ಶಿವಮೊಗ್ಗದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ: ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork | Updated : Apr 09 2024, 06:23 AM IST

ಸಾರಾಂಶ

ಸುಡು ಬಿಸಿಲಿನಲ್ಲು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಚಾರದ ವೇಳೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಶಿಕಾರಿಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಲೀಡ್ ಸಿಗುತ್ತದೆ ಎಂದು ಸಂಸದರ ವಿಶ್ವಾಸ

 ಶಿವಮೊಗ್ಗ :  ದೇಶದಲ್ಲಿ ದಿನೇ ದಿನೇ ಪ್ರಧಾನಿ ಮೋದಿ ಪರವಾದ ವಾತಾವರಣ ಉಂಟಾಗುತ್ತಿದೆ. ಶಿವಮೊಗ್ಗ ಕ್ಷೇತ್ರದಲ್ಲೂ ಬಿಜೆಪಿ ಪರವಾದ ವಾತಾವರಣವಿದೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 400 ಪ್ಲಸ್ ಟಾರ್ಗೆಟ್ ಇಟ್ಟುಕೊಂಡಿದೆ. ಈ ನೆಲೆಯಲ್ಲಿ ಮೊದಲ ಹಂತದ ಚುನಾವಣಾ ಪ್ರಚಾರ ಹಾಗೂ ಸಮಸ್ಯೆ ಬಗೆಹರಿಸಿಕೊಂಡು ಬಿಜೆಪಿ ಮುನ್ನುಗ್ಗುತ್ತಿದೆ. ಪ್ರಧಾನಿ ಮೋದಿ ಅವರ ರೋಡ್ ಶೋಗಳಿಗೆ ಜನಸ್ಪಂದನೆ ಹೆಚ್ಚಾಗುತ್ತಿದೆ. ಕಳೆದ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಳ ಮೇಲೆ ಮತಯಾಚನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಳೆದ 67 ವರ್ಷಗಳ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಏನಾಗಿದೆ. ಬಿಜೆಪಿ ಅಧಿಕಾರಾವಧಿಯ ಹತ್ತು ವರ್ಷಗಳಲ್ಲಿ ಏನಾಗಿದೆ ಎಂಬುದನ್ನ ಜನತೆಗೆ ತಿಳಿಸುತ್ತಿದ್ದೇವೆ. ಸುಡು ಬಿಸಿಲಿನಲ್ಲು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಚಾರದ ವೇಳೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಶಿಕಾರಿಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಲೀಡ್ ಸಿಗುತ್ತದೆ ಎಂದರು.

ಪ್ರತಿ ದಿನ ಎರಡು ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಎಲ್ಲೆಡೆ ಮಹಿಳಾ ಮತದಾರರ ಸ್ಪಂದನೆ ಸಿಗುತ್ತಿದೆ. ಮೋದಿಯವರಿಗೆ ಮತದಾರರು ಶಿವಮೊಗ್ಗ ಕ್ಷೇತ್ರವನ್ನು ಕೊಡುಗೆಯಾಗಿ ಕೊಡುತ್ತಾರೆ ಎಂಬ ವಿಶ್ವಾಸ ಹೆಚ್ಚಿದೆ ಎಂದು ಹೇಳಿದರು.

ಕಳೆದ ಎರಡು ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆದಿದೆ. ತವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಅಭೂತಪೂರ್ವ ಜನಸ್ಪಂದನೆ ಸಿಗುತ್ತಿದೆ. ಶಿಕಾರಿಪುರ ಕ್ಷೇತ್ರದ ಈಸೂರು, ಬೇಗೂರು, ಕಾಗಿನೆಲೆ ಮೊದಲಾದ ಭಾಗಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಯಾವುದೇ ಟೀಕೆ ಟಿಪ್ಪಣಿಗಳಿಗೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಮತದಾರರೇ ಉತ್ತರ ಕೊಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಶಾಂತ್ ಕಿಶೋರ್ ಬಿಜೆಪಿಗೆ ಅತಿ ಹೆಚ್ಚಿನ ಸ್ಥಾನ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ವಿಶ್ಲೇಷಕ ಪ್ರಶಾಂತ್ ಕಿಶೋರ್ ಹೇಳಿಕೆ ಒಳ್ಳೆಯ ಸೂಚನೆಯಾಗಿದೆ. ಆರ್ಟಿಕಲ್ 370 ಕಾಯ್ದೆ ರದ್ದತಿ ಬಳಿಕ ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳನ್ನು ಗಳಿಸುವ ಗುರಿ ಹೊಂದಿದೆ. ದೇಶದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ತಿಳಿಸಿದರು.

Share this article