ರಕ್ತದಾನಕ್ಕಿಂತ ಮಹತ್ತರವಾದ ದಾನ ಇನ್ನೊಂದಿಲ್ಲ: ಹುಸೇನಿ

KannadaprabhaNewsNetwork | Published : Aug 18, 2024 1:52 AM

ಸಾರಾಂಶ

donation, blood, donate, workshop,

-ಶಹಾಪುರ ನಗರದ ಅಂಜುಮನ್ ಶಾಲೆಯಲ್ಲಿ ಪೀಪಲ್ಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

-----

ಕನ್ನಡಪ್ರಭ ವಾರ್ತೆ ಶಹಾಪುರ

ರಕ್ತದಾನಕ್ಕಿಂತ ಮಹತ್ತರವಾದ ದಾನ ಇನ್ನೊಂದಿಲ್ಲ. ರಕ್ತಕ್ಕೆ ಯಾವುದೇ ಜಾತಿ, ಧರ್ಮಗಳಿಲ್ಲ. ಅದರ ಗುಣವೇ ಒಂದೇ ಇನ್ನೊಬ್ಬರ ಜೀವ ಉಳಿಸುವುದು ಎಂದು ಮುಸ್ಲಿಂ ಸಮುದಾಯದ ಮುಖಂಡ ಸೈಯದ್ ಮಹೇಮೂದ್ ಹುಸೇನಿ ಹೇಳಿದರು.

ನಗರದ ಅಂಜುಮನ್ ಶಾಲೆಯಲ್ಲಿ ಪೀಪಲ್ಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟ್ರಸ್ಟಿನ ಅಧ್ಯಕ್ಷ ಸೈಯದ್ ಇಸಾಕ್ ಹುಸೇನ್ ಖಾಲಿದ್ ಅವರು ಬಹಳ ವರ್ಷಗಳಿಂದ ಈ ನಾಡು-ನುಡಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಾ, ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.

ಜಾತಿ, ಧರ್ಮ, ಮತಕ್ಕಿಂತ ಮಾನವೀಯ ಮೌಲ್ಯಗಳು ಶ್ರೇಷ್ಠ ಎಂದು ನಂಬಿರುವ ಟ್ರಸ್ಟಿನ ಅಧ್ಯಕ್ಷರ ಕಾರ್ಯ ಶ್ಲಾಘನೀಯ. ಕಳೆದೆರಡು ವರ್ಷಗಳ ಹಿಂದೆ ಉಚಿತ ಆರೋಗ್ಯ ಶಿಬಿರ ನಡೆಸುವ ಮೂಲಕ 1100 ಜನ ಇದರ ಉಪಯೋಗ ಪಡೆದುಕೊಂಡರು. ಕಳೆದ ವರ್ಷ ಇದೆ ಸ್ವಾತಂತ್ರ್ಯ ದಿನ ಕಾರ್ಯಕ್ರಮದ ಪ್ರಯುಕ್ತ ನಡೆದ ರಕ್ತದಾನ ಶಿಬಿರದಲ್ಲಿ 180ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ಈ ಬಾರಿ ಅಂದಾಜು ನೂರು ಜನ ರಕ್ತದಾನ ಮಾಡಿರುವುದು ಪುಣ್ಯದ ಕೆಲಸ ಅವರ ಸಮಾಜಮುಖಿ ಕಾರ್ಯ ಇನ್ನು ಹೆಚ್ಚಿನ ರೀತಿಯಲ್ಲಿ ಸಾಗಲೆಂದು ಹಾರೈಸಿದರು.

ಕೋಲಿ ಸಮಾಜದ ಹಿರಿಯ ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ, ವ್ಯಕ್ತಿಯ ಜೀವ ಉಳಿಸುವ ಶಕ್ತಿ ಇರುವುದು ರಕ್ತಕ್ಕೆ ಮಾತ್ರ. ಓರ್ವ ರಕ್ತದಾನಿಯಿಂದ ನಾಲ್ಕು ಜನರ ಜೀವ ಉಳಿಸಲು ಸಾಧ್ಯ. ಇದಕ್ಕಾಗಿಯೇ ಆರೋಗ್ಯವಂತರು ರಕ್ತದಾನ ಮಾಡಬೇಕೆಂದು ಸಲಹೆ ನೀಡಿದರು.

ಕಾಂಗ್ರೆಸ್ ಹಿರಿಯ ಮುಖಂಡ ಇಬ್ರಾಹಿಂ ಸಾಬ್ ಶಿರವಾಳ ಮಾತನಾಡಿ, ಯಾವ ವ್ಯಕ್ತಿಗೆ ರಕ್ತದ ಅವಶ್ಯವಿದೆಯೇ ಅವರಿಗೆ ರಕ್ತವನ್ನು ನೀಡುವುದು ಪುಣ್ಯದ ಕಾರ್ಯ. ನಾವು ಕೊಡುವ ಒಂದು ಬಾಟಲ್‌ ರಕ್ತ ಒಂದು ಜೀವವನ್ನು ಉಳಿಸಲು ಸಾಧ್ಯ. ಯಾವುದೇ ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.

ಸೈಯದ್ ಶಫಿ ಸರಮನ್, ಸೈಯದ್ ಸಯಿದುದ್ದಿನ್ ಖಾದ್ರಿ, ಮಹಾದೇವಪ್ಪ ಸಾಲಿಮಾನಿ, ಶೇಖ್ ಕಲೀಮ್ ತವಕ್ಕಲಿ, ಲಿಯಾಖತ್ ಖುರೆಷಿ, ಚಾಂದ್ ಪಟೇಲ ಅಧ್ಯಕ್ಷರು ವಿ ಕೇರ್ ಆಸ್ಪತ್ರೆ, ರಾಜಬಗ್ದಾನ್ ಅಧ್ಯಕ್ಷರು ಬಗ್ಗಾನ್, ಟ್ರಸ್ಸಿನ ಪದಾಧಿಕಾರಿಗಳು ಇದ್ದರು.-----

...ಕೋಟ್.....

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡ ಜನರಿಗೆ ವೈದ್ಯಕೀಯ ಸೇವೆ ನೀಡುತ್ತೇವೆ. ರಕ್ತದಾನ ಮತ್ತು ನೇತ್ರದಾನ ಶಿಬಿರ ನಡೆಸುತ್ತೇವೆ. ಕೋಮು ಸೌಹಾರ್ದಕ್ಕಾಗಿ ವಿಶಿಷ್ಟ ಕಾರ್ಯಕ್ರಮಗಳು, ಜಾಥಾಗಳನ್ನು ಆಯೋಜಿಸುತ್ತೇನೆ. ಸರ್ಕಾರಿ ಶಾಲಾ-ಕಾಲೇಜುಗಳ ಆವರಣ ಮತ್ತು ಕೆರೆಗಳ ಅಂಗಳದಲ್ಲಿ ಸಸಿ ನೆಡುತ್ತೇವೆ.

- ಸೈಯದ್ ಇಸಾಕ್ ಹುಸೇನ್ ಖಾಲಿದ್, ಅಧ್ಯಕ್ಷರು, ಪೀಪಲ್ಸ್ ಫೌಂಡೇಶನ್ ಟ್ರಸ್ಟ್, ಶಹಾಪುರ.

----

ಫೋಟೊ:17ವೈಡಿಆರ್7: ಶಹಾಪುರ ನಗರದ ಅಂಜುಮನ್ ಶಾಲೆಯಲ್ಲಿ ಪೀಪಲ್ಸ್ ಫೌಂಡೇಶನ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

Share this article