ಗುತ್ತಲ: ಭಾರತ ದೇಶ ಅತ್ಯಂತ ವಿಶಾಲವಾದ ದೇಶವಾಗಿದ್ದು, ಹಲವಾರು ಧರ್ಮ, ಭಾಷೆ ಮತ್ತು ಜನಾಂಗದೊಂದಿಗೆ ವಿವಿಧತೆಯಿದ್ದರೂ ಎಲ್ಲರೂ ಏಕತೆಯಿಂದ ಬಾಳುವುದು ಭಾರತೀಯ ಸಂಸ್ಕೃತಿಯಾಗಿದೆ. ಬೆಳೆಯುವ ಮಕ್ಕಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಅವಶ್ಯಕತೆಯಿದೆ ಎಂದು ಕಲ್ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆಗಳನ್ನು ಕೇವಲ ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಸಂಘಟನೆಗಳಿಗೆ ಸೀಮಿತಗೊಳಿಸದೆ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು, ಅನೇಕ ಸ್ವಾತಂತ್ರ್ಯ ಹೋರಾಟಗಾರರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಅಂತಹ ಸಂದರ್ಭದಲ್ಲಿ ಡಾ. ಬಾಬು ರಾಜೇಂದ್ರ ಪ್ರಸಾದ, ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ದೇಶವನ್ನು ಸುವ್ಯವಸ್ಥಿತವಾಗಿ ಆಡಳಿತ ನಡೆಸಲು ಸಂವಿಧಾನದ ಕರಡು ಸಮಿತಿಯನ್ನು ರಚಿಸಿ ಜನವರಿ 26, 1950ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಈ ಕಾರಣಕ್ಕಾಗಿ ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಚುನಾವಣೆಯ ಮೊದಲು ಜನರಿಗೆ ತಲೆಬಾಗುವ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಗೆದ್ದ ಬಳಿಕ ತಲೆ ಹಾಕಿಯು ನೋಡುವದಿಲ್ಲ ಎಂದರು.
ಆರ್.ಕೆ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಉಷಾರಾಣಿ ಕೆ.ಎಚ್. ನಾಯ್ಕ ಮಾತನಾಡಿ, ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲ ಜನಾಂಗದವರು ಸಹೋದರತೆಯಿಂದ ಬಾಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಭಾರತದ ಸಂವಿಧಾನವು ದೇಶದ ಎಲ್ಲಾ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆಯು ಪ್ರಮುಖ ಗುರಿಯಾಗಿದ್ದು, ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸುತ್ತದೆ ಎಂದರು,ಆರ್.ಕೆ. ಶಾಲೆಯ ದೈಹಿಕ ಶಿಕ್ಷಕ ಎಚ್,ಎಂ. ಬೆಳವಗಿ ಧ್ವಜಾರೋಹಣ ನಡೆಸಿದರು. ಆರ್.ಕೆ. ಆಂಗ್ಲ ಮಾಧ್ಯಮ ಶಾಲೆ, ಸಂಗನಬಸವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಚಿದಂಬರ ನಗರ ಪ್ರಾಥಮಿಕ ಶಾಲೆಯ, ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಲೇಝಿಂ, ಡಂಬೆಲ್ಸ್ ಹಾಗೂ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ಹಾಗೂ ರಾಷ್ಟ್ರೀಯ ನಾಯಕರ ಛಧ್ಮವೇಷ ಧರಿಸಿದ್ದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷ ಪರಶುರಾಮ ಯಲಗಚ್ಛ, ಪ.ಪಂ. ಸದಸ್ಯ ಪ್ರದೀಪ ಸಾಲಗೇರಿ, ಎಸ್,ಜಿ. ಹೊನ್ನಪ್ಪನವರ, ಗೆಳೆಯರ ಬಳಗ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಕೆ.ಎಚ್. ನಾಯ್ಕ, ಕುಮಾರ ಚಿಗರಿ, ರಾಜಶೇಖರ ಕೂಡಲಮಠ, ಮಂಜುನಾಥ ಯರವಿನತಲಿ, ಡಾ. ಕಿರಣಕುಮಾರ ಬಡಪ್ಪನವರ, ಮೃತ್ಯುಂಜಯ ರಿತ್ತಿಮಠ, ಸುನೀಲ ಪಾಟೀಲ, ವಿನಯ ಕೂಡಲಮಠ, ರಾಜು ಚನ್ನದಾಸರ, ಅಜ್ಜಪ್ಪ ಅಂಗೂರ, ತಾಲೂಕು ಕರವೇ ಅಧ್ಯಕ್ಷ ಹಾಲೇಶ ಹಾಲಣ್ಣನವರ, ಕರಬಸ್ಸು ಕುರುಬಗೇರಿ, ನಿಂಬಣ್ಣ ಅಂಗಡಿ ಸೇರಿದಂತೆ ಹಿಂದು ಜಾಗರಣ ವೇದಿಕೆಯ ಸದಸ್ಯರು, ವಿವಿಧ ಶಾಲೆಯ ಶಿಕ್ಷಕರು ಹಾಗೂ ಪಟ್ಟಣದ ಅನೇಕರು ಭಾಗವಹಿಸಿದ್ದರು.