ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ ) ಹೆಸರು ಬದಲಾವಣೆ ನೆಪದಲ್ಲಿ ಯೋಜನೆಯ ಸ್ವರೂಪ ಹಾಗೂ ಉದ್ದೇಶವನ್ನು ಬದಲಾಯಿಸಲು ಮುಂದಾಗಿರುವ ಕೇಂದ್ರದ ಎನ್‌ಡಿಎ ಸರ್ಕಾರದ ತೀರ್ಮಾನ ಖಂಡನೀಯ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ: ಕೃಷಿ ಕೂಲಿಕಾರರಿಗೆ ಹಾಗೂ ಬಡ ವರ್ಗದ ಜನರಿಗೆ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲವಾಗುವ ರೀತಿಯಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ ) ಹೆಸರು ಬದಲಾವಣೆ ನೆಪದಲ್ಲಿ ಯೋಜನೆಯ ಸ್ವರೂಪ ಹಾಗೂ ಉದ್ದೇಶವನ್ನು ಬದಲಾಯಿಸಲು ಮುಂದಾಗಿರುವ ಕೇಂದ್ರದ ಎನ್‌ಡಿಎ ಸರ್ಕಾರದ ತೀರ್ಮಾನ ಖಂಡನೀಯ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದೇಶದ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಯಾವುದೇ ಯೋಜನೆಯನ್ನು ರೂಪಿಸಲು ಆಡಳಿತಾರೂಢ ಸರ್ಕಾರಗಳು ಮುಕ್ತ ಅವಕಾಶವನ್ನು ಹೊಂದಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಅಧಿಕಾರರೂಢ ಬಿಜೆಪಿ ಪಕ್ಷ ತನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಹೊಸ ಯೋಜನೆಯನ್ನೆ ಘೋಷಣೆ ಮಾಡಿ ಜಾರಿ ಮಾಡಬಹುದಿತ್ತು. ಆದರೆ ಪ್ರಸ್ತುತ ಇರುವ ಜನಪ್ರಿಯ ಯೋಜನೆಯಾದ ನರೇಗಾವನ್ನು ಹೆಸರು ಬದಲಾವಣೆ ಮಾಡಿ ಮುಂದುವರೆಸುವುದರ ಹಿಂದೆ ಕೇಂದ್ರ ಸರ್ಕಾರಕ್ಕೆ ನಿರ್ದಿಷ್ಟ ಕಾರ್ಯಸೂಚಿ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ್ದ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ ಹೆಸರಿನಲ್ಲಿ ಜಾರಿಯಾಗಿರುವ ಈ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಮಹಾತ್ಮ ಗಾಂಧೀಜಿಯವರ ಹೆಸರನ್ನು ದೇಶದ ಜನರ ಮನಸ್ಸಿನಿಂದ ಅಳಿಸಬಹುದು ಎನ್ನುವ ಭ್ರಮೆಯಲ್ಲಿ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ. ಬದಲಾವಣೆಯಾಗಿರುವ ಯೋಜನೆಯಲ್ಲಿ ಸಾಕಷ್ಟು ಹೊಸ ನಿಬಂಧನೆಗಳನ್ನು ಅಳವಡಿಸಲಾಗಿದ್ದು, ರಾಜ್ಯ ಸರ್ಕಾರ ಯೋಜನೆಯ ಒಟ್ಟು ವೆಚ್ಚದ ಶೇ.40 ಭರಿಸಬೇಕು, ಇಂಟರ್‌ನೆಟ್ ಆಧಾರಿತ ಕೂಲಿಕಾರರ ಹಾಜರಾತಿ ಕಡ್ಡಾಯಗೊಳಿಸಬೇಕು ಎನ್ನುವುದು ಸೇರಿದಂತೆ ಬಡ ಕೂಲಿಕಾರರಿಗೆ ತೊಡಕಾಗುವ ಹಲವು ಅವೈಜ್ಞಾನಿಕ ಅಂಶಗಳು ಸೇರ್ಪಡೆಯಾಗಿರುವ ಕುರಿತು ಮಾಹಿತಿಗಳಿವೆ. ಯೋಜನೆಗೆ ರಾಜ್ಯ ಸರ್ಕಾರದ ಪಾಲನ್ನು ಕಡ್ಡಾಯಗೊಳಿಸಿರುವುದರಿಂದ ಪ್ರತೀ ರಾಜ್ಯ ಸರ್ಕಾರಗಳಿಗೂ ವಾರ್ಷಿಕ ವೆಚ್ಚದಲ್ಲಿ ಹೆಚ್ಚಿನ ಹೊರೆ ಬೀಳಲಿದೆ. ಈ ಕಾರಣಕ್ಕಾಗಿಯೇ ನಿರೀಕ್ಷಿತ ರೀತಿಯಲ್ಲಿ ಯೋಜನೆಯ ಉಪಯೋಗ ಸಾಮಾನ್ಯ ಜನರಿಗೆ ದೊರಕದೆ ಇರುವ ಸಾಧ್ಯತೆಗಳು ಇದೆ ಎಂದು ಜೆ.ಪಿ ಹೆಗ್ಡೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.