ಪೀಠಕ್ಕೂ, ಟ್ರಸ್ಟಿಗೂ ಸಂಬಂಧ ಇಲ್ಲ: ಉಚ್ಚಾಟನೆ ಕಾನೂನು ಬಾಹಿರ: ಕೂಡಲ ಶ್ರೀ

KannadaprabhaNewsNetwork |  
Published : Sep 23, 2025, 01:06 AM IST
ಕೂಡಲಸಂಗಮ ಸಂಗಮೇಶ್ವರ ದೇವಾಲಯ ಆವರಣದ ಆಲದ ಮರದ ಕೆಳಗೆ ಖಂಡನಾ ಸಭೆ ಮಾಡಿದರು | Kannada Prabha

ಸಾರಾಂಶ

ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾವು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇವೆ. ಪೀಠಕ್ಕೂ ಟ್ರಸ್ಟ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ನಾವು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇವೆ. ಪೀಠಕ್ಕೂ ಟ್ರಸ್ಟ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಸೋಮವಾರ ನಡೆದ ಖಂಡನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಧರ್ಮಗುರುಗಳನ್ನು ಉಚ್ಚಾಟನೆ ಮಾಡುವ ಅಧಿಕಾರ ಇರುವುದು ಕೇವಲ ಸೃಷ್ಟಿಕರ್ತ ಪರಮಾತ್ಮನಿಗೆ ಬಿಟ್ಟರೆ, ದೇವರ ಸ್ವರೂಪವಾದ ಭಕ್ತರಿಗೆ ಮಾತ್ರ. ಉಚ್ಚಾಟನೆ ಏಕಪಕ್ಷೀಯ, ಕಾನೂನು ಬಾಹಿರವಾಗಿದೆ. ಪೀಠವನ್ನು ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ಹೃದಯದಲ್ಲಿ ಕಟ್ಟಿದ್ದೇನೆ. ಭಕ್ತರ ತೀರ್ಮಾನವೇ ಅಂತಿಮ ಎಂದು ಹೇಳಿದರು.ಮೂರ್ನಾಲ್ಕು ದಿನಗಳಲ್ಲಿ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಸಭೆ ಕರೆಯುತ್ತೇನೆ. ಸಭೆಯಲ್ಲಿ ಭಕ್ತರು ಏನು ಹೇಳ್ತಾರೆ ಹಾಗೆ ಮಾಡುತ್ತೇನೆ. ಕೂಡಲಸಂಗಮದಲ್ಲಿಯೇ ಮತ್ತೊಂದು ಮಠ ಕಟ್ಟುವ ವಿಚಾರ ಹೊಂದಿದ್ದೇವೆ. ಕೂಡಲಸಂಗಮದಲ್ಲಿ 13 ಗುಂಟೆ, ದಾವಣಗೆರೆಯಲ್ಲಿ ಭಕ್ತರು ಭೂಮಿದಾನ ಮಾಡಿದ್ದಾರೆ. ಅಲ್ಲಿ ನಾನು ಯಾವ ಚಟುವಟಿಕೆ ಮಾಡಿಲ್ಲ. ಇವತ್ತಿನವರೆಗೆ ಭಕ್ತರ ಕಾಣಿಕೆ, ಮಠದ ಆಸ್ತಿಯಿಂದ ಯಾವ ಆಸ್ತಿಯನ್ನು ಮಾಡಿಲ್ಲ. ಸುಮ್ಮನೆ ತೇಜೋವಧೆ ಮಾಡುವ ಕೆಲಸ ಮಾಡಬಾರದು. ಈಗ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್ ಮೂಲಕ ಏನಾದರೂ ಕೃತ್ಯ ಮಾಡಿದರೂ ಅದನ್ನು ಯಾವ ಭಕ್ತರು ನಂಬುವುದಿಲ್ಲ. ಜನರಿಗೆ ಸತ್ಯ ಏನು ಅಂತ ಗೊತ್ತಿದೆ. ಏನೇ ಬಂದರೂ ಗಟ್ಟಿಯಾಗಿ ಎದುರಿಸುವ ಕೆಲಸ ಮಾಡುತ್ತೇನೆ ಎಂದು ದೃಢವಾಗಿ ಹೇಳಿದರು.

ಪಾದಯಾತ್ರೆ ಶುರುವಾದಾಗಿನಿಂದ ಇಂತಹ ನೂರಾರು ಷಡ್ಯಂತ್ರ ಮಾಡುತ್ತಲೇ ಬಂದಿದ್ದಾರೆ. ನಾನು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಪೀಠವನ್ನು ಭಕ್ತರು ಎಲ್ಲಿ ತೋರಿಸುತ್ತಾರೋ ಅಲ್ಲಿ ಆರಂಭಿಸುತ್ತೇನೆ ಎಂದರು.

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕೂಡಲಸಂಗಮ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಶ್ರೀಗಳನ್ನು ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸ್ವಾಗತಿಸಿದರು. ಜಯಘೋಷಗಳೊಂದಿಗೆ ಕಾಲ್ನಡಿಗೆ ಮೂಲಕ ಸಂಗಮೇಶ್ವರ ದೇವಾಲಯಕ್ಕೆ ಹೋಗಿ ದೇವಾಲಯ ಆವರಣದ ನದಿಯ ದಡದ ಆಲದ ಮರದ ಕೆಳಗೆ ಸಭೆ ಮಾಡಿದರು. ಸಭೆಯಲ್ಲಿ ಸಮಾಜದ ಮುಖಂಡರಾದ ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಕಲಬುರ್ಗಿಯ ಮಲ್ಲನಗೌಡ ಪಾಟೀಲ, ವಿಜಯಪುರ ರುದ್ರಗೌಡ ಪಾಟೀಲ, ಬಾಗಲಕೋಟೆಯ ಧರಿಯಪ್ಪ ಸಾಂಗ್ಲೀಕರ್ ಇತರರು ಇದ್ದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ