- ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ- ಕಲೋತ್ಸವ
ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮೌಲ್ಯಗಳ ಅರಿವನ್ನು ಮೂಡಿಸುವ ಅಗತ್ಯ ಇದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಲಕ್ಯಾದ ನವೋದಯ ಪಬ್ಲಿಕ್ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ, ಲಕ್ಯಾ ಗ್ರಾಮ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ನವೋದಯ ವಿದ್ಯಾಸಂಸ್ಥೆಯ ಸಂಯುಕ್ತಾಶ್ರ ಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಬಾಲ್ಯದಿಂದಲೇ ಉತ್ತಮ ಗುಣ, ಧೈರ್ಯ, ಏಕಾಗ್ರತೆ, ಶ್ರದ್ಧೆ, ಪ್ರಯತ್ನಶೀಲತೆ, ಹೊಣೆಗಾರಿಕೆ ಈ ಗುರಿಗಳನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯಎಂದರು.
ವಿದ್ಯಾರ್ಥಿಗಳ ಅಂತರಂಗದ ಸಾಮರ್ಥ್ಯದ ಜೊತೆಗೆ ಮನೋವಿಕಾಸ ಬೆಳವಣಿಗೆಗೆ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಪೂರಕವಾಗಿದ್ದು, ಶಿಕ್ಷಣ ಮತ್ತುಕ್ರೀಡಾ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳ ವಿಕಸನಕ್ಕೆ ಇಂತಹ ಕಾರ್ಯಕ್ರಮ ದಾರಿ ಮಾಡುವ ಮೂಲಕ ಭವಿಷ್ಯದ ಬುನಾದಿಯಾಗಲಿವೆ ಎಂದು ಹೇಳಿದರು.ಪ್ರತೀ ಹಂತದಲ್ಲಿಯೂ ಗುರುಗಳ ಮಾರ್ಗದರ್ಶನ ಪಡೆದು ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹೆಚ್ಚಿನ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ದೇಶಪ್ರೇಮ, ವಿಶಾಲ ಮನೋಭಾವ ಬೆಳೆಸುತ್ತಿರುವುದು ಕಡಿಮೆಯಾಗುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಶಾಸಕರು, ಬುದ್ಧಿಶಕ್ತಿ ಇರುವ ವಿದ್ಯಾರ್ಥಿಗಳು, ಯುವಕರಲ್ಲಿ ಸಮರ್ಪಕವಾಗಿ ಶಿಕ್ಷಣದ ಮೌಲ್ಯಗಳನ್ನು ಬಳಸಿಕೊಳ್ಳುವ ತಿಳಿವಳಿಕೆ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಕರೆ ನೀಡಿದರು.ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಕ್ಲಸ್ಟರ್, ವಲಯ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಬಂದಿದ್ದು, ರಾಜ್ಯ ಮಟ್ಟಕ್ಕೆ ಹೋಗಬೇಕೆಂದು ಸಲಹೆ ನೀಡಿದರು.ಪ್ರತಿಭೆಗೆ ಯಾವುದೇ ಜಾತಿ ಧರ್ಮ, ಬೇಧಭಾವ ಇಲ್ಲ. ವಿದ್ಯಾರ್ಥಿಗಳಲ್ಲಿ ಸಮಗ್ರ ವ್ಯಕ್ತಿತ್ವ ವಿಕಸನ, ಶಿಸ್ತು, ಸಮಯ ಪಾಲನೆ, ಆತ್ಮವಿಶ್ವಾಸ, ವೇದಿಕೆ ಭಯ ನಿವಾರಣೆ ಜೊತೆಗೆ ತಮ್ಮದೇಯಾದ ಪ್ರತಿಭೆ ಕಂಡುಕೊಳ್ಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದರು.ಪೋಷಕರು ಮತ್ತು ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಕ್ಕಳಲ್ಲಿ ಕಿಚ್ಚು ಹುಟ್ಟಿಸಬೇಕು, ನವೋದಯ, ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಬರೆಯುವಲ್ಲಿ ಆಸಕ್ತಿ ಮೂಡಿಸಬೇಕೆಂದು ಮನವಿ ಮಾಡಿದರು.ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸರ್ಕಾರದಿಂದ 50 ಸಾವಿರ ರೂ. ನೀಡುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಯಾ ಗ್ರಾಪಂ ಅಧ್ಯಕ್ಷ ಮಹಮದ್ ಹನೀಫ್ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್, ಸದಸ್ಯರಾದ ಶಶಿಧರ, ಶೋಭಾ, ಈರಮ್ಮ ಈಶ್ವರಪ್ಪ, ನವೋದಯ ಶಾಲೆ ಗೌರವಾಧ್ಯಕ್ಷ ಈ.ಆರ್. ಮಹೇಶ್, ಕಾರ್ಯದರ್ಶಿ ಬಸವರಾಜ್, ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ಪೈ, ಕಾರ್ಯದರ್ಶಿ ನಂದ ಕುಮಾರ್, ಡಯಟ್ ಪ್ರಾಂಶುಪಾಲ ವೈ.ವಿ ಸುಂದರೇಶ್ ಉಪಸ್ಥಿತರಿದ್ದರು. ಮೊದಲಿಗೆ ತಾಪಂ ಸಹಾಯಕ ನಿರ್ದೇಶಕ ಕೆ.ಜಿ. ನೀಲಕಂಠಪ್ಪ ಸ್ವಾಗತಿಸಿದರು. 3 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಲಕ್ಯಾದ ನವೋದಯ ಪಬ್ಲಿಕ್ ಶಾಲೆ ಆವರಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.