ಎಲ್ಲ ಬಸ್ಸುಗಳು ನಿಲ್ದಾಣದೊಳಗೆ ಬಂದು ನಿಲುಗಡೆ ಮಾಡುವಂತೆ ಕ್ರಮಕ್ಕೆ ಒತ್ತಾಯ
ಕನ್ನಡಪ್ರಭವಾರ್ತೆ ತರೀಕೆರೆ
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಹಾದುಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ನಿಗದಿತ ನಿಲ್ದಾಣದೊಳಗೆ ಬಂದು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ. ರಮೇಶ್, ಮಾಜಿ ಸದಸ್ಯ ಕೃಷ್ಣ, ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಒತ್ತಾಯಿಸಿದ್ದಾರೆ.
ಬಸ್ಸುಗಳನ್ನು ನಿಲ್ದಾಣದಿಂದ ದೂರ ನಿಲ್ಲಿಸುವುದರಿಂದ ವೃದ್ದರು, ಮಹಿಳೆಯರು, ಚಿಕ್ಕ ಮಕ್ಕಳು ಸೇರಿದಂತೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತದೆ. ಪ್ರಯಾಣಿಕರು ಲಗೇಜ್ ಹೊತ್ತು ಬಸ್ಸು ನಿಲ್ಲಿಸಿದ ಸ್ಥಳಕ್ಕೆ ಓಡಬೇಕಾಗುತ್ತದೆ. ಹಾಗೂ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹೆಚ್ಚಿನ ವಾಹನ ಸಂಚಾರ ಇರುತ್ತದೆ, ಇಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಅನಾಹುತ ಆಗುವ ಆತಂಕವೂ ಇದೆ. ಬಸ್ ನಿಲ್ದಾಣದಲ್ಲಿ ರಾತ್ರಿ ಪಾಳೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ಇದರಿಂದ ಎಲ್ಲ ಮಾರ್ಗದ ಸರ್ಕಾರಿ ಬಸ್ಸುಗಳು ನಿಲ್ದಾಣದೊಳಗೆ ಪ್ರವೇಶಿಸಿ ನೋಂದಣಿಯಾಗುತ್ತವೆ, ಇದರಿಂದ ಬಸ್ಸುಗಳು ಬಂದು ಹೋಗುವ ಸಮಯ ಕೂಡ ಸಾರ್ವಜನಿರಿಗೆ ದೊರೆಯುತ್ತದೆ ಎಂದಿದ್ದಾರೆ.ತರೀಕೆರೆ ಮೂಲಕ ಬಸ್ಸುಗಳು ಬೆಂಗಳೂರು, ಅರಸೀಕೆರೆ, ಮೈಸೂರು, ಧರ್ಮಸ್ಥಳ, ಮಂಗಳೂರು, ಅಜ್ಜಂಪುರ, ಲಿಂಗದಹಳ್ಳಿ ಮಾರ್ಗವಾಗಿ ಚಿಕ್ಕಮಗಳೂರು ಕಡೆಗೆ ಹೋಗುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಪ್ರಯಾಣಿಕರು ವಿಶ್ರಾಂತಿ, ಸುರಕ್ಷತೆ ದೃಷ್ಟಿಯಿಂದಲೂ ಅನುಕೂಲವಾಗುತ್ತದೆ. ಆದ್ದರಿಂದ ಬಸ್ಸುಗಳು ನಿಲ್ದಾಣದ ಒಳಗೆ ಬಂದು ನಿಲ್ಲುವಂತೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
------------------
ತರೀಕೆರೆ ರಾಷ್ಟ್ರೀಯ ಹೆದ್ದಾರಿ 206 ನಲ್ಲಿರುವ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ.