಿದೆ: ರೇಣುಕಾಚಾರ್ಯ

KannadaprabhaNewsNetwork | Published : Oct 22, 2024 12:30 AM

ಸಾರಾಂಶ

ರಾಜ್ಯ ಸರ್ಕಾರ ಐಸಿಯು ವಾರ್ಡ್‌ನಲ್ಲಿದ್ದು, ಇನ್ನೂ ಎಷ್ಟು ದಿನ ಆಟವಾಡುತ್ತದೋ ಆಡಲಿ ನೋಡೋಣ. ಪೊಲೀಸ್ ಇಲಾಖೆಯವರು ಜನರ ರಕ್ಷಕರಾಗಿ ಕೆಲಸ ಮಾಡಬೇಕೆ ಹೊರತು, ಸರ್ಕಾರದ ಗುಲಾಮರಾಗಿ, ಏಜೆಂಟರಾಗಿ ಕೆಲಸ ಮಾಡುವುದಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರ ಐಸಿಯು ವಾರ್ಡ್‌ನಲ್ಲಿದ್ದು, ಇನ್ನೂ ಎಷ್ಟು ದಿನ ಆಟವಾಡುತ್ತದೋ ಆಡಲಿ ನೋಡೋಣ. ಪೊಲೀಸ್ ಇಲಾಖೆಯವರು ಜನರ ರಕ್ಷಕರಾಗಿ ಕೆಲಸ ಮಾಡಬೇಕೆ ಹೊರತು, ಸರ್ಕಾರದ ಗುಲಾಮರಾಗಿ, ಏಜೆಂಟರಾಗಿ ಕೆಲಸ ಮಾಡುವುದಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದ ಕೆಟಿಜೆ ನಗರದಲ್ಲಿ ಹಿಂದು ಜಾಗರಣಾ ವೇದಿಕೆ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ಹಿನ್ನೆಲೆ ಸೋಮವಾರ ರಾತ್ರಿ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಭಯೋತ್ಪಾದಕರ ಸರ್ಕಾರವಿದ್ದು, ಇನ್ನೂ ಎಷ್ಟು ದಿನ ಈ ಸರ್ಕಾರ ಇರುತ್ತದೆ. ನಾವ್ಯಾರೂ ಕೇಸ್ ಹಿಂಪಡೆಯುವಂತೆ ಅರ್ಜಿಯನ್ನೇನು ಹಾಕಿಲ್ಲ. ನಮ್ಮ ರಕ್ತದ ಕಣಕಣದಲ್ಲೂ ಹಿಂದುತ್ವ ಹರಿಯುತ್ತಿದೆ. ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಬಹುದೇ ಹೊರತು, ನಮ್ಮ ಹೃದಯದಲ್ಲಿರುವ ಹಿಂದುತ್ವವನ್ನು ಬಂಧಿಸಲಾಗದು. ಸತೀಶ ಪೂಜಾರಿ ಬಂಧನದಲ್ಲಿದ್ದಾಗ ಪೂಜಾರಿ ಕುಟುಂಬಕ್ಕೆ ಅನಗತ್ಯವಾಗಿ ತೊಂದರೆ ಕೊಡಲು ಮುಂದಾಗಿದ್ದರು. ಆಗ ನಾವು ಸತೀಶ ಪೂಜಾರಿ ಕುಟುಂಬ ಪರ ನಿಂತೆವು. ಇಂದು, ನಾಳೆ, ಮುಂತೆಯೂ ನಾವು ಇದ್ದೇ ಇರುತ್ತೇವೆ ಎಂದು ತಿಳಿಸಿದರು.

ಹಿಂದುತ್ವವೇ ನಮ್ಮ ಜೀವನವೂ ಆಗಿದೆ. ಹಿಂದುಗಳಿಗೆ ಅಪಮಾನ, ಅಗೌರವ ತೋರಿಸುವಂತಹವರ ವಿರುದ್ಧ ನಾವು ಇರುತ್ತೇವೆ. ಸತೀಶ ಪೂಜಾರಿ ಇತರರನ್ನು ಕೇಸ್ ಹಾಕಿ, ಬಂಧಿಸಿ ಜೈಲಿಗೆ ಹಾಕುತ್ತೀರಲ್ಲ ನಿಮಗೆ ತಾಕತ್ತಿದ್ದರೆ ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಿ? ಎಷ್ಟು ಹಿಂದುಗಳನ್ನು ಬಂಧಿಸುತ್ತೀರಿ? ತಾಕತ್ತಿದೆಯಾ ಎಲ್ಲಾ ಹಿಂದುಗಳನ್ನು ಬಂಧಿಸಲು? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇವತ್ತು ಈ ಸರ್ಕಾರದ ಮಾತು ಕೇಳುತ್ತಿರುವ ಇದೇ ಪೊಲೀಸರು ಗುಲಾಮರಾಗಿ ನಮ್ಮ ಮನೆ ಮುಂದೆ ನಿಲ್ಲುತ್ತಾರೆ. ಪೊಲೀಸರು, ಖಾಕಿ ಬಗ್ಗೆ ನಮಗೆ ಅಪಾರ ಗೌರವವಿದೆ. ಅಪಮಾನ ಮಾಡುವುದಿಲ್ಲ. ಆದರೆ, ಕಾಂಗ್ರೆಸ್ ಏಜೆಂಟರಾಗಿ ಕೆಲಸ ಮಾಡಬೇಡಿ ಅಂತಾ ಹೇಳುತ್ತೇವೆ. ನೀವೂ ಸಹ ನಮ್ಮ ಕುಟುಂಬದ ಸದಸ್ಯರು. ನೀವೇನೂ ಪಾಕಿಸ್ತಾನ, ಬಾಂಗ್ಲಾದಲ್ಲಿ ಹುಟ್ಟಿಲ್ಲ. ಆದರೆ, ರಾಜ್ಯ ಸರ್ಕಾರ ಹಿಂದುಗಳ ಭಾವನೆಗಳ ಜೊತೆಗೆ ಆಟವಾಡುತ್ತಿದೆ. ಅಂತಹ ಸರ್ಕಾರದ ಗುಲಾಮರಾಗಿ ಕೆಲಸ ಮಾಡಬೇಡಿ ಎಂದು ರೇಣುಕಾಚಾರ್ಯ ಪೊಲೀಸರಿಗೆ ಮನವಿ ಮಾಡಿದರು.

Share this article