ಸುಗಮ ಸಂಗೀತ ಪರಂಪರೆಗೆ ಪ್ರೋತ್ಸಾಹ ಅಗತ್ಯ: ಪ್ರೊ. ಹಂಪ ನಾಗಾರಾಜಯ್ಯ ಅಭಿಮತ

KannadaprabhaNewsNetwork |  
Published : Aug 03, 2025, 11:45 PM IST
10 | Kannada Prabha

ಸಾರಾಂಶ

ಸಂಗೀತವು ನಡವಳಿಕೆಯನ್ನು ಕಲಿಸುತ್ತದೆ. ನಾನೂ ಸುಗಮ ಸಂಗೀತ ಕೇಳಿಕೊಂಡು ಇರುತ್ತೇನೆ. ಹೀಗಾಗಿ ಇದುವರೆಗೂ ಯಾವುದೇ ಕಾಯಿಲೆ ಬಂದಿಲ್ಲ. ಆಸ್ಪತ್ರೆಗೆ ಹೋಗಿಲ್ಲ. ಸುಗಮ ಸಂಗೀತಗಾರರ ಮಾತು ಚೆನ್ನಾಗಿದ್ದು, ಪ್ರಿಯವಾಗಿರುತ್ತದೆ. ಅವರು ಗೌರವ ಕೊಡುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಎರಡು ದಿನಗಳ ಕಾಲ ಮೈಸೂರಿನ ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಬಡಿಸಿದ 19ನೇ ರಾಜ್ಯ ಮಟ್ಟದ ಸುಗಮ ಸಂಗೀತ ಸಮ್ಮೇಳನದ ಗೀತೋತ್ಸವಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು.

ಕಲಾಮಂದಿರದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಈ ಸಮ್ಮೇಳನಕ್ಕೆ ಗಾಯನದ ಮೂಲಕವೇ ತೆರೆ ಎಳೆಯಲಾಯಿತು.

ಸಮಾರೋಪ ಭಾಷಣ ಮಾಡಿದ ಪ್ರೊ. ಹಂಪ ನಾಗಾರಾಜಯ್ಯ, ಪಂಪನ ವಿಕ್ರಮಾರ್ಜುನ ವಿಜಯ ಮಹಾಕಾವ್ಯದಲ್ಲಿ ಸುಗಮ ಸಂಗೀತದ ಆಶಯಗಳಿವೆ. ಅಂತಹ ಸುಗಮ ಸಂಗೀತ ಪರಂಪರೆ ಮುಂದುವರಿಯಲು ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಸಂಗೀತವು ನಡವಳಿಕೆಯನ್ನು ಕಲಿಸುತ್ತದೆ. ನಾನೂ ಸುಗಮ ಸಂಗೀತ ಕೇಳಿಕೊಂಡು ಇರುತ್ತೇನೆ. ಹೀಗಾಗಿ ಇದುವರೆಗೂ ಯಾವುದೇ ಕಾಯಿಲೆ ಬಂದಿಲ್ಲ. ಆಸ್ಪತ್ರೆಗೆ ಹೋಗಿಲ್ಲ. ಸುಗಮ ಸಂಗೀತಗಾರರ ಮಾತು ಚೆನ್ನಾಗಿದ್ದು, ಪ್ರಿಯವಾಗಿರುತ್ತದೆ. ಅವರು ಗೌರವ ಕೊಡುತ್ತಾರೆ ಎಂದು ಅವರು ತಿಳಿಸಿದರು.

ಸಂಗೀತ ಕೇಳುವುದರಿಂದ ಮುಪು ಬರುವುದಿಲ್ಲ. ಜತೆಗೆ ಆರೋಗ್ಯವೂ ಉತ್ತಮವಾಗಿ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸಂಗೀತ ಕೇಳಿ ಆನಂದಿಸಬೇಕು ಎಂದರು.

ಇದು ಅಪೂರ್ವವಾದ ಸಮ್ಮೇಳನವಾಗಿದ್ದು, ಒಂದು ರೀತಿಯ ಸಾಂಸ್ಕೃತಿಕ ವಾತಾವರಣ ಉಂಟಾಗಿದೆ. ಅದನ್ನು ಸೃಷ್ಟಿಸುವುದು ಸುಲಭವಲ್ಲ. ಕನ್ನಡದ ಆದಿಕವಿ ಪಂಪನೂ ಸುಗಮ ಸಂಗೀತದ ಬಗ್ಗೆ ಮಾತನಾಡಿದ್ದಾನೆ. ಮನುಷ್ಯನಿಗೆ ತ್ಯಾಗ, ಭೋಗ, ಅಕ್ಷರ, ಸಂಗೀತವು ಗೊತ್ತಾಗಬೇಕೆಂದು ಕಾವ್ಯದಲ್ಲಿ ಹೇಳಿದ್ದ ಎಂದು ಹೇಳಿದರು.

ಲೇಖಕ ಪ್ರೊ.ಸಿ.ಪಿ. ಕೃಷ್ಣಕುಮಾರ್ ವಾತನಾಡಿ, ಕವಿಗಳ ಕವಿತೆಯನ್ನು ಸಂಗೀತಾಸಕ್ತರಿಗೆ ತಲುಪಿಸುವ ಸುವರ್ಣ ಮಾಧ್ಯಮವೇ ಸುಗಮ ಸಂಗೀತ. ಇದು ಹೃದಯ ಅರಳಿಸಿ, ಮುದ ನೀಡುತ್ತದೆ. ಸಂಗೀತದ ವಿಶಿಷ್ಟ ಪ್ರಕಾರವಾಗಿರುವ ಇದರಲ್ಲಿ ಮಾತ್ರಿಕತೆಯೂ ಇದೆ ಎಂದರು.

ಸುಗಮ ಸಂಗೀತವು ವಿಶೇಷ ಪ್ರಕ್ರಿಯೆಯಾಗಿದ್ದು, ಮಾಂತ್ರಿಕ ಸತ್ವವನ್ನು ಒಳಗೊಂಡಿದೆ. ಸಹೃದಯರ ಹೃನ್ಮನಗಳಿಗೆ ತಲುಪುವ ಸಂಗೀತವು ಸುವರ್ಣ ಮಾಧ್ಯಮವಾಗಿದೆ. ಕಿವಿಯಲ್ಲೇ ನಿಂತು ಬಿಡುವ ಕವಿತೆ ಸಂಗೀತದ ಜೊತೆಗೆ ಹೃದಯಕ್ಕೆ ತಟ್ಟಿದರೆ ಕಾವ್ಯ ಪರಿಣಾಮ ದೊಡ್ಡದೇ ಆಗಿರುತ್ತದೆ ಎಂದು ಅವರು ತಿಳಿಸಿದರು.

ಸಮ್ಮೇಳನಾಧ್ಯಕ್ಷ ನಗರ ಶ್ರೀನಿವಾಸ ಉಡುಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ, ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಪದಾಧಿಕಾರಿಗಳಾದ ಕಿಕ್ಕೇರಿ ಕೃಷ್ಣಮೂರ್ತಿ, ಬಿ.ವಿ. ಪ್ರವೀಣ್, ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ್‌ ವಿ. ಬೈರಿ ಮೊದಲಾದವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...