ಹೊನ್ನಾವರ: ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರ ಕಡೆಗಣನೆಯನ್ನು ಸಹಿಸುವುದಿಲ್ಲ. ಇದರಿಂದ ಬೇಸತ್ತು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಲಂಭೋದರ ನಾಯ್ಕ ಘೋಷಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಮಾತನಾಡಿ, ಕಾಣದ ಕೈಗಳು, ಅಣ್ಣ- ತಮ್ಮಂದಿರ ಜೋಡಿಯಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ಇವರು ಯಾರು ಎಂದು ಬಹಿರಂಗವಾಗಬೇಕು. ಆಗ ಮಾತ್ರ ಪಕ್ಷ ಶುಚಿಯಾಗುತ್ತದೆ. ವ್ಯವಸ್ಥಿತ ನಾಯಕತ್ವದ ಕೊರತೆ ಇದೆ ಎಂದರು.
ಪ್ರತಿಯೊಂದರಲ್ಲೂ ಹೊನ್ನಾವರ ಬ್ಲಾಕ್ ಕಾಂಗ್ರೆಸ್‌ಗೆ ಅನ್ಯಾಯವಾಗುತ್ತಿದ್ದು, ಇತ್ತೀಚೆಗೆ ಹೊನ್ನಾವರ ತಾಲೂಕು ಭೂ ನ್ಯಾಯ ಮಂಡಳಿಗೆ ನಾಲ್ಕು ಸರ್ಕಾರಿ ನಾಮನಿರ್ದೆಶನ ಸದಸ್ಯರನ್ನು ನೇಮಿಸಿದ್ದು, ಅದರಲ್ಲಿ ಒಬ್ಬನೇ ಒಬ್ಬ ಸದಸ್ಯ ಹೊನ್ನಾವರ ಬ್ಲಾಕ್ ಕಾಂಗ್ರೆಸಿಗೆ ಸಂಬಂಧಿಸಿದವರಿಲ್ಲ. ಅದೇ ರೀತಿ ನಲವತ್ತು ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ನನ್ನ ಅರ್ಜಿಯನ್ನು ಬದಿಗೊತ್ತಿ, ಪಕ್ಷದ ಪ್ರಾಥಮಿಕ ಸದಸ್ಯರಲ್ಲದ, ಪಕ್ಷದ ಯಾವುದೇ ಕಾರ್ಯಚಟುವಟಿಕೆಯಲ್ಲಿ ಬಾಗಿಯಾಗದ ಹೊನ್ನಾವರ ಬ್ಲಾಕ್ ವ್ಯಾಪ್ತಿಯ ವಂದೂರು ಗ್ರಾಮದ ವಿ.ಕೆ. ವಿಶಾಲ್ ಭಟ್ಟ ಅವರನ್ನು ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ, ಕೆಡಿಪಿಯ ಸರ್ಕಾರಿ ನಾಮನಿರ್ದೆಶನ ಸದಸ್ಯರನ್ನಾಗಿ ನೇಮಿಸಿರುವುದರ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿ, ಪಕ್ಷದ ಪ್ರಾಥಮಿಕ ಸದಸ್ಯ ಹೊಂದಿರದ ಬಗ್ಗೆ ದಾಖಲೆ ಪ್ರದರ್ಶಿಸಿದರು.ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ ಮೇಸ್ತ ಮಾತನಾಡಿ, ಕಳೆದ ೪೦ ವರ್ಷ ಪಕ್ಷಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಜಗದೀಪ್ ತೆಂಗೇರಿಯವರಿಗೆ ಸೂಕ್ತ ಸ್ಥಾನಮಾನ ಪಕ್ಷ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ತುಳಸಿ ಗೌಡ, ಜಿಲ್ಲಾ ಕಾಂಗ್ರೆಸ್ ಸದಸ್ಯ ಹನೀಫ್ ಶೇಖ, ಸದಸ್ಯೆ ಸುಧಾ ನಾಯ್ಕ, ಜ್ಯೋತಿ ಮಹಾಲೆ, ಮಾದೇವ ನಾಯ್ಕ ಕರ್ಕಿ, ಕೃಷ್ಣ ಹರಿಜನ ಮುಂತಾದವರು ಮಾತನಾಡಿದರು.