ಕನ್ನಡಪ್ರಭ ವಾರ್ತೆ ಬ್ಯಾಡಗಿ
ಕಾರ್ಯಕ್ರಮ ಉದ್ಘಾಟಿಸಿದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಪಪೂ ಕಾಲೇಜು ಪ್ರಾಚಾರ್ಯ ಡಿ. ಸೋಮನಾಥ ಮಾತನಾಡಿ, ಜಿಲ್ಲೆಯಾದ್ಯಂತ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ಇನ್ನಷ್ಟು ಆಳವಾಗಿ ಮಕ್ಕಳ ಸಾಹಿತ್ಯವನ್ನು ಅಧ್ಯಯನ ಮಾಡಲು ಈ ವಿಚಾರ ಸಂಕಿರಣ ಪೂರಕವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ತಿಂಗಳು ಸುವರ್ಣ ಕರ್ನಾಟಕ ಆಚರಣೆ ಅಂಗವಾಗಿ ಆಚರಿಸುತ್ತಿರುವ ನಾಲ್ಕನೇ ಕಾರ್ಯಕ್ರಮ ಇದಾಗಿದೆ ಎಂದರು.
ಮಕ್ಕಳ ಕಾವ್ಯ ರಚನೆ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಸಾಹಿತಿ ಜಿ.ಎಂ. ಓಂಕಾರಣ್ಣನವರು, ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚಿಸುವ ಅಗತ್ಯವಿದ್ದು, ಶಬ್ದಸಂಗ್ರಹ ಪದ ಜೋಡಣೆಗಳ ಕಲಿಕೆ ನಡೆಯಬೇಕು, ಅವರಿಗೆ ನಿಲಕುವ ವಸ್ತು ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದರು.ಮಕ್ಕಳ ನಾಟಕ ಸಾಹಿತ್ಯ ಕುರಿತು ಕಲಾವಿದ ಜಮೀರ ರಿತ್ತಿ ವಿಚಾರ ಮಂಡಿಸಿ, ಶಾಲಾ ವಾರ್ಷಿಕೋತ್ಸವಗಳಲ್ಲಿ ನಾಟಕಗಳು ಮಾಯವಾಗುತ್ತಿವೆ. ನೃತ್ಯಗಳೇ ಪ್ರಧಾನವಾಗಿ ರಾರಾಜಿಸುವ ಈ ದಿನಗಳಲ್ಲಿ ಮಕ್ಕಳ ನಾಟಕಗಳಿಗೆ ಒತ್ತು ನೀಡಬೇಕೆಂದರು.
ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಕಾಲ ಕಾಲಕ್ಕೆ ಮಕ್ಕಳ ಸಾಹಿತ್ಯ ಕುರಿತು ಗೋಷ್ಠಿಗಳು ಎಲ್ಲೆಡೆ ನಡೆಯಬೇಕು, ಅಂತಹ ಪ್ರಯತ್ನಗಳನ್ನು ಜಿಲ್ಲಾ ಘಟಕದಿಂದ ಮಾಡಲಾಗುತ್ತಿದೆ ಎಂದರು.