ವಿಶ್ವದ ಸಮಸ್ಯೆಗಳಿಗೆಲ್ಲ ಗೀತೆಯಲ್ಲಿ ಪರಿಹಾರವಿದೆ: ಪುತ್ತಿಗೆ ಶ್ರೀ

KannadaprabhaNewsNetwork |  
Published : Dec 23, 2024, 01:00 AM IST
22ಗ್ರಂಥ | Kannada Prabha

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ ರಚಿಸಿದ ‘ಶ್ರೀ ಭಗವಾನುವಾಚ’ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸಮಾಜದ ಏಕತೆ, ದೇಶದ ಸಮಗ್ರತೆಯಿಂದ ಭಾರತಕ್ಕೆ ವಿಶ್ವಗುರು ಮಾನ್ಯತೆ ಸಾಧ್ಯವಿದೆ. ವಿಶ್ವದ ಎಲ್ಲ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರ ಇದೆ. ಆದ್ದರಿಂದಲೇ ಗೀತೆ ಕೇವಲ ಒಂದು ಧರ್ಮ ಗ್ರಂಥವಲ್ಲ, ಅದು ವಿಶ್ವ ಗ್ರಂಥವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.ಅವರು ಶನಿವಾರ ಕೃಷ್ಣಮಠದ ರಾಜಾಂಗಣದಲ್ಲಿ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಬೃಹತ್ ಗೀತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ ರಚಿಸಿದ ‘ಶ್ರೀ ಭಗವಾನುವಾಚ’ ಗ್ರಂಥ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದರೆ ಹೇಗೆ ರೋಗಗಳನ್ನು ತಡೆಯಬಹುದೋ ಹಾಗೆ ನಮ್ಮ ಧರ್ಮದ ಮೇಲಿನ ಅಭಿಮಾನವನ್ನು ಬೆಳೆಸಿಕೊಂಡರೆ, ಇತರ ಧರ್ಮಗಳ ಅತಿಕ್ರಮಣವನ್ನು ತಡೆಯಬಹುದು ಎಂದವರು ಹೇಳಿದರು.

ಗೀತೆಗೆ ಆಧ್ಯಾತ್ಮಿಕ ಮಾತ್ರವಲ್ಲ, ರಾಜಕೀಯ, ವೈಜ್ಞಾನಿಕ, ಸಾಮಾಜಿಕ, ಆರ್ಥಿಕ ದೃಷ್ಟಿಕೋನಗಳಿವೆ. ಗೋ. ಮಧುಸೂದನ ಅವರ ‘ಶ್ರೀ ಭಗವಾನುವಾಚ’ ಗ್ರಂಥವನ್ನು ರಾಜಕೀಯ ದೃಷ್ಟಿಕೋನದಿಂದ ಬರೆದಿದ್ದಾರೆ. ಆದ್ದರಿಂದ ರಾಜಕಾರಣಿಗಳೆಲ್ಲಾ ಈ ಗ್ರಂಥವನ್ನು ಓದಬೇಕು ಎಂದು ಶ್ರೀಗಳು ಹೇಳಿದರು.ಈ ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ಡಾ. ಟಿ.ವಿ. ಸತ್ಯನಾರಾಯಣ ಗ್ರಂಥವನ್ನು ಪರಿಚಯಿಸಿದರು.ಮುಖ್ಯ ಭಾಷಣಕಾರರಾಗಿ ಆರ್‌ಎಸ್‌ಎಸ್‌ ಹಿರಿಯರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಅತಿಥಿಗಳಾಗಿ ಮಂಗಳೂರಿನ ಹಿರಿಯ ಪತ್ರಕರ್ತ ಸುರೇಂದ್ರ ವಾಗ್ಳೆ, ಕಾಳಿದಾಸ ಸಮ್ಮಾನ ಪುರಸ್ಕೃತ ಕಲಾವಿದ ಗಂಜೀಫಾ ರಘುಪತಿ ಭಟ್, ಗ್ರಂಥ ಪ್ರಕಾಶಕ ಕೆ.ರಾಕೇಶ್ ರಾಜ್ ಅರಸ್ ಮೈಸೂರು, ಗ್ರಂಥ ಮುದ್ರಕ ಜೆ. ಬಿ. ಪಟ್ಟಾಭಿ ಮೈಸೂರು, ಪತ್ರಿಕಾ ಅಂಕಣಕಾರ ಡಾ. ವಿ.ರಂಗನಾಥ್​ ಮೈಸೂರು ಆಗಮಿಸಿದ್ದರು.ಇದೇ ಸಂದರ್ಭದಲ್ಲಿ ಮಂಗಳೂರಿನ ಉದ್ಯಮಿಗಳಾದ ಆರೂರು ಕಿಶೋರ್​ ರಾವ್​ ಮತ್ತು ವಿಶ್ವನಾಥ ಭಟ್​ ಪಾದೂರು ಇವರಿಗೆ ಉಭಯ ಶ್ರೀಪಾದರು ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.ಗ್ರಂಥಕರ್ತ ಗೋ.ಮಧುಸೂದನ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಅನಿಲ್​ ರಾವ್​ ನಿರೂಪಿಸಿದರು. ವಿಶ್ವಾಸ್​ ನಾಡಿಗ್ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ