ಕನ್ನಡಪ್ರಭ ವಾರ್ತೆ ಮೈಸೂರು
ಲಾಭವನ್ನು ಮಾತ್ರ ಆಲೋಚಿಸುವ ಸ್ಥಳದಲ್ಲಿ ನೆಮ್ಮದಿ ಕಡಿಮೆ ಇರುತ್ತದೆ. ಲಾಭ ಬಡುಕತನವು ಮನುಷ್ಯನನ್ನು ನೋಡುವ ದೃಷ್ಟಿಯನ್ನು ಬೇರೆ ಆಗಿಸುತ್ತದೆ ಎಂದು ಚಲನಚಿತ್ರ ನಟ, ನಿರ್ದೇಶಕ ಬಿ. ಸುರೇಶ್ ಅಭಿಪ್ರಾಯಪಟ್ಟರು.ನಗರದ ರವಿವರ್ಮ ಚಿತ್ರಕಲಾ ಶಾಲೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಿನಿಮೊಟೋಗ್ರಫಿ ಮತ್ತು ಫೋಟೋಗ್ರಫಿ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೆಮ್ಮದಿಯ ಬಗ್ಗೆ ಯೋಚಿಸುವ ಕಡೆ ಆನಂದ ಇರುತ್ತದೆ. ಆದರೆ ಲಾಭದ ಹಿಂದೆ ಬಿದ್ದಾಗ ನೆಮ್ಮದಿ ಇರುವುದಿಲ್ಲ. ಕಲಾವಿದರಾದವರು ಬಡವರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಉದಾಹರಣೆಗೆ ಮೈಸೂರಿನ ಕಲಾವಿದರು ಅರಮನೆಯ ಹಿನ್ನೆಲೆಯಲ್ಲಿ ಪಾನಿಪುರಿ ಮಾರುವ ಅಥವಾ ಐಷಾರಾಮಿ ವಾಹನದ ಮುಂದೆ ತಳ್ಳುಗಾಡಿಯವನನ್ನು ಕುರಿತಾದ ಛಾಯಾಚಿತ್ರಗಳನ್ನು ತೆಗೆಯುವುದು, ಬಿಡಿಸುವುದು ಆದ್ಯತೆ ಆಗಿರುತ್ತದೆ ಎಂದರು.ಇಂತಹ ಮನಸ್ಸುಳ್ಳ ಕಲಾವಿದರು ಮಾತ್ರ ನಾಳೆಗಳನ್ನು ಕಟ್ಟುತ್ತಾರೆ. ಶೇ. 60ಕ್ಕಿಂತ ಹೆಚ್ಚು ಮಂದಿ 400 ರೂ. ಸಂಪಾದನೆಗಾಗಿ ದಿನ ಕಳೆಯುತ್ತಾರೆ. ಅವರೇ ಈ ನಾಡಿನ ಬಹುಸಂಖ್ಯಾತರು. ಶ್ರೀಮಂತರಲ್ಲದ ನಿಜವಾದ ಬಡವರು ಬಹು ಸಂಖ್ಯಾತರಾಗಿದ್ದಾರೆ. ಅಂತವರ ಸಂಕಟ ದಾಖಲಿಸಬೇಕು. ದುರಿತ ಕಾಲದಲ್ಲಿ ಬರೆಯುವ ಪದ್ಯ, ಪೇಂಟಿಂಗ್ ಅಮೂಲ್ಯವಾದವು ಎಂದರು.
ದೇವನಹಳ್ಳಿ ಬಳಿ ರೈತರ ಜಮೀನನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಬಹುದೊಡ್ಡ ಹೋರಾಟ ನಡೆಯುತ್ತಿದ್ದರೂ, ರೈತರ ಮಾತನ್ನು ಯಾವ ಸರ್ಕಾರವೂ ಕೇಳುತ್ತಿಲ್ಲ. ಅಂದರೆ ಕೈಗಾರಿಕೆ ಮಾಡುವುದರ ಹಿಂದಿನ ಆಲೋಚನೆ ಏನು? ಆಧುನಿಕ ಜಗತ್ತಿನ ಹೆಸರಿನಲ್ಲಿ ಜಮೀನು ಪಡೆಯಲಾಗುತ್ತಿದೆ. ತಾಂತ್ರಿಕತೆ ಎಂಬುದು ನಮಗೆ ಹೊಸದಲ್ಲ. ಹರಪ್ಪ, ಮೆಹೆಂಜೋದರೋದಲ್ಲಿ ನಿರ್ಮಿಸಿರುವ ರಸ್ತೆ, ಚರಂಡಿ ಮುಂತಾದ ಸೌಲಭ್ಯವು ಈಗಲೂ ಹಾಗೆಯೇ ಇದೆ. ಆದರೆ ನಮ್ಮ ಶಾಸಕರು, ಸಂಸದರು ಮಾಡಿದ ರಸ್ತೆಗಳು, ಮೋರಿಗಳು ಸರಿಯಾದ ಮಳೆ ಬಂದರೆ ಇರುವುದಿಲ್ಲ. ಮಹಾರಾಜರು ನಿರ್ಮಿಸಿದ ಮೈಸೂರಿನ ರಸ್ತೆಗಳು ಹಾಗೆಯೇ ಇದೆ. ಆದರೆ ಈಗಿನ ರಸ್ತೆಗಳೇಕೆ ಹೀಗಿವೆ ಎಂದು ಪ್ರಶ್ನಿಸಿದರು.ಇಲ್ಲಿ ಲಾಭ ಬಡುಕುತನ ಕೆಲಸ ಮಾಡುತ್ತಿದೆ. ನಾವು ದೇವಸ್ಥಾನ ಕಟ್ಟುವವರಿಗೆ ಓಟು ಹಾಕುತ್ತೇವೆ. ಶಾಲೆ ಕಟ್ಟುವವರನ್ನು ಮರೆಯುತ್ತೇವೆ. ಆಗ ನಮ್ಮ ಸಮಾಜ ಅವನತಿಯತ್ತ ಹೋಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ವ್ಯಾನ್ ಗಾಗ್ ಕಡೆಯ ಚಿತ್ರ ಜೋಳದ ಹೊಲದಲ್ಲಿ ಹಾರುತ್ತಿರುವ ಪಕ್ಷಿಗಳದ್ದಾಗಿತ್ತು. ಈ ಚಿತ್ರಬರೆದ ಕೆಲವೇ ಹೊತ್ತಿನಲ್ಲಿ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಹಿನ್ನೆಲೆ ತಿಳಿಯದೇ ಚಿತ್ರ ನೋಡುವವರಿಗೆ ಅದು ಬರಿಯ ಚಿತ್ರವಾಗಿ ಕಾಣಿಸುತ್ತದೆ ಎಂದರು.ನಾವು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ಕಾರ್ಯಕ್ರಮದ ಬಳಿಕ ನಾನು ಉಪನ್ಯಾಸ ನೀಡುತ್ತೇನೆ. ಬಳಿಕ ನಿಮ್ಮೊಡನೆ ಸಂವಾದ ನಡೆಸುತ್ತೇನೆ. ಪ್ರಶ್ನೆ ಕೇಳುವವ ಬೆಳೆಯುತ್ತಾನೆ. ಕೇಳದವ ಮೂಲೆ ಸೇರುತ್ತಾನೆ. ಪುರುಷ ನಿರ್ಮಿತ ಸಮಾಜವು ಎಲ್ಲರನ್ನು ದೇವರು ಮಾಡುತ್ತದೆ. ಗುರುವನ್ನು ದೇವರು ಮಾಡಿ ಪ್ರಶ್ನಿಸದೆ ಇದ್ದು ಬಿಡುತ್ತೇವೆ. ಚಾಮುಂಡಿಯೇ ಆಗಲಿ, ಗುರುವೇ ಆಗಲಿ ಪ್ರಶ್ನೆ ಕೇಳಿ. ಆ ಮೂಲಕ ನಿಮ್ಮ ಜೀವನ ಬೆಳಗಲಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದೆ ಆರ್. ರಶ್ಮಿ, ಹಿರಿಯ ಛಾಯಾಚಿತ್ರ ಕಲಾವಿದ ಎಂ.ಆರ್. ಮಂಜುನಾಥ್, ಶಾಲೆಯ ಪ್ರಾಂಶುಪಾಲ ಶಿವಕುಮಾರ ಕೆಸರಮಡು ಇದ್ದರು.