ಕವಲು ದಾರಿಯಲ್ಲಿರುವ ಸಮಾಜದಲ್ಲಿ ನೈತಿಕ ಮೌಲ್ಯಗಳ ಪುನರುತ್ಥಾನದ ಅಗತ್ಯತೆ ಇದೆ: ಈಶ್ವರ ಬಿ.ಖಂಡ್ರೆ

KannadaprabhaNewsNetwork |  
Published : Sep 01, 2026, 01:15 AM IST
53 | Kannada Prabha

ಸಾರಾಂಶ

ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿದೆ. ಯಾರು ಧರ್ಮ ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಧರ್ಮ ಅಂದರೆ ಸತ್ಯ, ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ, ಹಸಿದವರಿಗೆ ಅನ್ನ ಹಾಕುವುದೇ ಧರ್ಮ, ನೊಂದವರ ಕಣ್ಣೀರು ಒರೆಸುವುದೇ ಧರ್ಮ, ನಾವೆಲ್ಲರೂ ಹಸಿದವರಿಗೆ ಅನ್ನ ನೀಡಬೇಕು, ನೊಂದವರ ಕಣ್ಣೀರು ಒರೆಸಬೇಕು.

ಕನ್ನಡಪ್ರಭ ವಾರ್ತೆ ಹುಣಸೂರು

ಕವಲು ದಾರಿಯಲ್ಲಿರುವ ಸಮಾಜದಲ್ಲಿ ನೈತಿಕ ಮೌಲ್ಯಗಳ ಪುನರುತ್ಥಾನ ಮಾಡುವ ಕಾರ್ಯದ ಅಗತ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟರು.

ತಾಲೂಕಿನ ಬಿಳಿಕೆರೆ ಹೋಬಳಿ ಶ್ರೀಕ್ಷೇತ್ರ ಗದ್ದಿಗೆಯ ಶ್ರೀ ಕೆಂಡಗಣ್ಣೇಶ್ವರ ಸ್ವಾಮಿ ದೇವಾಲಯದದಲ್ಲಿ ಸೋಮವಾರ ಆಯೋಜಿಸಿದ್ದ ದೇವಾಲಯದ ಗರ್ಭಗುಡಿಯ ನವೀಕರಣ ಹಾಗೂ ಶ್ರೀಸ್ವಾಮಿಗಳ ಪೀಠಗಳಿಗೆ ರಜತಪೀಠ ಸಮರ್ಪಣೆ ಹಾಗೂ ನೂತನ ಗೋಶಾಲೆ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದ್ದು, ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಸಬೇಕು, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು ಎಂದರು.

ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿದೆ. ಯಾರು ಧರ್ಮ ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಧರ್ಮ ಅಂದರೆ ಸತ್ಯ, ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ, ಹಸಿದವರಿಗೆ ಅನ್ನ ಹಾಕುವುದೇ ಧರ್ಮ, ನೊಂದವರ ಕಣ್ಣೀರು ಒರೆಸುವುದೇ ಧರ್ಮ, ನಾವೆಲ್ಲರೂ ಹಸಿದವರಿಗೆ ಅನ್ನ ನೀಡಬೇಕು, ನೊಂದವರ ಕಣ್ಣೀರು ಒರೆಸಬೇಕು ಎಂದರು.

ಪಶ್ಚಿಮಘಟ್ಟ ಜೀವವೈವಿಧ್ಯತೆಯ ತಾಣವಾಗಿದೆ. ಇಲ್ಲಿ ಅನೇಕ ಪ್ರಭೇದದ ಸಸ್ಯಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ, ಪಕ್ಷಿ ಸಂಕಲವಿದೆ. ಹಲವು ನದಿಗಳ ಮೂಲ ಪಶ್ಚಿಮಘಟ್ಟವಾಗಿದೆ. ಹುಣಸೂರು ತಾಲೂಕು ಇಂತಹ ದೈವದತ್ತವಾದ ಪ್ರಕೃತಿ ಪರಿಸರದಲ್ಲಿದ್ದು, ಹಚ್ಚ ಹಸಿರಿನ ನಡುವೆ ಬದುಕುವ ನೀವು ಪುಣ್ಯವಂತರು ಎಂದರು.

ಅಗ್ನಿಯ ಮೇಲೆ ಕುಳಿತು ಘೋರ ತಪಸ್ಸು ಆಚರಿಸಿ ದಿವ್ಯಶಕ್ತಿ ಪಡೆದ ಸದ್ಗುರು ಶ್ರೀ ಕೆಂಡಗಣ್ಣಸ್ವಾಮೀಜಿ ಅವರ ಕಣ್ಣು ಕೆಂಪು ಕೆಂಡದಂತೆ ಕಾಣುತ್ತಿತ್ತು. ಹೀಗಾಗಿ ಅವರನ್ನು ಕೆಂಡಗಣ್ಣಸ್ವಾಮಿ ಎಂದೇ ಭಕ್ತರು ಕರೆಯುತ್ತಿದ್ದರು ಎಂದು ನಾನು ಕೇಳಿದ್ದೇನೆ. ಶ್ರೀ ಕೆಂಡಗಣ್ಣೇಶ್ವರ ಸ್ವಾಮಿ ಅವರು ಜೀವಂತ ಸಮಾಧಿಯಾಗಿ, ತಮ್ಮ ದರ್ಶನಕ್ಕೆ ಬರುವ ಎಲ್ಲ ಭಕ್ತರನ್ನು ಹಸರುತ್ತಿದ್ದಾರೆ. ಪವಾಡ ಪುರುಷರಾಗಿ, ಸದ್ಗುರುಗಳಾಗಿ ಅವರು ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಮರವಾದ್ದು ಎಂದರು.

ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಸೂಚನೆ:

ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ ಏಕ ಬಳಕೆ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ತಾವು ಪಂಚಾಯತಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:

ಇದೇ ವೇಳೆ ದೇವಾಲಯದ ಆವರಣದಲ್ಲಿ ಗ್ರಾಮಸ್ಥರು, ಸಾರ್ವಜನಿಕರು ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಓವರ್ ಹೆಡ್ ಟ್ಯಾಂಕ್, ಶೌಚಾಲಯ ನಿರ್ಮಿಸಲು ಇಲಾಖೆಯಿಂದ ಕ್ರಮ ವಹಿಸುವ ಭರವಸೆ ನೀಡಿದರು. ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಈ ವರ್ಷ 15 ಸಾವಿರ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದಾಗಿ ತಿಳಿಸಿದ ಅವರು, ಪ್ರತಿ ತಾಲೂಕು ಕೇಂದ್ರದಲ್ಲಿ ವೀರಶೈವ ಲಿಂಗಾಯತ ಭವನ ನಿರ್ಮಿಸಲು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷನಾಗಿ ತಾವು ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಅಭಿವೃದ್ಧಿ ವಿಚಾರದಲ್ಲಿ ತಕ್ಷಣ ಸ್ಪಂದನೆ:

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿದ್ದಾಗ ಅವರು ಗಜ ಪಯಣಕ್ಕೆ ಬರುತ್ತಿದ್ದರು. ನಾವು ಕಾಡಿನಂಚಿನ ಗ್ರಾಮಗಳ ಯಾವುದೇ ಸಮಸ್ಯೆ, ಅಭಿವೃದ್ಧಿ ವಿಚಾರ ತಿಳಿಸಿದರೂ ತಕ್ಷಣ ಸ್ಪಂದಿಸುತ್ತಿದ್ದರು ಎಂದರು.

ಮಾಜಿ ಶಾಸಕ ಮಂಜುನಾಥ್ ಮಾತನಾಡಿ, ಅರಣ್ಯ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಈಶ್ವರ ಬಿ. ಖಂಡ್ರೆ ಅವರು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾಗಿ ಗ್ರಾಮಾಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದು ಹೇಳಿ ಬೆಳ್ಳಿಯ ಕಡಗ ಹಾಕಿ ಸನ್ಮಾನಿಸಿದರು.

ಪೂಜ್ಯ ಶ್ರೀ ಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಧರ್ಮದರ್ಶಿಗಳಾದ ಬಿ.ಎಸ್. ಮಹದೇವಪ್ಪ, ಪುಣ್ಯಶೀಲ, ಹಂದನಹಳ್ಳಿ ಸೋಮಶೇಖರ್, ಪ್ರೇಮ್‌ ಕುಮಾರ್, ಕುಂಠೇಗೌಡ, ಹಂದನಹಳ್ಳಿ ರಮೇಶ್, ಗದ್ದಿಗೆ ದೇವರಾಜ್, ನಂಜುಂಡಶೆಟ್ಟರು, ಕುಟುಂಬಸ್ಥರು ಪಾಲ್ಗೊಂಡಿದ್ದರು.

ಅರ್ಜುನ ಆನೆ ಸ್ಮರಿಸಿದ ಈಶ್ವರ ಖಂಡ್ರೆ:

22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಆನೆ ಅರ್ಜುನನ್ನು ಸೆರೆ ಹಿಡಿದಿದ್ದೂ ಈ ಪ್ರದೇಶದಲ್ಲೇ ಎಂದು ಈಶ್ವರ ಖಂಡ್ರೆ ಸ್ಮರಿಸಿದರು. ಅರ್ಜುನ ಕಳೆದ ಮೂರು ವರ್ಷದ ಹಿಂದೆ ಕಾರ್ಯಾಚರಣೆಯಲ್ಲಿ ಮೃತಪಟ್ಟಾಗ, ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ, ಅರ್ಜುನ ಆನೆ ಇದ್ದ ಬಳ್ಳೆ ಶಿಬಿರದಲ್ಲಿ ಮತ್ತು ಯಸಳೂರು ಹೋಬಳಿ ದಬ್ಬಳಿಕಟ್ಟೆಯಲ್ಲಿ ಅರ್ಜುನನ ಸ್ಮಾರಕ ನಿರ್ಮಿಸಿದ್ದಾಗಿ ಅವರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆಹಾನಿ ಸರ್ವೆ: ರೈತರಿಂದ ಹಣ ವಸೂಲಿ ಆರೋಪ
ಕೆಂಭಾವಿ: ರಾಯರ 355ನೇ ಆರಾಧನಾ ಮಹೋತ್ಸವ