ಎಸ್‌ಐಆರ್‌ ಬಗ್ಗೆ ಬೆಳಗಾವಿಯಲ್ಲಿ ಗೊಂದಲವಿಲ್ಲ

KannadaprabhaNewsNetwork |  
Published : Oct 06, 2026, 04:15 AM IST
ಪೊಟೋ ಅ.5ಎಂಡಿಎಲ್ 1. ಗೋವಿಂದ ಕಾರಜೋಳ ಸಂಸದರು ಚಿತ್ರದುರ್ಗ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಜಿಲ್ಲೆಯಲ್ಲಿ ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ವಿಚಾರವಾಗಿ ಸದ್ಯ ಯಾವುದೇ ಗೊಂದಲವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲೆಯಲ್ಲಿ ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ವಿಚಾರವಾಗಿ ಸದ್ಯ ಯಾವುದೇ ಗೊಂದಲವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸೋಮವಾರ ಖಾನಾಪುರ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಾಗಿದೆ. ಉದ್ದೇಶಪೂರ್ವಕವಾಗಿ ತಪ್ಪು ಅರ್ಜಿ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದ್ದು, ಅರ್ಜಿ ಸಲ್ಲಿಸಿದ ಬಳಿಕ ಏಳು ದಿನಗಳೊಳಗೆ ನೋಟಿಸ್ ನೀಡಲಾಗುತ್ತದೆ. ಆರೋಪ ಸಾಬೀತಾದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಕಾನೂನು ಪ್ರಕಾರ ಅರ್ಜಿ ಸಲ್ಲಿಸಲು ಸ್ಪಷ್ಟ ನಿಯಮಗಳಿವೆ. ಬಿಎಲ್‌ಎ–2 ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸರಿಯಾಗಿದ್ದರೆ ಮಾತ್ರ ಪರಿಗಣಿಸಲಾಗುತ್ತದೆ. ಅರ್ಹ ಮತದಾರರ ಮತದಾನದ ಹಕ್ಕಿಗೆ ಧಕ್ಕೆಯಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದರು.

ಬೆಳಗಾವಿಯಲ್ಲಿ ಒಂದೇ ಒಂದು ಅರ್ಹ ಮತದಾರನ ಮತವನ್ನೂ ಅಳಿಸಲಾಗಿಲ್ಲ. ಯಾರದ್ದಾದರೂ ಹೆಸರು ಬಿಟ್ಟುಹೋಗಿದ್ದರೆ ಮಾಹಿತಿ ನೀಡಿದರೆ, ಪರಿಶೀಲಿಸಿ ಮತ್ತೆ ಸೇರ್ಪಡೆ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬಿಜೆಪಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ. ತಾವು ಸಲ್ಲಿಸಿದ್ದ ಅರ್ಜಿಗಳನ್ನು ಇದೀಗ ವಾಪಸ್ ಪಡೆಯುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ಎಸ್‌ಐಆರ್‌ ವಿಚಾರದಲ್ಲಿ ಯಾವುದೇ ಆತಂಕದ ಅಗತ್ಯವಿಲ್ಲ ಎಂದರು.

ಕಬ್ಬಿಗೆ ₹6 ಸಾವಿರ ಬೆಲೆ: ಕೇಂದ್ರವೇ ನಿರ್ಧರಿಸಬೇಕು:

ಕಬ್ಬಿಗೆ ಟನ್‌ಗೆ ₹6 ಸಾವಿರ ಬೆಲೆ ನಿಗದಿಪಡಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕಾರ್ಖಾನೆಗಳು ಮತ್ತು ರೈತರ ನಡುವೆ ಒಪ್ಪಂದವಾದ ಬಳಿಕವೇ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಇನ್ನೂ ಸಮಯವಿದೆ ಎಂದು ಹೇಳಿದರು.

ಕಬ್ಬಿನ ಬೆಲೆಯನ್ನು ₹6 ಸಾವಿರಕ್ಕೆ ನಿಗದಿಪಡಿಸುವುದಾದರೆ ಕೇಂದ್ರ ಸರ್ಕಾರವೇ ಎಂಎಸ್‌ಪಿ ಹೆಚ್ಚಿಸಬೇಕು. ಈ ಬೆಲೆಯನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಂಎಸ್‌ಪಿ ಹೆಚ್ಚಿಸುವಂತೆ ನಿಯೋಗದ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರತಿವರ್ಷ ಎಂಎಸ್‌ಪಿ ಹೆಚ್ಚಿಸುವಂತೆ ಮನವಿ ಮಾಡಲಾಗುತ್ತಿದ್ದು, ಈವರೆಗೆ ಹೆಚ್ಚಳವಾಗಿಲ್ಲ. ಈ ವರ್ಷ ಎಂಎಸ್‌ಪಿ ಹೆಚ್ಚಾಗುವ ಸಾಧ್ಯತೆಯಿದೆ ಎಂದ ಅವರು, ರೈತರ ಸಭೆ ನಡೆದ ಬಳಿಕ ಕೇಂದ್ರ ಸರ್ಕಾರ ಆಹ್ವಾನ ನೀಡಿದರೆ ಸಭೆಗೆ ತೆರಳುತ್ತೇವೆ. ಸದ್ಯ ಕೇಂದ್ರದಿಂದ ಯಾವುದೇ ಆಹ್ವಾನ ಬಂದಿಲ್ಲ ಸ್ಪಷ್ಟಪಡಿಸಿದರು.

ಖಾಲಿ ಸಚಿವ ಸ್ಥಾನ ಶೀಘ್ರ ಭರ್ತಿ:

ರಾಜ್ಯದಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಆದಷ್ಟು ಬೇಗ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಬ್ಬಂದಿ ಕೊರತೆ; ಸಾರ್ವಜನಿಕ ಸೇವೆಗಳಿಗೆ ಅಡಚಣೆ
ಶೇಡಬಾಳದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ