ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವಿಶ್ವ ಗ್ರಾಹಕರ ಹಕ್ಕುಗಳ ದಿನ ನಾವೆಲ್ಲರೂ ಗ್ರಾಹಕರಾಗಿರುವ ಈ ಯುಗದಲ್ಲಿ ನಮ್ಮ ಹಕ್ಕುಗಳನ್ನು ಸೇವೆಗಳನ್ನು ಕೇಳಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್. ಚನ್ನಕೇಶವ ಹೇಳಿದರು.ನಗರದ ಟಿ.ಎಂ.ಎಸ್ ಶಾಲಾ ಆವರಣದ ಸವೂರ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಣ ಕೊಟ್ಟು ವಸ್ತು ಅಥವಾ ಸೇವೆ ಕೊಂಡುಕೊಳ್ಳುವವರೆಲ್ಲರೂ ಗ್ರಾಹಕರೇ. ಆದರೆ, ಹೆಚ್ಚಾಗಿ ಗ್ರಾಹಕರಿಗೆ ತಮಗೆ ಹಕ್ಕುಗಳಿವೆ ಎಂಬುದೇ ಗೊತ್ತಿರುವುದಿಲ್ಲ. ಇದನ್ನು ಎಲ್ಲರಿಗೂ ತಿಳಿಯುವುದು ತಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯುವಂತೆ ಮಾಡುವುದೇ ಗ್ರಾಹಕರ ಹಕ್ಕುಗಳ ದಿನದ ಉದ್ದೇಶ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಮಾತನಾಡಿ, ಪ್ರತಿ ವರ್ಷ ಎಲ್ಲಾ ದೇಶಗಳಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಗ್ರಾಹಕರಿಗೆ ನ್ಯಾಯ ಸಮ್ಮತವಾದ, ಸುರಕ್ಷಿತವಾದ ಮತ್ತು ಗುಣಮಟ್ಟ ಉತ್ಪನ್ನಗಳು ಸಿಗಬೇಕು ಎಂಬ ಉದ್ದೇಶದಿಂದ 1983ರಲ್ಲಿ ಕಾನೂನು ಜಾರಿಯಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ, ಗ್ರಾಹಕ ಸಂರಕ್ಷಣಾ ಕಾಯಿದೆ 2019 ಅನ್ನು ಜಾರಿಗೊಳಿಸಿತು. ಇದರೊಡನೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ಎಂಬ ವಾದಕ್ಕೆ ಮತ್ತಷ್ಟು ಕಾನೂನು ಬಲ ಹೆಚ್ಚಾಗಿದೆ. ದೋಷಪೂರಿತ ವಸ್ತು ಸರಬರಾಜು ಮಾಡಿ ಆದರಿಂದ ಗ್ರಾಹರಿಗೆ ನಷ್ಟ ಉಂಟಾದಲ್ಲಿ ಅಥವಾ ಗ್ರಾಹಕರಿಗೆ ಅನ್ಯಾಯ ಮಾಡಿದರೆ ಕನಿಷ್ಠ 6 ತಿಂಗಳು ಜೈಲು ಶಿಕ್ಷೆ ಮತ್ತು ಒಂದು ಲಕ್ಷದವರಿಗೂ ದಂಡ ವಿಧಿಸಬಹುದು ಎಂದು ಹೇಳಿದರು.
ಗ್ರಾಹಕರು ಶೋಷಣೆಗೆ ಒಳಗಾಗಿದ್ದರೆ ಅಥವಾ ಸೇವೆಗಳಲ್ಲಿ ಅತೃಪ್ತಿ ಹೊಂದಿದ್ದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಪರಿಹಾರ ಕಂಡುಕೊಳ್ಳಬೇಕು ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಪ್ರೇಮಾ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಬಿ.ಎನ್. ರಾಜೀವ್ ಮಾತನಾಡಿದರು. ಟೌನ್ ಮಹಿಳಾ ಸಮಾಜದ ಅಧ್ಯಕ್ಷ ಗೀತಾ ಎಂ.ಎಲ್. ಮೂರ್ತಿ, ಸವಿತಾ ಉಪಸ್ಥಿತರಿದ್ದರು.