ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ಆಂಜನೇಯ ಹೇಳಿಕೆ

KannadaprabhaNewsNetwork | Published : Apr 30, 2024 2:14 AM

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಹೇಳಿಲ್ಲ. ಅಧಿಕಾರ ಇರುವವರೆಗೂಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಕಾಂಗ್ರೆಸ್ಸಿನ ಮಾಜಿ ಸಚಿವ ಎಚ್.ಆಂಜನೇಯ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜನಹಿತಕ್ಕಾಗಿ ಗ್ಯಾರಂಟಿ ಯೋಜನೆಗಳ ರೂಪಿಸಿರುವ ದೂರದೃಷ್ಟಿ ನಾಯಕ ಸಿದ್ದರಾಮಯ್ಯ: ಮಾಜಿ ಸಚಿವ- - -ಕನ್ನಡಪ್ರಭ ವಾರ್ತೆ, ದಾವಣಗೆರೆರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೂ ಹೇಳಿಲ್ಲ. ಅಧಿಕಾರ ಇರುವವರೆಗೂಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಕಾಂಗ್ರೆಸ್ಸಿನ ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳು ಇರುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಇರುವವರೆಗೂ ಗ್ಯಾರಂಟಿ ಇರುತ್ತವೆ ಎಂದು ನಾವು ಭರವಸೆ ನೀಡುತ್ತೇವೆ. ಗ್ಯಾರಂಟಿಗಳಿಂದಾಗಿ ಕರ್ನಾಟಕವು ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ದಿವಾಳಿ ಆಗುತ್ತದೆ ಎಂದೆಲ್ಲಾ ಅಪಪ್ರಚಾರ ಮಾಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಯೋಜನೆ ನಿಲ್ಲುವುದಿಲ್ಲ ಎಂದು ಪುನರುಚ್ಛರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಆರ್ಥಿಕ ತಜ್ಞರಾಗಿದ್ದು, ದಾಖಲೆಯ ಬಜೆಟ್ ಮಂಡಿಸಿರುವ ಅನುಭವಿಗಳು. ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೆ ಯಾವ ಕೊರತೆಯೂ ಆಗದಂತೆ ಅನುದಾನವನ್ನು ನೀಡಲಾಗಿದೆ. ಮುಂಚೆ ಯೋಚಿಸಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ದೂರದೃಷ್ಟಿತ್ವದ ನಾಯಕ ಸಿದ್ದರಾಮಯ್ಯ. ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಇತರೇ ರಾಜ್ಯದವರು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.- - -ಬಾಕ್ಸ್‌

ಬಿಜೆಪಿ ಅಧಿನಾಯಕರ ಅಟ್ಟಹಾಸಕ್ಕೆ ಜನ ಅಂತ್ಯ ಹಾಡ್ತಾರೆ

ಕನ್ನಡಪ್ರಭ ವಾರ್ತೆ, ದಾವಣಗೆರೆಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚಜನ ಕಲ್ಯಾಣ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕೇವಲ ಇಬ್ಬರೇ ಇಬ್ಬರು ಅಧಿನಾಯಕರಿದ್ದಾರೆ. ಈ ಇಬ್ಬರೂ ಅಧಿನಾಯಕರು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಇಂತಹ ಅಟ್ಟಹಾಸಕ್ಕೆ ರಾಜ್ಯದ ಜನತೆ ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಹಾಡಲಿದ್ದಾರೆ ಎಂದರು.ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದ, ಸಮಾನತೆ ಅರಿವಿಲ್ಲದ ಬಿಜೆಪಿ ಜನರನ್ನು ಶೋಷಣೆಗೀಡು ಮಾಡುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ದಾಖಲೆಯ ಅಂತರದಲ್ಲಿ ಜಯ ಸಾಧಿಸುವುದು ಶತಃಸಿದ್ಧ. ಡಾ.ಪ್ರಭಾ ಪ್ರಚಾರಕ್ಕೆ ಹೋದಲ್ಲೆಲ್ಲಾ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಿಲ್ಲಾದ್ಯಂತ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಚಾರ ಕೈಗೊಳ್ಳುತ್ತಿದ್ದು, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ನರೇಂದ್ರ ಮೋದಿ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ ಹೆಚ್ಚುತ್ತಲೇ ಇದೆ. ಬಿಜೆಪಿ ಆಡಳಿತದಲ್ಲಿ ಶೇ.25ರಷ್ಟು ಉಳ್ಳವರ ಪರ ಬಳಕೆ ಮಾಡುತ್ತಿದ್ದು, ಶೇ.75 ಜನರ ಜೀವನ ನಿರ್ವಹಣೆಯಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಡವರು, ರೈತರ ಸಾಲ ಮನ್ನಾ ಮಾಡದೇ, ಕೇವಲ ಬಂಡವಾಳಶಾಹಿಗಳ ಪರವಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ಜಾತಿ-ಜಾತಿ, ಧರ್ಮ ಧರ್ಮಗಳ ಮಧ್ಯೆ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇಂದ ಪಕ್ಷವನ್ನು ಮತದಾರರು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಮನವಿ ಮಾಡಿದರು.ಪಕ್ಷದ ಹಿರಿಯ ಮುಖಂಡರಾದ ಬಿ.ಎಚ್.ವೀರಭದ್ರಪ್ಪ, ಎನ್.ನೀಲಗಿರಿಯಪ್ಪ, ಬಿ.ಎಚ್.ಉದಯಕುಮಾರ, ಎಸ್.ಮಲ್ಲಿಕಾರ್ಜುನ, ಎಲ್.ಡಿ.ಗೋಣೆಪ್ಪ, ರಮೇಶ, ಉಚ್ಚೆಂಗೆಪ್ಪ, ಶಂಕರ, ಚಿರಂಜೀವಿ ಇತರರು ಇದ್ದರು.

- - --29ಕೆಡಿವಿಜಿ1:ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್‌ ಮಾಜಿ ಸಚಿವ ಎಚ್.ಆಂಜನೇಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article