ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತೀರದ ಪ್ರದೇಶದಲ್ಲಿನ ಬತ್ತದ ಹುಲ್ಲು ಜಾನುವಾರುಗಳ ಹಸಿವು ನೀಗಿಸುತ್ತಿದ್ದು, ಬರದಲ್ಲೂ ಬತ್ತದ ಮೇವಿಗೆ ಭಾರೀ ಬೇಡಿಕೆ ಬಂದಿದೆ.ಮೇವು ಮತ್ತು ಕುಡಿಯುವ ನೀರು ಅರಸಿ ವಿವಿಧ ಕಡೆಗಳಿಂದ ಜಾನುವಾರು ಕುರಿ-ಮೇಕೆಗಳು ಬರುತ್ತಿವೆ. ಈಗಾಗಲೇ ನದಿ ತೀರದ ಪ್ರದೇಶದಲ್ಲಿನ ಸಾವಿರಾರು ಎಕರೆ ಪ್ರದೇಶದಲ್ಲಿರುವ ಬತ್ತ ಕಟಾವು ಮಾಡಿದ್ದಾರೆ. ಹೈನುಗಾರಿಕೆಗಾಗಿ ಜಾನುವಾರುಗಳ ಸಾಕಾಣಿಕೆ ಮಾಡಿಕೊಂಡಿರುವ ರೈತರು, ನದಿ ತೀರದಲ್ಲಿರುವ ಬತ್ತದ ಹುಲ್ಲು ಖರೀದಿಗೆ ಮುಂದಾಗಿದ್ದಾರೆ.
ಮಳೆ ಇಲ್ಲದೇ ಅಂತರ್ಜಲ ಕುಸಿದು ಕೊಳವೆಬಾವಿಗಳು ಬತ್ತಿವೆ. ಹೈನುಗಾರಿಕೆಗಾಗಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಮೇವಿಗೆ ನೀರಲ್ಲದೇ ಒಣಗಿ ಹೋಗಿದೆ. ಇದರಿಂದ ಒಣ ಬತ್ತದ ಹುಲ್ಲು ಹಾಗೂ ಮೆಕ್ಕೆಜೋಳದ ರವದಿಯೇ (ಮೇವು) ಆಧಾರವಾಗಿದೆ. ಇಂತಹ ಮೇವನ್ನು ಹಾಲು ಕೊಡುವ ಜಾನುವಾರುಗಳಿಗೆ ಹಾಕಿದ್ದು, ಹಾಲಿನ ಉತ್ಪಾದನೆ ಕುಸಿತ ಕಂಡಿದೆ.
ಉಪ ಜೀವನಕ್ಕಾಗಿ ರೈತರ ಕೈ ಹಿಡಿಯಬೇಕಿದ್ದ ಹೈನುಗಾರಿಕೆಯು ಬರದ ಕೆನ್ನಾಲಿಗೆಗೆ ತುತ್ತಾಗಿವೆ. ಇತ್ತ ಹಸಿರು ಮೇವು, ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿದೆ. ವರ್ಷಾನುಗಟ್ಟಲೇ ಜಾನುವಾರುಗಳನ್ನು ಸಾಕಾಣಿಕೆ ಮಾಡಲು ಮೇವು ಸಂಗ್ರಹ ಮಾಡಿಕೊಳ್ಳಲು ಹೈರಾಣಾಗಿದ್ದಾರೆ. ರೈತರು ತಮ್ಮ ಜಾನುವಾರುಗಳನ್ನು ಸಾಕಾಣಿಕೆ ಮಾಡಿಕೊಳ್ಳಲು ಆಗದೇ ಮಾರಾಟಕ್ಕೆ ಮುಂದಾಗುವ ಪರಿಸ್ಥಿತಿ ಎದುರಾಗಿದೆ.ಜಾನುವಾರುಗಳು ಕುಡಿಯುವ ನೀರಿನ ವ್ಯವಸ್ಥೆಗಾಗಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ತೊಟ್ಟಿ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಆದರೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ನೀರಿನ ತೊಂದರೆ ಉಂಟಾಗಿರುವ ಪ್ರದೇಶಗಳಲ್ಲಿ ಜಾನುವಾರುಗಳಿಗೆ ರೈತರ ಹೊಲದಲ್ಲಿನ ಕೊಳವೆಬಾವಿ ನೀರು ಕುಡಿಸುತ್ತಿದ್ದಾರೆ.
ತಾಲೂಕಿನಲ್ಲಿ 50 ಸಾವಿರಕ್ಕೂ ಅಧಿಕ ಜಾನುವಾರುಗಳಿವೆ. ಒಂದೂವರೆ ಲಕ್ಷ ಕುರಿ ಮೇಕೆಗಳಿವೆ. ಜತೆಗೆ ನೀರು ಹಾಗೂ ಮೇವು ಇಲ್ಲದ ಪ್ರದೇಶಗಳಿಂದ 40ರಿಂದ 45 ಸಾವಿರ ಕುರಿ ಮತ್ತು ಜಾನುವಾರುಗಳಿವೆ. ಮೇವಿನ ಕೊರತೆಯಿಂದ ಕಳೆದ ಒಂದೂವರೆ ತಿಂಗಳಿಂದ ನದಿ ತೀರ ಪ್ರದೇಶದಲ್ಲೇ ಬೀಡುಬಿಟ್ಟಿವೆ.ತಾಲೂಕಿನಲ್ಲಿ ಮೇವಿನ ಕೊರತೆ ಕಂಡು ಬಂದಿಲ್ಲ. ಇಂತಹ ಪರಿಸ್ಥಿತಿ ಬರಬಹುದೆಂಬ ಕಾರಣಕ್ಕಾಗಿ ಈಗಾಗಲೇ ₹5 ಲಕ್ಷನಲ್ಲಿ 50 ಟನ್ ಮೇವು ಸಂಗ್ರಹಿಸಲು ಟೆಂಡರ್ ಕರೆಯಲಾಗಿದೆ. ಆದರೆ ಇನ್ನು ಮೇವು ಸಂಗ್ರಹಿಸಿಲ್ಲ ಎನ್ನುತ್ತಾರೆ ಹೂವಿನಹಡಗಲಿ ಹಿರಿಯ ಪಶು ವೈದ್ಯ ನಾರಾಯಣ ಬಣಕಾರ.
ಇಟ್ಟಗಿ ಹೋಬಳಿ ವ್ಯಾಪ್ತಿ ಹೈನುಗಾರಿಕೆ ಹೆಚ್ಚಿದೆ. ಆದರೆ ಮೇವಿನ ಕೊರತೆ ಕಾಡುತ್ತಿದೆ. ಪಶು ಇಲಾಖೆ ಮೇವಿನ ಬ್ಯಾಂಕ್ ತೆರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಆದರೆ ಈ ವರೆಗೂ ಮೇವಿನ ಬ್ಯಾಂಕ್ ತೆರೆದಿಲ್ಲ. ನದಿ ತೀರದ ಪ್ರದೇಶದಲ್ಲಿರುವ ಬತ್ತದ ಗದ್ದೆಯಲ್ಲಿನ ಹುಲ್ಲು ಖರೀದಿ ಮಾಡುತ್ತಿದ್ದೇವೆ ಎನ್ನುತ್ತಾರೆ ಇಟ್ಟಗಿ ರೈತ ಹನುಮಂತಪ್ಪ.