ನೇರವಾಗಿ ಹೃದಯ ತಟ್ಟುವ ಚುಟುಕುಗಳು: ಕೊನೋಡಿ ಗಣೇಶ್‌

KannadaprabhaNewsNetwork | Published : Aug 25, 2024 1:59 AM

ಸಾರಾಂಶ

ನರಸಿಹಂರಾಜಪುರ, ಚುಟುಕಗಳನ್ನು ಓದಿದರೆ ನೇರವಾಗಿ ಹೃದಯಕ್ಕೆ ತಟ್ಟುತ್ತದೆ ಎಂದು ಚುಟುಕು ಕವಿ ಹಾಗೂ ಸಾಮಾಜಿಕ ಚಿಂತಕ ಕೊನೋಡಿ ಗಣೇಶ್ ತಿಳಿಸಿದರು.

ಬೆಳ್ಳೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾ.ಕಸಾಪದಿಂದ ಕಸಾಪ ನಡಿಗೆ ಹಳ್ಳಿ ಕಡೆಗೆ । ಮಕ್ಕಳಿಗೆ ರಸಪ್ರಶ್ನೆ, ಉಪನ್ಯಾಸ

ಕನ್ನಡಪ್ರಭ ವಾರ್ತೆ, ನರಸಿಹಂರಾಜಪುರ

ಚುಟುಕಗಳನ್ನು ಓದಿದರೆ ನೇರವಾಗಿ ಹೃದಯಕ್ಕೆ ತಟ್ಟುತ್ತದೆ ಎಂದು ಚುಟುಕು ಕವಿ ಹಾಗೂ ಸಾಮಾಜಿಕ ಚಿಂತಕ ಕೊನೋಡಿ ಗಣೇಶ್ ತಿಳಿಸಿದರು.

ಶನಿವಾರ ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ಕಸಾಪ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಹನಿ ಗವನಗಳ ಮೂಲಕ ಸಾಮಾಜಿಕ ಕಳಕಳಿ ಎಂಬು ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಚುಟುಕುಗಳಿಗೆ ಸಾಮಾಜಿಕ ಕಳಕಳಿ ಇದೆ. ಚುಟುಕು ಪಂಚ್ ನೀಡುತ್ತದೆ. ಚುಟುಕುಗಳಿಗೆ ಯಾವುದೇ ಬೇಲಿ ಇಲ್ಲ. ಚುಟುಕುಗಳು ಮೌಲ್ಯಯುತ ಜೀವನ ಕಲಿಸಿಕೊಡುತ್ತದೆ. ಸಣ್ಣ ಚುಟುಕುಗಳು ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತದೆ. ಚುಟುಕುಗಳಿಗೆ ಅಂತಹ ಶಕ್ತಿ ಇದೆ.ಚುಟುಕು ಕವಿ ದಿನಕರ ದೇಸಾಯಿ 1500 ಚುಟುಕುಗಳ ಪುಸ್ತಕ ಬರೆದಿದ್ದಾರೆ. ಚುಟುಕು ಎನ್ನುವುದು ಕನ್ನಡ ಭಗವದ್ಗೀತೆಯಂತೆ ಎಂದು ವರ್ಣನೆ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಸ್‌.ಎಚ್.ಪೂರ್ಣೇಶ್‌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಹಳ್ಳಿ, ಹಳ್ಳಿಗಳಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಿದ್ದೇವೆ. ಗ್ರಾಮೀಣ ಭಾಗದ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಗಾದೆ, ಒಗಟು,ಜಾನಪದ ಗೀತೆ ಸ್ಪರ್ಧೆ ಹಾಗೂ ಮುಂದಿನ ದಿನಗಳಲ್ಲಿ ಹೋಬಳಿ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.

ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆ ಎಸ್‌ ಡಿಎಂಸಿ ಅಧ್ಯಕ್ಷ ಆರ್‌.ವೆಂಕಟರಮಣಯ್ಯ ಮಾತನಾಡಿ, ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಹಾಗೂ ಜಿಲ್ಲೆಗೆ ಸೀಮಿತವಾಗಿತ್ತು. ಈಗ ಗ್ರಾಮಗಳಲ್ಲೂ ಕನ್ನಡ ಭಾಷೆಗೆ ಸಂಬಂಧಪಟ್ಟ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲೂ ಕಸಾಪ ಕಾರ್ಯಕ್ರಮಕ್ಕೆ ಸಹಕಾರ ನೀಡಲಾಗುವುದು ಎಂದರು.

ಶಿಕ್ಷಕ ಮಂಜುನಾಥ್‌ ಮಾತನಾಡಿ, ಕನ್ನಡದ ಮೊದಲ ಶಾಸನ ಹಲ್ಮಿಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ ಎಂಬುದು ನಮಗೆ ಹೆಮ್ಮೆ. ಹೊಯ್ಸಳರ ಮೂಲ ಊರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು. ಕುವೆಂಪು ಹುಟ್ಟಿಚ್ವುದು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ಕುಪ್ಪಳ್ಳಿಯಲ್ಲಿ. ತಾಯಿ ಮನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಂಬುದು ಈ ಜಿಲ್ಲೆಯ ಕನ್ನಡಿಗರಿಗೆ ಹೆಮ್ಮೆ ತಂದಿದೆ ಎಂದರು.

ಇದೇ ಸಂದರ್ಭದಲ್ಲಿ ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ ಎಸ್‌ ಎಲ್‌ ಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಶ್ರೀನಿಧಿಯನ್ನು ಅಭಿನಂದಿಸಿ ಪ್ರತಿಭಾ ಪುರಸ್ಕರಿಸಲಾಯಿತು. ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಎಚ್‌.ಇ. ದಿವಾಕರ, ಸಿದ್ದಪ್ಪಗೌಡ, ಎಸ್‌. ಉಪೇಂದ್ರ, ಎಸ್‌ ಡಿಎಂಸಿಸದಸ್ಯ ಸದಾಶಿವ, ಶಾಲಾ ಮುಖ್ಯೋಪಾಧ್ಯಾಯಿನಿ ಸುಧಾ, ಹಿರಿಯ ಆರೋಗ್ಯ ನಿರೀಕ್ಷಕ ದರ್ಶನ್‌, ತಾ.ಕಸಾಪ ಸಾಂಸ್ಕೃತಿಕ ರಾಯಬಾರಿ ರಂಗಿಣಿ ಯು.ರಾವ್ ಇದ್ದರು.

Share this article