ಕಲಬುರಗಿಯಲ್ಲಿ ಮತ್ತೆ ಕೋವಿಡ್‌ ಹಾವಳಿ

KannadaprabhaNewsNetwork | Updated : Dec 27 2023, 01:32 AM IST

ಸಾರಾಂಶ

ಕೋವಿಡ್‌ ಮೊದಲ ಅಲೆಯಲ್ಲಿ ದೇಶದಲ್ಲೇ ಮೊದಲ ಸಾವು ಕಂಡಿದ್ದ ಕಲಬುರಗಿಯಲ್ಲಿ ನೆರೆಯ ರಾಜ್ಯ ಮಹರಾಷ್ಟ್ರದಿಂದ ನಗರಕ್ಕೆ ಆಗಮಿಸಿದ್ದ ಬಾಲಕಿಗೆ ಕೋವಿಡ್‌ ದೃಢಪಟ್ಟಿದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಮುಂಬೈನಿಂದ ಕಲಬುರಗಿಗೆ ಆಗಮಿಸಿದ ಬಾಲಕಿಯೊಬ್ಬಳಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಇದರಿಂದಾಗಿ ಕಳೆದ ಒಂದೂವರೆ ವರ್ಷದ ಬಳಿಕ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್‌ ಪ್ರಕರಣ ಇದಾಗಿದೆ.

ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದ ಬಾಲಕಿ ಕ್ಷಯರೋಗ (ಟಿಬಿ) ಚಿಕಿತ್ಸೆಗಾಗಿ ಡಿ.23ರಂದು ಜಿಮ್ಸ್‌ಗೆ ದಾಖಲಾಗಿದ್ದಳು. ಆಕೆಯಲ್ಲಿ ನಿರಂತರ ಜ್ವರ ಇರುವುದು ಕಂಡು ಬಂದಿದ್ದು, ಇನ್ನೂ ಕೆಲವು ರೋಗ ಲಕ್ಷಣಗಳು ಕಂಡು ಬಂದಿದ್ದವು. ಪರೀಕ್ಷೆ ಮಾಡಿದಾಗ ಕೋವಿಡ್ ದೃಢ ಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಲಕಿಗೆ ಕೋವಿಡ್ ಹಾಗೂ ಕ್ಷಯರೋಗ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಸಂಪರ್ಕಕ್ಕೆ ಬಂದವರನ್ನು ಐಸೊಲೇಷನ್ ಮಾಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ ಸಂಶಯಾಸ್ಪದ 23 ಜನರಿಗೆ ಪರೀಕ್ಷೆ ಮಾಡಲಾಗಿದೆ. ಕೋವಿಡ್‌ ಮಾರಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ಇಡೀ ದೇಶದಲ್ಲೇ ಕಲಬುರಗಿಯಲ್ಲೇ ಮೊದಲ ಸಾವು ಸಂಭವಿಸಿತ್ತು. ಇದೀಗ ಕೋವಿಡ್‌ನ ಅಬ್ಬರ ರಾಜ್ಯದಲ್ಲಿ ಶುರುವಾಗುತ್ತಿರುವ ಬೆನ್ನಲ್ಲೇ ಕಲಬುರಗಿಯಲ್ಲಿ ಅದಾಗಲೇ ಬಾಲಕಿಗೆ ಕೋವಿಡ್‌ ಧೃಢಪಟ್ಟಿರೋದರಿಂದ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಅಬ್ಬರ ಕಾಣಿಸಿಕೊಳಲ್ಲಬಹುದಾದ ಆತಂಕ ಎದುರಾಗಿದೆ.

ಎಲ್ಲಾ ತಾಲೂಕು ಆಸ್ಪತ್ರೆ, ಕಲಬುರಗಿ ನಗರದಲ್ಲಿರುವ ಜಿಮ್ಸ್‌ ಆಸ್ಪತ್ರೆಯಲ್ಲಿ ಎಲ್ಲಾ ತರಹದ ಅಂದರೆ ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಕಾನ್ಸನ್‌ಟ್ರೇಟರ್‌, ಐಸಿಯು ಹಾಸಿಗಗಳು, ಟೆಸ್ಟಿಂಗ್ ತಯಾರಿ ಮಾಡಿಕೊಂಡಿದ್ದು, ಎಲ್ಲಾ ಸಭೆ ಸಮಾರಂಭ ಗಳಲ್ಲಿ, ಯಾರಿಗಾದರೂ ನೆಗಡಿ, ಕೆಮ್ಮು, ದಮ್ಮು, ಇದ್ದರೆ ಹಾಗು 60 ವಯಸ್ಸು ನಂತರ ಯಾವದೇ ಬಿಪಿ, ಶುಗರ್, ಯಾವದೇ ಕಾಯಿಲೆ ಇದ್ದರೆ ಅವರು ತಪ್ಪದೆ ಮಾಸ್ಕ್‌ ಹಾಕಿಕೊಳ್ಳಲು ಡಿಎಚ್‌ಓ ಡಾ. ರಾಜಶೇಖರ ಮಾಲಿ ಕೋರಿದ್ದಾರೆ.

ಗಡಿಯಲ್ಲಿ ಇನ್ನೂ ಇಲ್ಲ ಕಟ್ಟೆಚ್ಚರ:

ಕೋವಿಡ್ ಮಾರಿ ಕೇರಳದಿಂದ ಮಹಾರಾಷ್ಟ್ರ ಮೂಲಕವಾಗಿ ಕಲಬುರಗಿಗೆ ಅದಾಲೇ ಪ್ರವೇಶ ಮಾಡಿದ್ದೂ ಸಹ ಇಲ್ಲಿನ್ನೂ ಮಹಾರಾಷ್ಟ್ರ ಗಡಿಗೆ ಅಂಟಿಕೊಂಡಿರುವ ಜಿಲ್ಲೆಯ ಸರಹದ್ದಿನಲ್ಲಿ ಕಟ್ಟೆಚ್ಚರದ ಕ್ರಮಗಳು ಕೈಗೊಂಡಿಲ್ಲ. ಇದರಿದಾಗಿ ಜಿಲ್ಲೆಯ ಜನತೆ ಮತ್ತೆ ಹೆದರುವಂತಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಕಲಬುರಗಿಯಲ್ಲಿ ಬಾಲಕಿಗೆ ಅದಾಗಲೇ ಮಹಾಮಾರಿ ಕಾಣಿಸಿಕೊಂಡಿದೆ. ಇಷ್ಟಿದ್ದರೂ ಸಹ ಮಹಾರಾಷ್ಟ್ರ ರಾಜ್ಯಕ್ಕೆ ಅಂಟಿರುವ ಗಡಿಯನ್ನು ಭದ್ರ ಪಡಿಸಲಾಗುತ್ತಿಲ್ಲ. ಅಲ್ಲಿ ಯಾವುದೇ ತರಹದ ತಪಾಸಮೆಗಳನ್ನು ಕೈಗೊಳ್ಳಲಾಗುತ್ತಿಲ್ಲ.

ಕಲಬುರಗಿ ಜಿಲ್ಲೆಯಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ಹೋಗುವ ಗಡಿಯಲ್ಲಿ ತಪಾಸಣೆ ಇನ್ನೂ ಶುರುವಾಗಿಲ್ಲ. ಕಳೆದ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳಕ್ಕೆ ಮಹಾರಾಷ್ಟ್ರದ ಕೊಡುಗೆ ಹೆಚ್ಚಾಗಿತ್ತು. ಚೆಕ್ ಪೋಸ್ಟ ಮಾಡಿ ವ್ಯಾಪಕ ತಪಾಸಣೆ ಕೈಗೊಳ್ಳಲಾಗಿತ್ತು. ಇದೀಗ ಗಡಿಯಲ್ಲಿ ತಪಾಸಣೆನ್ನೇ ಪುನಾರಂಭಿಸಿಲ್ಲ. ಇದರಿಂದಾಗಿ ಅದೆಲ್ಲಿ ಕೋವಿಡ್‌ ಹೆಮ್ಮಾರಿ ಕಲಬುರಗಿ ಆವರಿಸುವುದೋ ಎಂದು ಜನತೆ ಕಳವಳಗೊಂಡಿದ್ದಾರೆ.

ಪ್ರಕರಣಗಳು ತೀವ್ರಗೊಳ್ಳುವ ಮುನ್ನ ಎಚ್ಚರಿಕೆಯ ಕ್ರಮ ಕೈಗೊಳ್ಳಲು ಜಿಲ್ಲಯ ಜನತೆ ಜಿಲ್ಲಾಡಳಿತವನ್ನು ಆಗ್ರಹಿಸುತ್ತಿದ್ದಾರೆ. ಸರಕಾರ ಈ ಬಗ್ಗೆ ಇನ್ನೂ ನಿರ್ದಿಷ್ಟ ಗೈಡ್ ಲೈನ್ ಹೊರಡಿಸಿಲ್ಲದ ಕಾರಣ ಜಿಲ್ಲಾಡಳಿತ ಈ ವಿಚಾರದಲ್ಲಿ ಏನನ್ನೂ ಮಾಡಲಾಗದೆ ಹಾಗೇ ಸುಮ್ಮನಿದ್ದುಬಿಟ್ಟಿದೆ.

ಇನ್ನೂ ರೂಪಗೊಳ್ಳದ ಮಾರ್ಗಸೂಚಿ:

ಕೋವಿಡ್‌ನ ರೂಪಾಂತರಿ ತಳಿ ಹೊರಬಿದ್ದಿರುವ ಹಿನ್ನೆಲೆಲ್ಲಿ ರೈಲು, ವಿಮಾನ ಪ್ರಯಾಣಿಕರು ಅನುಸರಿಸಬೇಕಾದಂತಹ ಕ್ರಮಗ ನಿರ್ದಿಷ್ಟ ಮಾರ್ಗಸೂಚಿ ಇನ್ನೂ ಬಂದಿಲ್ಲ. ಹೀಗಾಗಿ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಬಂದು ಹೋಗುವ ಪ್ರಯಾಣಿಕರನ್ನು ಯಾವುದೇ ತಪಾಸಣೆಗೊಳಪಡಿಸದೆ ಹಾಗೇ ಬಿಡಲಾಗುತ್ತಿದೆ. ಇಲ್ಲಿನ ವಿಮಾನ ನಿಲ್ದಾಣಲ್ಲಿ ಸಬ್ಬಂದಿಗೆ ಮಾಸ್ಕ್‌ ಕಡ್ಡಾ ಮಾಡಲಾಗಿದ್ದರೂ ಎಲ್ಲರೂ ಅದನ್ನು ಪಾಲಿಸುತ್ತಿಲ್ಲ. ಇದೀಗ ಪ್ರತಿಯೊಬ್ಬರುಮಾಸ್ಕ್‌ ಧರಿಸಬೇಕು ಎಂದು ಸೂಚಿಸಿ ಅರಂತೆ ಕ್ರಮಕ್ಕೂ ಮುಂದಾಗೋದಾಗಿ ವಿಮಾನ ನಿಲ್ದಾಣದ ನಿರ್ದೇಶಕ ಮಹೇಶ ಚಿಲ್ಕಾ ಹೇಳಿದ್ದಾರೆ.

ಕೈ ಕಟ್ಟಿ ಕುಳಿತ ಕಲಬುರಗಿ ಜಿಲ್ಲಾಡಳಿತ:

ಕಲಬುರಗಿ ವೈದ್ಯಕೀಯ, ಶಿಕ್ಷಣದ ಕೇಂದ್ರವಾಗಿದೆ. ಇಲ್ಲಿರುವ ಕೇಂದ್ರೀಯ ವಿವಿ, ವೈದ್ಯಕೀಯ, ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕೇರಳ, ತಮಳುನಾಡು ಸೇರಿದಂತೆ ನಾನಾ ರಾಜ್ಯಗಳ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೀಗಾಗಿ ಕಲಬುರಗಿಯಲ್ಲಿ ಆದಷ್ಟು ಬೇಗ ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಮೆ ಆಂಭಿಸೋದು ಮುಖ್ಯವಾಗಿದೆ. ಇದಲ್ಲದೆ ಇಲ್ಲಿನವರು ವ್ಯಾಪಾರ- ವಹಿವಾಟು ಹೆಚ್ಚಿಗೆ ಹೊಂದಿರೋದು ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದಲೇ ಇರೋದರಿಂದ ಈ ಹಿನ್ನೆಲೆಯಲ್ಲಿ ಕೋವಿಡ್‌ ತಪಾಸಣೆ, ಗಡಿಯಲ್ಲಿ ಕಟ್ಟೆಚ್ಚರ ಕ್ರಮಗಳು ಮುಖ್ಯವಾಗಿವೆ. ಕೋವಿಡ್‌ ಸೋಂಕು ಪತ್ತೆಯಾದ ನಂತರ ಆಸ್ಪತ್ರೆಗೆ ಸೇರಿಸಲು, ಚಿಕಿತ್ಸೆಗೆ ಸಿದ್ಧತೆಯಾಗಿವೆ.

ಅಸಲಿಗೆ ಇಲ್ಲಿ ಯಾವುದೇ ಕಾರಣಕ್ಕೂ ಕೋವಿಡ್‌ ಸೋಂಕು ಹರಡಬಾರದು, ಅಕ್ಕಪಕ್ಕದ ಜಿಲ್ಲೆಗಳಿಂದ ಬಂದು ಹೋಗುವವರ ಮೇಲೆ ನಿಗಾ ಇಡೋದು ಸೇರಿದತೆ ಅದಾಗಲೇ ಕೈಗೊಳ್ಳಬೇಕಾಗಿದ್ದಂತಹ ಮುನ್ನೆಚ್ಚರಿಕೆ ಕ್ರಮಗಳು ಇನ್ನೂ ಕೈಗೊಳ್ಳದೆ ಇರುವುದು ದುರಂತವೇ ಸರಿ ಎಂದು ಜರೇ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ದೂರುತ್ತಿದ್ದಾರೆ.

Share this article