ತಪ್ಪಿತಸ್ಥನನ್ನೂ ಮಾನವಿಯತೆಯಿಂದ ನೋಡುವ ವ್ಯವಸ್ಥೆ ದೇಶದಲ್ಲಿದೆ

KannadaprabhaNewsNetwork | Published : Dec 11, 2024 12:46 AM

ಸಾರಾಂಶ

ಶಿವಮೊಗ್ಗ : ಓರ್ವ ವ್ಯಕ್ತಿ ಅಪರಾಧ ಕೃತ್ಯವೆಸಗಿ, ತಪ್ಪಿತಸ್ಥ ಎಂದು ಸಾಬೀತಾಗಿ ಜೈಲು ಸೇರಿದ ನಂತರವೂ ಆತನನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳುವ ವ್ಯವಸ್ಥೆ ನಮ್ಮ ದೇಶದಲ್ಲಿದ್ದು, ಇದು ಮಾನವ ಹಕ್ಕುಗಳ ಮೌಲ್ಯದ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದರು.

ಶಿವಮೊಗ್ಗ : ಓರ್ವ ವ್ಯಕ್ತಿ ಅಪರಾಧ ಕೃತ್ಯವೆಸಗಿ, ತಪ್ಪಿತಸ್ಥ ಎಂದು ಸಾಬೀತಾಗಿ ಜೈಲು ಸೇರಿದ ನಂತರವೂ ಆತನನ್ನು ಮಾನವೀಯ ದೃಷ್ಟಿಯಿಂದ ನೋಡಿಕೊಳ್ಳುವ ವ್ಯವಸ್ಥೆ ನಮ್ಮ ದೇಶದಲ್ಲಿದ್ದು, ಇದು ಮಾನವ ಹಕ್ಕುಗಳ ಮೌಲ್ಯದ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

2011ರ ನವೆಂಬರ್ ನ.26 ರಂದು ಓರ್ವ ಉಗ್ರ ಮುಂಬೈ ಮೇಲೆ ದಾಳಿ ನಡೆಸಿ ಸಾವು, ನೋವಿಗೆ ಕಾರಣರಾಗಿದ್ದರೂ, ಆತನಿಗೆ ಒಬ್ಬ ವಕೀಲರನ್ನು ನೇಮಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸಿ ತಪ್ಪಿತಸ್ಥ ಎಂದು ಘೋಷಣೆಯಾದ ಮೇಲೂ ಜೈಲಿನಲ್ಲಿಯೂ ಮಾನವೀಯತೆಯಿಂದ ನೋಡಿಕೊಳ್ಳಲಾಯಿತು. ಇದು ಮಾನವ ಹಕ್ಕುಗಳ ಮೌಲ್ಯಕ್ಕಿರುವ ಒಂದು ಉದಾಹರಣೆ. ಇದು ನಮ್ಮ ದೇಶದಲ್ಲಿರುವ ಮಾನವ ಹಕ್ಕುಗಳಿಗಿರುವ ಪ್ರಾಮುಖ್ಯತೆ ತೋರುತ್ತದೆ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ಸರ್ಕಾರದಂತೆಯೇ ಎನ್‌ಜಿಒ ಪಾತ್ರವೂ ಬಹಳ ದೊಡ್ಡದಿದೆ ಎಂದರು.

ಮಾನವ ಹಕ್ಕುಗಳ ಸಮಿತಿಗಳೂ ಕಾರ್ಯ ನಿರ್ವಹಿಸುತ್ತಿದ್ದು, ಮಾನವ ಹಕ್ಕುಗಳ ರಕ್ಷಣೆಗೆ ಸಾಕಷ್ಟು ಕಾನೂನುಗಳಿವೆ. ಅದನ್ನು ಜಾರಿಗೊಳಿಸುವ ಇಚ್ಛಾಶಕ್ತಿ ಎಲ್ಲರಲ್ಲಿ ಇರಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಕಾನೂನಾತ್ಮಕ, ಸಂವಿಧಾನಾತ್ಮಕ ಮತ್ತು ಮಾನವ ಹಕ್ಕುಗಳು ಈ ಮೂರು ರೀತಿಯ ಹಕ್ಕುಗಳನ್ನು ನಾವು ಹೊಂದಿದ್ದೇವೆ. ಹಾಗೂ ನಮ್ಮ ಸಂವಿಧಾನ ಆರು ರೀತಿಯ ಮೂಲಭೂತ ಹಕ್ಕುಗಳನ್ನು ನೀಡಿದೆ. ಇಡೀ ವಿಶ್ವಕ್ಕೇ ಅನ್ವಯವಾಗುವುದು ಮಾನವ ಹಕ್ಕುಗಳು. ಇದು ಹುಟ್ಟಿನಿಂದ ಬಂದದ್ದು. ವಿಶ್ವಸಂಸ್ಥೆ ಇವುಗಳನ್ನು ಗುರುತಿಸಿ ಅಂಗೀಕರಿಸಿದೆ ಎಂದರು.

ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಮೀತಲ್ ಮಾತನಾಡಿ, 2016ರಲ್ಲಿ ಮಾನವ ಹಕ್ಕುಗಳ ಸಮಿತಿ ರಚನೆಯಾಗಿದ್ದು, ಅಂದಿನಿಂದ ಮಾನವ ಹಕ್ಕುಗಳ ಕುರಿತು ಅನೇಕ ಅರಿವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಎಲ್ಲರೂ ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಂಡು, ಎಲ್ಲರೂ ಮತ್ತೊಬ್ಬರ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೊಷ್.ಎಂ.ಎಸ್.ಮಾತನಾಡಿದರು.

ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಎಂ.ಎಂ.ಗೋಪಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ರಾಜ್ಯ ಸಹ ಕಾರ್ಯದರ್ಶಿ ಮಹೇಶ್.ಎನ್, ಎ.ಆರ್.ರವಿಕುಮಾರ್ ಪಾಲ್ಗೊಂಡಿದ್ದರು.

Share this article