ಏಕರೂಪ ನಾಗರಿಕ ಸಂಹಿತೆ ಅಗತ್ಯತೆ ಇದೆ: ಹೈಕೋರ್ಟ್

KannadaprabhaNewsNetwork | Published : Apr 6, 2025 1:46 AM

ಸಾರಾಂಶ

ಸಂವಿಧಾನದ ಮೂಲತತ್ವಗಳು, ಉದ್ದೇಶಗಳನ್ನು ಸಾಕಾರಗೊಳಿಸಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅಗತ್ಯತೆ ಇದೆ. ಇದನ್ನು ಅಳವಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂವಿಧಾನದ ಮೂಲತತ್ವಗಳು, ಉದ್ದೇಶಗಳನ್ನು ಸಾಕಾರಗೊಳಿಸಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅಗತ್ಯತೆ ಇದೆ. ಇದನ್ನು ಅಳವಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮುಸ್ಲಿಂ ಕುಟುಂಬದ ಆಸ್ತಿ ಹಂಚಿಕೆ ಕುರಿತು ಬೆಂಗಳೂರಿನ ಸಮೀವುಲ್ಲಾ ಖಾನ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ ಕುಮಾರ್‌ ಅವರಿದ್ದ ಏಕ ಸದಸ್ಯ ಪೀಠ, ಪ್ರಜಾಪ್ರಭುತ್ವ, ಏಕತೆ, ಸಮಗ್ರತೆ ಮತ್ತು ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾರ್ಯಗತಗೊಳಿಸಲು ಸಂವಿಧಾನದ ಕಲಂ 44ರ ಆಶಯದಂತೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಆಸ್ತಿಯಲ್ಲಿ ಪಾಲು ಪಡೆಯಲು ಸಹೋದರನಂತೆ ಸಹೋದರಿಗೂ ಸಮಾನ ಹಕ್ಕು ಇದೆ. ಆದರೆ, ಪ್ರಕರಣದಲ್ಲಿ ಸಹೋದರ ಮತ್ತು ಸಹೋದರಿ ನಡುವೆ ತಾರತಮ್ಯವಾಗುವ ಪರಿಸ್ಥಿತಿ ಎದುರಾಗಿದೆ. ಆದರೆ, ಇಂತಹ ಪರಿಸ್ಥಿತಿ ಹಿಂದೂ ಕಾನೂನಿನಲ್ಲಿ ಇಲ್ಲ. ಸಹೋದರ ಮತ್ತು ಸಹೋದರಿಯರು ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ. ಏಕರೂಪ ನಾಗರಿಕ ಸಂಹಿತೆ ಅಗತ್ಯತೆಗೆ ಈ ಪ್ರಕರಣ ಉದಾಹರಣೆ ಎಂದು ಆದೇಶದಲ್ಲಿ ನ್ಯಾಯಮೂರ್ತಿಯವರು ಹೇಳಿದ್ದಾರೆ.

ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಕೂಡ ಏಕರೂಪ ನಾಗರಿಕ ಸಂಹಿತೆಯ ಪರವಾಗಿದ್ದರು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌, ಡಾ.ರಾಜೇಂದ್ರ ಪ್ರಸಾದ್‌, ಟಿ. ಕೃಷ್ಣಮಾಚಾರಿ ಮತ್ತು ಮೌಲಾನಾ ಹಸ್ರತ್‌ ಮೊಹಾನಿ ಮತ್ತಿತರರು ಕೂಡ ಯುಸಿಸಿಯನ್ನು ಬೆಂಬಲಿಸಿದ್ದರು. ದೇಶದ ಎಲ್ಲಾ ಹೆಣ್ಣು ಮಕ್ಕಳು ಸಮಾನರು. ಧರ್ಮದ ಕಾರಣದಿಂದಾಗಿ ಮಹಿಳೆಯರ ಹಕ್ಕಿನಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಹಾಗಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಶ್ವಾಸವಿದೆ. ಸುಪ್ರೀಂಕೋರ್ಟ್‌ ಹಾಗೂ ಹಲವು ಹೈಕೋರ್ಟ್‌ಗಳೂ ಸಹ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮಹಿಳೆಯರಿಗೆ ನ್ಯಾಯ ದೊರಕುತ್ತದೆ ಮತ್ತು ಅವರ ಘನತೆ ಹೆಚ್ಚಾಗಲಿದೆ. ಸಮಾಜದಲ್ಲಿ ಎಲ್ಲರಂತೆ ಬಾಳ್ವೆ ನಡೆಸಬಹುದಾಗಿದೆ. ಗೋವಾ ಮತ್ತು ಉತ್ತರಾಖಂಡ ಸರ್ಕಾರಗಳು ಈಗಾಗಲೇ ಯುಸಿಸಿ ಜಾರಿಗೊಳಿಸಿವೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ತೀರ್ಪಿನ ಪ್ರತಿ ಕಳುಹಿಸಿಕೊಡಿ:

ಯುಸಿಸಿ ಜಾರಿಗೊಳಿಸಲು ಅನುಕೂಲವಾಗುವಂತೆ ತೀರ್ಪಿನ ಪ್ರತಿಯನ್ನು ಕೇಂದ್ರ ಸರ್ಕಾರದ ಕಾನೂನು ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ನ್ಯಾಯಮೂರ್ತಿಯವರು ನಿರ್ದೇಶನ ನೀಡಿದ್ದಾರೆ.

Share this article