ಹೇಮಾವತಿ ನಾಲೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರವಿಲ್ಲ

KannadaprabhaNewsNetwork |  
Published : Oct 10, 2023, 01:00 AM IST
9ಕೆಎಂಎನ್‌ಡಿ-7ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಹೇಮಾವತಿ ನೀರು ಬಳಕೆದಾರರ ಸಂಘ, ಪಾಂಡವಪುರ ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧಿನಾಧಿಕಾರಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸಭೆ ಜಂಟಿ ಸಭೆ ನಡೆಯಿತು. | Kannada Prabha

ಸಾರಾಂಶ

ಹೇಮಾವತಿ ನಾಲೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರವಿಲ್ಲ

- 25 ವರ್ಷವಾದರೂ ಪರಿಹಾರ ನೀಡದ್ದಕ್ಕೆ ಜಿಲ್ಲಾಧಿಕಾರಿ ಗರಂ - ನಾಲೆ ತೆಗೆದು ಸುಮ್ಮನೆ ಕುಳಿತುಕೊಂಡರೆ ಹೇಗೆ? ಕನ್ನಡಪ್ರಭ ವಾರ್ತೆ ಮಂಡ್ಯ ಹೇಮಾವತಿ ನಾಲೆಗೆ ಭೂಮಿ ಕಳೆದುಕೊಂಡು 25 ವರ್ಷವಾದರೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ರೈತರ ಒಪ್ಪಿಗೆ ಇಲ್ಲದೆ ಅವರ ಜಮೀನಿನಲ್ಲಿ ಕಾಲುವೆ ನಿರ್ಮಿಸಿದ್ದೀರಿ. ಯಾವ ಯಾವ ಗ್ರಾಮದ ಎಷ್ಟೆಷ್ಟು ರೈತರ ಜಮೀನು ನಾಲೆಗೆ ಹೋಗಿದೆ ಎಂಬ ಮಾಹಿತಿಯೂ ಇಲ್ಲ. ನಾಲೆ ತೆಗೆದು ಸುಮ್ಮನೆ ಕುಳಿತರೆ ಹೇಗೆ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ತರಾಟೆ ತೆಗೆದುಕೊಂಡರು. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಹೇಮಾವತಿ ನೀರು ಬಳಕೆದಾರರ ಸಂಘ, ಪಾಂಡವಪುರ ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧಿನಾಧಿಕಾರಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸಭೆ ಜಂಟಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದರು. ಭೂಮಿ ಕಳೆದುಕೊಂಡ ರೈತರಿಗೆ 25 ವರ್ಷವಾದರೂ ಪರಿಹಾರ ನೀಡದಿರಲು ಕಾರಣವೇನು. ನಾಲೆಗೆ ಎಷ್ಟು ಜಮೀನು ಹೋಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲವೇಕೆ. ಇದೇನಾ ನೀವು ಕೆಲಸ ಮಾಡುವ ರೀತಿ. ಸಂಬಂಧಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಭೂಮಿ ಕಳೆದುಕೊಂಡ ರೈತರಿಗೆ ಸಲಹೆ ನೀಡಿದರು. 11-ಇ ಸ್ಕೆಚ್‌ಗೆ ಹಣವನ್ನು ರೈತರು ಏಕೆ ಕಟ್ಟಬೇಕು. ಭೂಮಿ ಬೇಕಿರುವುದು ನಿಮಗೆ. ನೀವು ಹಣ ಕಟ್ಟಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ದೂರವಾಣಿ ಮೂಲಕ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರನ್ನು ಸಂಪರ್ಕಿಸಿ 11-ಇ ಸ್ಕೆಚ್‌ಗೆ ಹಣ ನೀಡುವಂತೆ ಕೋರಿ ಅದಕ್ಕೆ ಸಮ್ಮತಿಯನ್ನು ಪಡೆದುಕೊಂಡರು. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ, ಬೆಳ್ಳೂರು, ಕಸಬಾ ಮತ್ತು ದೇವಲಾಪುರ ಹೋಬಳಿ 42 ಗ್ರಾಮಗಳ 545 ಸರ್ವೆ ನಂಬರ್‌ಗಳಿಗೆ ಅಂದಾಜು 5 ಲಕ್ಷ ರು. ಹಣವನ್ನು ಸರ್ವೆ ಇಲಾಖೆಗೆ ಕಟ್ಟಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ನನ್ನ ಬಳಿ ಹೇಮಾವತಿ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಮತ್ತು ಹಲವು ರೈತರು ಸಾಕಷ್ಟು ಬಾರಿ ಬಂದು ಭೂ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ನೀವು ನಾಲೆ ತೆಗೆದು ಸುಮ್ಮನೆ ಕುಳಿತರೆ ಹೇಗೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಈ ನಡುವೆ 11-ಇ ಸ್ಕೆಚ್ ಮಾಡುವಾಗ ಆರ್‌ಟಿಸಿ ಮತ್ತು ಭೂಮಿಗೂ ತಾಳೆ ಬರದಿದ್ದರೆ ನೀವು ಮತ್ತು ತಹಸಿಲ್ದಾರ್ ಕುಳಿತು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಬಹುಬೇಗ ಪ್ತಕರಣಗಳನ್ನು ಇತ್ಯರ್ಥಗೊಳಿಸಿ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಅವರಿಗೆ ಸೂಚಿಸಿದರು. ಭೂಸ್ವಾಧೀನ ಇಲಾಖೆಯಲ್ಲಿ ಏಕೈಕ ನೌಕರರಿದ್ದು, ಮೇಲಧಿಕಾರಿಗಳಿಗೆ ಬರೆದು ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಅಪರೇಟರ್ ಮತ್ತು ನೌಕರರನ್ನು ನೇಮಕ ಮಾಡಿಕೊಳ್ಳುವಂತೆ ವಿಶೇಷ ಭೂಸ್ವಾಧಿನಾಧಿಕಾರಿ ವಿಶ್ವನಾಥ್ ಅವರಿಗೆ ಸೂಚನೆ ನೀಡಿದರು. ನಾಗಮಂಗಲ ತಾಲೂಕಿನ ಮೈಲಾರಪಟ್ಟಣದ ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ.ಸಿ.ಮೋಹನ್ ಕುಮಾರ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಷ್ಟು ವರ್ಷವಾದರೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಯಲ್ಲಿ ನೀರು ಬಿಡಲು ಬಂದಾಗ ರೈತರು ಪರಿಹಾರ ಕೊಡಿ ಎಂದು ನೀರು ಬಿಡಲು ಅಡ್ಡಿಪಡಿಸುತ್ತಾರೆ. ಆಗ ಅಧಿಕಾರಿಗಳು ಪೊಲೀಸರಿಗೆ ರೈತರ ಮೇಲೆ ದೂರು ನೀಡಿ ನೀರು ತೆಗೆದುಕೊಂಡು ಹೋಗುತ್ತಾರೆ. ಇದು ಪ್ರತಿ ವರ್ಷ ಆಗುತ್ತಿದೆ. ಈಗ 11ಇ ಸ್ಕೆಚ್ ಗೆ ಆದೇಶ ಆಗಿರುವ ರೈತರಿಗೆ ಶೀಘ್ರಗತಿಯಲ್ಲಿ ಸ್ಕೆಚ್ ಮಾಡಿಸಿ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದರು. ಪ್ರತಿ 15 ದಿನಗಳಿಗೊಮ್ಮೆ ತಮ್ಮ ನೇತೃತ್ವದಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ, ನಾಗಮಂಗಲ ತಹಶೀಲ್ದಾರ್‌ ಮತ್ತು ನಾಗಮಂಗಲದ ಭೂದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿ ಭೂಸ್ವಾಧೀನದ ಪ್ರಗತಿ ಪರಿಶೀಲನೆ ನಡೆಸುತ್ತೇನೆಂದರು. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಬರುವ ಹೇಮಾವತಿ ಎಡದಂಡೆ ನಾಲೆ ನಾಗಮಂಗಲದ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿ.ಎನ್. ಶಿಲ್ಪ, ಎಇಇ ಭಾಸ್ಕರ್, ನಾಗಮಂಗಲ ಶಾಖಾ ಕಾಲುವೆ ಯಡಿಯೂರು ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಸ್.ಟಿ.ಶ್ರೀನಿವಾಸ್ ಅವರು ಆಸ್ಥೆವಹಿಸಿ ಪರಿಹಾರ ನೀಡಲು ಗಮನಹರಿಸುತ್ತೇವೆ ಎಂದರು. ಎಇಇಗಳಾದ ಜೆ.ಬಿ.ರುದ್ರೇಶ್, ಸುಧಾಜೈನ್, ರಾಜೇಗೌಡ, ಎಇ ಗಳಾದ ರಾಜು, ನವೀನ್, ಭೂಸ್ವಾಧೀನ ಇಲಾಖೆಯ ಪಾರ್ವತಿ, ಹೇಮಾವತಿ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ನರಸಿಂಹೇಗೌಡ, ಖಜಾಂಚಿ ಎಚ್.ಎಂ.ವೆಂಕಟೇಶ್, ನಿರ್ದೇಶಕರುಗಳಾದ ರಾಜಣ್ಣ, ಬೋರೇಗೌಡ, ಎಚ್.ಎಂ.ನಾಗೇಶ್, ಮೈಲಾರಪಟ್ಟಣ, ಯಗಟಹಳ್ಳಿ, ಕೃಷ್ಣಾಪುರ, ಚಿಕ್ಕಜಟಕ ಕೆರೆಮೇಗಲಕೊಪ್ಪಲು, ತೊಳಲಿ ಗ್ರಾಮಗಳ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು