.ತುರುವೇಕೆರೆ ರಸ್ತೆಗಳಲ್ಲಿಯೇ ಹೂಳು, ಕೇಳೋರಿಲ್ಲ ಗೋಳು

KannadaprabhaNewsNetwork | Published : Dec 18, 2024 12:46 AM

ಸಾರಾಂಶ

ತುರುವೇಕೆರೆ ತಾಲೂಕಿನ ಹಲವಾರು ಮುಖ್ಯ ರಸ್ತೆಗಳು ಗುಂಡಿಯಿಂದ ಕೂಡಿವೆ. ಇಲ್ಲಿಯ ತಿಪಟೂರು ರಸ್ತೆಯಂತೂ ಕೇಳುವಂತೆಯೇ ಇಲ್ಲ. ಪಟ್ಟಣದ ಕೃಷ್ಣ ಚಿತ್ರಮಂದಿರದಿಂದ ಆಲ್ಬೂರು ಗೇಟ್‌ವರೆಗೆ ಸಾವಿರಾರು ಗುಂಡಿಗಳು ಬಿದ್ದಿವೆ.

ಎಸ್.ನಾಗಭೂಷಣ ಕನ್ನಡಪ್ರಭ ವಾರ್ತೆ, ತುರುವೇಕೆರೆ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಜನರಿಗೆ ಮಾತ್ರ ಜೀವವಿದೆಯಾ?. ಅವರು ಸಂಚರಿಸುವ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರೆ, ಅಥವಾ ಅನಾಹುತವಾಗಿ ಜೀವಕ್ಕೆ ತೊಂದರೆಯಾದರೆ ದೊಡ್ಡ ಸುದ್ದಿಯಾಗುತ್ತದೆ. ಇಡೀ ಬೆಂಗಳೂರಿನ ಆಡಳಿತ ವ್ಯವಸ್ಥೆಯೇ ಅದರ ದುರಸ್ಥಿಗೆ ಸಿದ್ಧವಾಗುತ್ತದೆ. ಆದರೆ ದಾರಿಯುದ್ದಕ್ಕೂ ಗುಂಡಿಗಳದ್ದೇ ಕಾರುಬಾರಾಗಿರುವ ಈ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಜನರ ಜೀವಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.

ತಾಲೂಕಿನ ಹಲವಾರು ಮುಖ್ಯ ರಸ್ತೆಗಳು ಗುಂಡಿಯಿಂದ ಕೂಡಿವೆ. ಇಲ್ಲಿಯ ತಿಪಟೂರು ರಸ್ತೆಯಂತೂ ಕೇಳುವಂತೆಯೇ ಇಲ್ಲ. ಪಟ್ಟಣದ ಕೃಷ್ಣ ಚಿತ್ರಮಂದಿರದಿಂದ ಆಲ್ಬೂರು ಗೇಟ್‌ವರೆಗೆ ಸಾವಿರಾರು ಗುಂಡಿಗಳು ಬಿದ್ದಿವೆ. ಸುಮಾರು 1-2 ಅಡಿ ಆಳ, ಮೂರ್‍ನಾಲ್ಕು ಅಡಿ ಉದ್ದದ ಗುಂಡಿಗಳು ಮೃತ್ಯುವಿಗಾಗಿ ಬಾಯ್ತೆರೆದುಕೊಂಡು ಕುಳಿತಿವೆ. ದ್ವಿ ಚಕ್ರ ವಾಹನದ ಚಾಲಕರಂತೂ ತಮ್ಮ ಜೀವವನ್ನು ಕೈಲಿ ಹಿಡಿದುಕೊಂಡೇ ಹೋಗಬೇಕು. ಯಾವ ಕ್ಷಣದಲ್ಲಿ ಅಪಘಾತವಾಗುತ್ತದೋ ಎಂಬ ಆತಂಕದಲ್ಲೇ ವಾಹನ ಚಾಲನೆ ಮಾಡಬೇಕಿದೆ. ಇರುವ ರಸ್ತೆಯೋ ತೀರ ಚಿಕ್ಕದಾಗಿದ್ದು, ಅದರಲ್ಲಿ ರಸ್ತೆಯ ಅಕ್ಕ ಪಕ್ಕ ವಾಹನಗಳನ್ನೂ ಸಹ ನಿಲ್ಲಿಸಲಾಗುತ್ತದೆ. ಇನ್ನು ಗುಂಡಿಗಳ ಸಾಮ್ರಾಜ್ಯ ಬೇರೆ. ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋದರೆ ಮುಂದುಗಡೆಯಿಂದ ಬರುವ ವಾಹನಕ್ಕೆ ಡಿಕ್ಕಿ ಹೊಡೆಯಬೇಕಾಗುತ್ತದೆ. ವಾಹನವನ್ನು ನಿಧಾನವಾಗಿ ಚಲಿಸಿದರೆ, ಹಿಂಬದಿಯ ವಾಹನ ಡಿಕ್ಕಿ ಹೊಡೆಯುತ್ತದೆ. ಇನ್ನು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತವರ ಸ್ಥಿತಿಯಂತೂ ಆಯೋಮಯ. ಎಷ್ಟು ಹೊತ್ತಿಗೆ ತಮ್ಮ ಸ್ಥಳ ತಲುಪುತ್ತೇವೋ ಎಂಬ ಆತಂಕದಲ್ಲೇ ಪ್ರಯಾಣಿಸುವಂತಾಗಿದೆ. ಮನೆ ತಲುಪುವಷ್ಟರಲ್ಲಿ ಎಲ್ಲಾ ದೇವರಿಗೂ ಮನಸ್ಸಿನಲ್ಲೇ ಕೈ ಮುಗಿದು ಪ್ರಾಣಭಿಕ್ಷೆ ಬೇಡುತ್ತಾರೆ. ಅಲ್ಲದೇ ಈ ದುರವಸ್ಥೆಗೆ ಕಾರಣರಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಾರೆ.ತಾಲೂಕಿನ ಪ್ರಮುಖ ಗ್ರಾಮವಾಗಿರುವ ತಂಡಗ ಗ್ರಾಮದೊಳಗೆ ಇರುವ ಸೇತುವೆಯ ಮೇಲೆ ಹಾಕಿದ್ದ ಕಾಂಕ್ರೀಟ್ ಕಿತ್ತು ಬಂದು ವರ್ಷಗಳೇ ಕಳೆದಿವೆ. ಕಾಂಕ್ರೀಟ್ ಕಿತ್ತು ಬಂದ ಫಲವಾಗಿ ಕಬ್ಬಿಣದ ಸರಳುಗಳು ಭೂಮಿಯಿಂದ ಮೇಲೆ ಬಂದಿವೆ. ದ್ವಿಚಕ್ರವಾಹನ ಸವಾರರು ಅಲ್ಲದೇ ಓಡಾಡುವವರಿಗೂ ತೊಂದರೆಯಾಗಿದೆ. ಕಳಪೆ ಕಾಮಗಾರಿಯ ಫಲವಾಗಿ ಇಂದು ಜನಸಾಮಾನ್ಯರು ತೊಂದರೆ ಅನುಭವಿಸುಂತಾಗಿದೆ.

ಜೀವಕ್ಕೆ ಬೆಲೆ ಇಲ್ಲ

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಗ್ರಾಮಾಂತರ ಜನರ ಜೀವಕ್ಕೆ ಬೆಲೆ ಇಲ್ಲ ಎಂದುಕೊಂಡಿದ್ದಾರೆ. ಜೀವ ಹೋದ ಮೇಲೆ ಲಕ್ಷಾಂತರ ರು. ಪರಿಹಾರ ರೂಪವಾಗಿ ಕೊಡುವ ಬದಲು ಕೂಡಲೇ ಎಚ್ಚೆತ್ತು ಗುಂಡಿಗಳನ್ನು ಮುಚ್ಚಿಸಿ ಅಮೂಲ್ಯ ಜೀವಗಳನ್ನು ಉಳಿಸಿ ಎಂದು ಪರಿಸರವಾದಿ ಜಿ.ಸಿ.ಶ್ರೀನಿವಾಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ರಸ್ತೆ ಸರಿಪಡಿಸದಿದ್ದರೆ ರಸ್ತೆಯಲ್ಲಿ ಪೈರು ನಾಟಿ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಕೋಟ್‌ 1

ತುರುವೇಕರೆ ಸೇರಿದಂತೆ ತಾಲೂಕಿನ ಎಲ್ಲ ರಸ್ತೆಗಳು ಹಾಳಾಗಿವೆ. ಈ ಕುರಿತು ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ಅರಿವಿದೆ. ಆದರೂ ಸಹ ಯಾವೊಬ್ಬ ಪಕ್ಷದ ಮುಖಂಡರು ಸಹ ಈ ಕುರಿತು ಕನಿಷ್ಟ ಪಕ್ಷ ಹೋರಾಟ ಮಾಡದೆ ಇರುವುದು ನಮ್ಮ ತುರುವೇಕೆರೆ ಜನರ ದುರಂತ. ಕಾರಣ ಚುನಾವಣೆ ಇದ್ದಾಗ ಮಾತ್ರವೇ ಅವರಿಗೆ ನಮ್ಮ ನೆನಪಾಗುತ್ತದೆ. ಪ್ರತಿ ದಿನ ಈ ರಸ್ತೆಗಳಲ್ಲಿ ಸಾಗುವ ನಮಗೆ ಧೂಳಿನ ಮಜ್ಜನವಾಗುದರ ಜೊತೆಗೆ ಯಾವಾಗ ಏನಾಗುತ್ತದೆಯೆ ಎನ್ನುವ ಭಯ ಆವರಿಸಿದೆ. - ಸುರೇಶ್ ಸ್ಥಳೀಯರು.

ಬಾಕ್ಸ್‌..

ಸ್ವಲ್ಪದಲ್ಲಿರಲ್ಲಿಯೇ ತಪ್ಪಿದ ಅನಾಹುತ

ಮಂಗಳವಾರ ತಿಪಟೂರು ಮಾರ್ಗವಾಗಿ ತುರುವೇಕೆರೆಗೆ ಬಂದ ಕೆಎಸ್‌ಆರ್‌ಟಿಸಿ ಬಸ್ ಪೂರ್ತಿ ಪ್ರಯಾಣಿಕರು ತುಂಬಿದ್ದರು. ದಾರಿಯುದ್ದಕ್ಕೂ ಇರುವ ಗುಂಡಿಗಳ ಕಾಟದಿಂದ ಬಸ್ ನ ಮುಂಭಾಗದ ಆಕ್ಸಲ್ ಬ್ಲೇಡ್ ತುಂಡಾಯಿತು. ಅದೃಷ್ಟವೆಂದರೆ ಬಸ್ ನ್ನು ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿದೆ. ಆಕಸ್ಮಾತ್ ಬಸ್ ಸಂಚರಿಸುವ ಸಂದರ್ಭದಲ್ಲಿ ಆಕ್ಸಲ್ ಬ್ಲೇಡ್ ತುಂಡಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಕೆಲವೇ ಅಂತರದಲ್ಲಿ ಕೆರೆ ಇದ್ದು ಆ ಕೆರೆಯ ಮೇಲೆ ಬಸ್ ಆಗಷ್ಟೇ ಸಾಗಿ ಬಂದಿತ್ತು.

Share this article