ಎಂಟೇ ಕೊಡ ನೀರಿಗೆ ಊರಿಗೆ ಊರೇ ಸರತಿ ಸಾಲಲ್ಲಿ!

KannadaprabhaNewsNetwork |  
Published : Apr 18, 2026, 03:30 AM ISTUpdated : Apr 18, 2026, 10:43 AM IST
water

ಸಾರಾಂಶ

ಬೇಸಿಗೆ ಬಿಸಿಲ ಬೇಗೆಯ ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ, ತೊಟ್ಟಿಕ್ಕುವಂತೆ ಸುರಿಯುವ ಕೊಳವೆಬಾವಿ ಮುಂದೆ ನೂರಾರು ನೀರಿನ ಗಾಡಿಯಲ್ಲಿ, ಸಾವಿರಾರು ಖಾಲಿ ಕೊಡಗಳ ಸಮೇತ ಗ್ರಾಮದ ಮಕ್ಕಳಿಂದ ವಯೋವೃದ್ಧರವರೆಗೆ ಹಗಲು-ರಾತ್ರಿ ಸರತಿಯಲ್ಲಿ ಕಾಲ ಕಳೆಯುವ ದುಸ್ಥಿತಿ  

 ನಾಗರಾಜ ಎಸ್. ಬಡದಾಳ್ 

 ದಾವಣಗೆರೆ :  ಬೇಸಿಗೆ ಬಿಸಿಲ ಬೇಗೆಯ ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿ, ತೊಟ್ಟಿಕ್ಕುವಂತೆ ಸುರಿಯುವ ಕೊಳವೆಬಾವಿ ಮುಂದೆ ನೂರಾರು ನೀರಿನ ಗಾಡಿಯಲ್ಲಿ, ಸಾವಿರಾರು ಖಾಲಿ ಕೊಡಗಳ ಸಮೇತ ಗ್ರಾಮದ ಮಕ್ಕಳಿಂದ ವಯೋವೃದ್ಧರವರೆಗೆ ಹಗಲು-ರಾತ್ರಿ ಸರತಿಯಲ್ಲಿ ಕಾಲ ಕಳೆಯುವ ದುಸ್ಥಿತಿ ತಾಲೂಕಿನ ಗುಡಾಳ್ ಗ್ರಾಮದಲ್ಲಿ ಕಂಡುಬರುತ್ತಿದೆ.

ಗುಡಾಳ್ ಸುಮಾರು 3 ಕಿಮೀ ವಿಸ್ತೀರ್ಣ ಹೊಂದಿದ್ದು, 500ಕ್ಕೂ ಹೆಚ್ಚು ಮನೆಗಳಿರುವ ಗ್ರಾಮ. 1,400ಕ್ಕೂ ಅಧಿಕ ಗ್ರಾಮಸ್ಥರಿದ್ದು, 3 ಸಾವಿರಕ್ಕೂ ಅಧಿಕ ಜಾನುವಾರುಗಳಿರುವ ಗ್ರಾ.ಪಂ. ಕೇಂದ್ರ ಸ್ಥಾನವಾಗಿದೆ. ಆದರೆ, ಗುಡಾಳ್ ಗ್ರಾಮದ ಕುಡಿಯುವ ನೀರಿನ ಬವಣೆಯಂತೂ ಹೇಳತೀರವಾಗಿದೆ.

ಗುಡಾಳ್ ಗ್ರಾಮದಲ್ಲಿ ಮನೆಗೊಂದು ನೀರಿನ ಗಾಡಿ ಇವೆ. ಪ್ರತಿ ಗಾಡಿಯಲ್ಲಿ ಐದಾರು ಕೊಡಗಳನ್ನು ಇಡಬಹುದು. ನಿತ್ಯ ನೀರು ಪೂರೈಸಿದರೂ ಬೆಸ್ಕಾಂನ ಅಸಡ್ಡೆ, ವಿದ್ಯುತ್ ಮಾರ್ಗ ಹಾದು ಬರುವ ಮಾರ್ಗದಲ್ಲಿ ತೋಟ, ಹೊಲಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದವರಿಂದಾಗಿ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಅಂತರ್ಜಲವೂ ಬತ್ತುತ್ತಿರುವ ಕಾರಣ ನೀರಿಗೂ ಸಮಸ್ಯೆಯಾಗಿದೆ. ನೀರಿಗಾಗಿ ಗ್ರಾಮದಲ್ಲಿ ನಿತ್ಯ ಜಗಳವೂ ನಿಶ್ಚಿತವಾಗಿದೆ.

 ವಿಷ ಜಂತು ಭೀತಿಯಲ್ಲಿ ಕತ್ತಲಲ್ಲಿ ನಿಲ್ಲಬೇಕು

ಇಡೀ ಗ್ರಾಮಕ್ಕೆ ನೀರು ಪೂರೈಸಲು ಗ್ರಾ.ಪಂ.ನ 2 ಕೊಳವೆಬಾವಿಗಳಿವೆ. ಆದರೆ, ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಗ್ರಾಮದ ಒಳಗೆ ನಲ್ಲಿ ಸಂಪರ್ಕ ಕಲ್ಪಿಸಿದರೆ ಅವರ ಮನೆ ಮುಂದೆ ನಲ್ಲಿ ಬೇಡ, ಇವರ ಮನೆ ಮುಂದೆ ಬೇಡವೆಂದು ಜಗಳ ಮಾಡಿದ ಪರಿಣಾಮ ಊರಿನ ಉತ್ತರ ಮತ್ತು ದಕ್ಷಿಣ ಭಾಗಕ್ಕೆ, ಬಹುತೇಕ ಊರಿನ ಹೊರಗೆ ನಲ್ಲಿ ಹಾಕಲಾಗಿದೆ. ಗ್ರಾಮಸ್ಥರ ಕೆಲವರ ಕಾರಣಕ್ಕಾಗಿ ಇಡೀ ಊರಿನ ಮಕ್ಕಳು, ಮಹಿಳೆಯರು, ವಯೋವೃದ್ಧರು ಈಗ ಹಾವು-ಚೇಳು ಸೇರಿದಂತೆ ವಿಷಜಂತುಗಳ ಭೀತಿ ಮಧ್ಯೆಯೇ ರಸ್ತೆ ಬದಿ ಸಂಜೆಯಿಂದ ಮಧ್ಯರಾತ್ರಿವರೆಗೆ ನೀರಿಗಾಗಿ ಕಾಯುತ್ತಾ ನಿಲ್ಲುವಂತಹ ದುಸ್ಥಿತಿ ಬಂದೊದಗಿದೆ.

ಪ್ರತಿ ಮನೆಯ ಮಕ್ಕಳು, ಯುವಕ- ಯುವತಿಯರು, ಮಹಿಳೆಯರು, ಪುರುಷರು, ವಯೋವೃದ್ದರು ಗಂಟೆಗಟ್ಟಲೇ ಸರದಿ ನಿಲ್ಲುವ ಸ್ಥಿತಿ ಕಾರಣಕ್ಕೆ ಒಂದೊಂದು ಗಂಟೆಗೆ ಒಬ್ಬೊಬ್ಬರು ಬಂದು ನಿಲ್ಲುವಂತಾಗಿದೆ. ಕಗ್ಗತ್ತಲಲ್ಲಿ ನಿರ್ಜನ ಪ್ರದೇಶದಲ್ಲಿ ತಮ್ಮ ನೀರಿನ ಗಾಡಿ ಸಮೇತ ಕೊಡಗಳನ್ನು ನಿಲ್ಲಿಸಿಕೊಂಡು, ಕಾಯುತ್ತಿದ್ದಾರೆ. ಶುಕ್ರವಾರ ಸಂಜೆ 5 ಗಂಟೆ ವೇಳೆ ಸರದಿಯಲ್ಲಿ ನಿಂತವರಿಗೆ ಇನ್ನೂ ಸಹ ಗಾಡಿಗಳ ಸಾಲು ಕರಗಿಲ್ಲ. ನೀರಿಗಾಗಿ ಸರತಿ ನಿಂತಾಗ ಆ ಗಾಡಿಗೆ ಸೇರಿದ ಮನೆಯವರು ಕಡ್ಡಾಯವಾಗಿ ಸ್ಥಳದಲ್ಲೇ ಇರಬೇಕು. ಇಲ್ಲದಿದ್ದರೆ, ಆ ಗಾಡಿ ಬದಿಗೆ ಸರಿಸಿ, ಹಿಂದಿನ ಗಾಡಿಯವರು ಮುಂದೆ ಬರುತ್ತಾರೆ. ಇದು ಸಹ ಜಗಳಕ್ಕೆ ಕಾರಣ‍ವಾಗುತ್ತಿದೆ.

* ಪ್ರತಿ ಗಾಡಿಗೆ 8 ಕೊಡಕ್ಕೆ ನೀರು, ನಿಯಮ! 

ಪ್ರತಿ ನೀರಿನ ಗಾಡಿಯಲ್ಲಿ 8 ಕೊಡ ತುಂಬಿಕೊಳ್ಳಲು ಮಾತ್ರವೇ ಅವಕಾಶ. ಮತ್ತೊಂದು ಕೊಡ ನೀರು ಬೇಕೆಂದರೆ ಮತ್ತೆ ಹೊಸದಾಗಿ ಸರತಿಯಲ್ಲಿ ಬಂದು ನಿಲ್ಲಬೇಕು. ಹಾಗಾಗಿ ಗುಡಾಳು ಗ್ರಾಮಸ್ಥರು ಈಗ ನೀರನ್ನು ಹಣಕ್ಕಿಂತಲೂ ಜಾಗ್ರತೆಯಿಂದ ಖರ್ಚು ಮಾಡಬೇಕಾದ ಸ್ಥಿತಿ ತಲುಪಿಸಿದ್ದಾರೆ. ದಿನಗಟ್ಟಲೇ ನೀರಿಗಾಗಿ ಸಾಲುಗಟ್ಟಿ ನಿಲ್ಲುವುದು ಮನೆ ಬಳಕೆ, ಸ್ನಾನ, ಬಟ್ಟೆ ಒಗೆಯುವುದಕ್ಕೆ ಬಳಸಲು. ಕುಡಿಯುವ ನೀರಿಗಾಗಿ ಇಡೀ ಗ್ರಾಮಸ್ಥರು ಸಮೀಪದ ಹೆಬ್ಬಾಳ್, ಹುಲಿಕಟ್ಟೆ, ಹಾಲುವರ್ತಿ ಗ್ರಾಮಗಳಿಗೆ ಹೋಗಿ, ಅಲ್ಲಿಂದ ನೀರು ಶುದ್ಧೀಕರಣದ ಘಟಕದಿಂದ ಒಂದೋ, ಎರಡೋ ಕ್ಯಾನ್ ನಿತ್ಯವೂ ತಂದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ.

ಸುಮಾರು ಅರ್ಧ ಕಿಮೀಗೂ ಅಧಿಕ ಉದ್ದದವರೆಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಹ ನೀರಿನ ಗಾಡಿ ಸಾಲು ಇತ್ತು. ಗ್ರಾಮದ ಮುಕ್ಕಾಲು ಭಾಗ ಜನರು ತಮ್ಮ ನೀರಿನ ಗಾಡಿ, ಸರತಿ ಕೊಡ ನೀರು ಹಿಡಿಯಲು ಜಮಾಯಿಸಿದ್ದಾರೆ. ಲಿಂಗಾಯತರು, ಪರಿಶಿಷ್ಟ ಜಾತಿ- ಪಂಗಡಗಳ ಜನರು ಇರುವ ಗ್ರಾಮ ಇದು. ಪರಿಶಿಷ್ಟರ ಕಾಲನಿಗಳು ಎತ್ತರದ ಪ್ರದೇಶದಲ್ಲಿದ್ದು, ಅಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಅಷ್ಟೇ ಅಲ್ಲ, ವಿದ್ಯುತ್ ಸಮಸ್ಯೆ ನಿರಂತರವಾಗಿ ಕಾಡುತ್ತಿರುವುದು ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತಿದೆ.

ಗ್ರಾಪಂನಿಂದ ನೀರು ಬಿಡುವಾಗ ಬೆಸ್ಕಾಂನವರು ಎಲ್‌ಸಿ ತೆಗೆದುಕೊಳ್ತಾರೆ. ಊರಿಗೊಂದು ಎಂಬಂತೆ ಬೆಸ್ಕಾಂ 24 ಗಂಟೆ ಟಿಸಿ ಕೊಟ್ಟಿದೆ. ಆದರೆ, ಅಕ್ಕಪಕ್ಕದ ಊರಿನವರು 25 ಕೆವಿ ಟಿಸಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು, ತಮ್ಮ ಹೊಲ, ಗದ್ದೆ, ತೋಟಕ್ಕೆ ಬೋರ್‌ವೆಲ್ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ. ಮೌಖಿಕವಾಗಿ ಗ್ರಾಪಂ ಪಿಡಿಒ, ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಗುಡಾಳ್‌ಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಿದೆ ಎನ್ನುತ್ತಾರೆ ಗ್ರಾಮಸ್ಥರು.

* ಡಿಸಿ, ಸಿಇಒ ಗುಡಾಳ್‌ಗೆ ಬಂದು ನೋಡಲಿ!  

ಗುಡಾಳ್ ಗ್ರಾಮದ ನೀರಿನ ಸಮಸ್ಯೆ ಪರಿಹರಿಸಬೇಕು. ಜಿಲ್ಲಾಧಿಕಾರಿ, ಜಿಪಂ ಸಿಇಒ ನಮ್ಮ ಗ್ರಾಮಕ್ಕೆ ಭೇಟಿ ನೀಡಿ, ನಿತ್ಯವೂ ನೀರಿಗಾಗಿ ಇಡೀ ಊರಿಗೆ ಊರಿನ ಮಕ್ಕಳು, ವಯೋ ವೃದ್ಧರಾದಿಯಾಗಿ ಹಗಲು ರಾತ್ರಿ ಸರತಿಯಲ್ಲಿ ನಿಲ್ಲುವ ಸಮಸ್ಯೆಯಿಂದ ನಮ್ಮನ್ನು ಕಾಪಾಡಬೇಕು. ನೀರಿನ ಸಮಸ್ಯೆ ಇದೆ ನಿಜ. ಆದರೆ, ಸಿಗುವ ನೀರನ್ನು ಸಮರ್ಪಕವಾಗಿ ಪೂರೈಸಲು ಇರುವ ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಾಮದ ಡಿ.ಕೆ.ರಾಕೇಶ, ಕೆ.ಎಂ.ಸಿದ್ದೇಶ, ಡಿ.ಆರ್.ಅನಿಲ್, ಬಿ.ಕೆ.ಶಿವಕುಮಾರ, ಕೆ.ಎಸ್.ಗಜೇಂದ್ರ, ಡಿ.ಎಸ್.ಕಾರ್ತಿಕ್, ಭಾರತಮ್ಮ, ಭಾಗ್ಯಮ್ಮ, ರೇಣುಕಮ್ಮ, ಸತ್ಯಮ್ಮ, ಸರ್ವಮಂಗಳ, ಉಚ್ಚೆಂಗೆಮ್ಮ, ಯೋಗೇಶಪ್ಪ, ಕುಂಬಾರ ಭೀಮಣ್ಣ, ಜಿ.ಡಿ.ಅಣ್ಣಯ್ಯ, ಮಹಾಂತಣ್ಣರ ತಿಪ್ಪಕ್ಕ, ಹನುಮಜ್ಜಿ ಸೇರಿದಂತೆ ಅನೇಕರು ಮನವಿ ಮಾಡಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ