ಬೆಂಗಳೂರು : ಹೊರವರ್ತುಲ ರಸ್ತೆಯನ್ನು ಸಂಪರ್ಕಿಸಲಿರುವ ‘ನಮ್ಮ ಮೆಟ್ರೋ’ ಮೂರನೇ ಹಂತದ ಯೋಜನೆಯಲ್ಲಿ ರೈಲ್ವೇ ಹಾಗೂ ಮೇಲ್ಸೇತುವೆ ಒಳಗೊಂಡ ಡಬ್ಬಲ್ ಡೆಕ್ಕರ್ ಮಾದರಿ ಅನುಸರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿ ಆರಂಭ ವಿಳಂಬವಾಗುವ ಸಾಧ್ಯತೆಯಿದೆ.
ಕಳೆದ ತಿಂಗಳು ಕೇಂದ್ರ ಸರ್ಕಾರ ಎರಡು ಹಂತದಲ್ಲಿ ಅನುಷ್ಠಾನ ಆಗಲಿರುವ 44.65ಕಿಮೀ ಉದ್ದದ ಈ ಯೋಜನೆಗೆ (₹ 15611 ಕೋಟಿ ಮೊತ್ತ) ಹಸಿರು ನಿಶಾನೆ ತೋರಿದೆ. ಆದರೆ, ರಾಜ್ಯ ಸರ್ಕಾರ ಈ ಯೋಜನೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸರ್ಕಾರದ ಸೂಚನೆ ಪ್ರಕಾರ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) 40.65ಕಿಮೀ ಉದ್ದ ಡಬ್ಬಲ್ ಡೆಕ್ಕರ್ ಮಾದರಿ ಅಳವಡಿಕೆಯ ಸಾಧಕ ಬಾಧಕ ತಿಳಿಯಲು ಆರ್‌ವಿ ಅಸೋಸಿಯೇಟ್ಸ್‌ಗೆ ಟೆಂಡರ್ ನೀಡಲಾಗಿದ್ದು, ಕಾರ್ಯಸಾಧ್ಯತಾ ವರದಿ ರೂಪಿಸಿಕೊಳ್ಳುತ್ತಿದೆ.
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಡಬಲ್ ಡೆಕ್ಕರ್ ಅಳವಡಿಕೆ ಬಳಿಕ ಭವಿಷ್ಯದ ಎಲ್ಲ ಮೆಟ್ರೋ ಮಾರ್ಗದಲ್ಲೂ ಡಬಲ್ ಡೆಕ್ಕರ್ ಮಾದರಿ ಅನುಷ್ಠಾನಕ್ಕೆ ನಿರ್ಧರಿಸಿದೆ. ಇದರಿಂದ ನಗರ ಸಂಚಾರ ದಟ್ಟಣೆ ನಿವಾರಣೆಗೆ ಹೆಚ್ಚಿನ ಅನುಕೂಲ ಆಗಲಿದೆ. ರಸ್ತೆ ಅಗಲೀಕರಣಕ್ಕೆ ಹೆಚ್ಚುವರಿ ಭೂಸ್ವಾಧೀನವೂ ತಪ್ಪಲಿದೆ. ಹೀಗಾಗಿ 3ನೇ ಹಂತದ ಯೋಜನೆಯ ಮೊದಲ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ (29.20ಕಿಮೀ), ಎರಡನೇ ಕಾರಿಡಾರ್‌ನಲ್ಲಿ ಹೊಸಹಳ್ಳಿ - ಕಡಬಗೆರೆ (11.45ಕಿಮೀ) ಹಾಗೂ ಹೊರವರ್ತುಲ ರಸ್ತೆಯ ಸರ್ಜಾಪುರ ಇಬ್ಬಲೂರು (14ಕಿಮೀ) ಉದ್ದಕ್ಕೆ ಡಬಲ್ ಡೆಕ್ಕರ್ ಮಾದರಿಗಾಗಿ ಅಧ್ಯಯನ ನಡೆಯುತ್ತಿದೆ. ಜೊತೆಗೆ 3ಎ ಹಂತದ ಆಗರ ಹಾಗೂ ಕೋರಮಂಗಲ 3ನೇ ಬ್ಲಾಕ್ (2.45ಕಿಮೀ) ಯಲ್ಲಿಯೂ ಈ ಅಧ್ಯಯನ ಕೈಗೊಳ್ಳಲಾಗಿದೆ.
ಈ ಹಂತದಲ್ಲಿ ಡಬಲ್ ಡೆಕ್ಕರ್ ಅನುಷ್ಠಾನಕ್ಕೆ ಪ್ರಾಥಮಿಕ ಅಂದಾಜಿನಂತೆ ಪ್ರತಿ ಕಿಮೀಗೆ ₹ 215 ಕೋಟಿ ಬೇಕಾಗಬಹುದು. ಒಟ್ಟಾರೆ ಸುಮಾರು 8000 ಕೋಟಿ ರು.ಬೇಕಾಗಬಹುದು. ಡಿಸೆಂಬರ್‌ನಲ್ಲಿ ಅಂತಿಮ ವರದಿ ಬಿಎಂಆರ್‌ಸಿಎಲ್ ಕೈಸೇರುವ ನಿರೀಕ್ಷೆಯಿದೆ. ಬಳಿಕವೇ ಹೆಚ್ಚುವರಿ ವೆಚ್ಚದ ಲೆಕ್ಕಾಚಾರ ಹಾಗೂ ಅನುದಾನ ಪಾಲುದಾರಿಕೆ ಕುರಿತು ನಿರ್ಣಯ ಆಗಬೇಕು. ಡಬಲ್ ಡೆಕ್ಕರ್‌ಗೆ ಬಿಬಿಎಂಪಿಯಿಂದಲೂ ಕೂಡ ಅನುದಾನ ಹಂಚಿಕೆ ಬೇಕಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಡಬಲ್ ಡೆಕ್ಕರ್‌ಗಾಗಿ ಭೂಸ್ವಾಧೀನ ಪರಿಹಾರ ಮೊತ್ತವೂ ಹೆಚ್ಚಾಗಬಹುದು. ಸದ್ಯ ಜೆ.ಪಿ.ನಗರ 4ಹಂತದಿಂದ- ಕೆಂಪಾಪುರವರೆಗಿನ (ಕಾರಿಡಾರ್ -1) 32.15 ಕಿ.ಮೀ ಮಾರ್ಗದ ಯೋಜನೆಗೆ 1,29,743 ಚದರ ಮೀಟರ್ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಎರಡನೇ ಕಾರಿಡಾರ್ ಹೊಸಹಳ್ಳಿ ಕಡಬಗೆರೆವರೆಗೆ ಭೂಸ್ವಾಧೀನಕ್ಕಾಗಿ ಸ್ಥಳವನ್ನು ಗುರುತು ಮಾಡಿಕೊಳ್ಳಲಾಗುತ್ತಿದೆ. ಬಳಿಕ ಕೆಐಎಡಿಬಿಗೆ ವರದಿ ನೀಡಿ ಭೂಸ್ವಾದೀನ ಮಾಡಿಕೊಡುವಂತೆ ಕೇಳಲಾಗುವುದು.
ಒಟ್ಟಾರೆ ಮೆಟ್ರೋ 3ನೇ ಹಂತದ ಯೋಜನಾ ಮೊತ್ತ ಹೆಚ್ಚಾಗುವ ಸಾಧ್ಯತೆಯಿಂದೆ. ಬಳಿಕ ರಾಜ್ಯ, ಕೇಂದ್ರದಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಇವೆಲ್ಲದರ ಬಳಿಕವೇ ಯೋಜನೆ ಕಾಮಗಾರಿ ಟೆಂಡರ್ ಆಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.