ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕೊರತೆ ಇಲ್ಲ; ಕಾಶ ಹುಕ್ಕೇರಿ

KannadaprabhaNewsNetwork | Published : Sep 6, 2024 1:06 AM

ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ರೀತಿಯಾದ ಅನುದಾನದ ಕೊರತೆ ಆಗುವುದಿಲ್ಲವೆಂದು ದೆಹಲಿಯ ವಿಶೇಷ ಪ್ರತಿನಿಧಿ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ರೀತಿಯಾದ ಅನುದಾನದ ಕೊರತೆ ಆಗುವುದಿಲ್ಲವೆಂದು ದೆಹಲಿಯ ವಿಶೇಷ ಪ್ರತಿನಿಧಿ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.

ಪಟ್ಟಣದ ಜಿಟಿಟಿಸಿ ಕಾಲೇಜು ಆವರಣದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಇದುವರೆಗೆ ₹30 ಕೋಟಿ ಅನುದಾನದಲ್ಲಿ 171 ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ಶ್ರೀಘ್ರವೇ ಚಿಕ್ಕೋಡಿ ಹಾಗೂ ಖಡಕಲಾಟ ಗ್ರಾಮದಲ್ಲಿ ಎರಡು ಪಬ್ಲಿಕ್ ಶಾಲೆ ಆರಂಭಿಸಲಾಗುವುದು. ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇದುವರೆಗೆ 274 ಲ್ಯಾಪ್‌ಟಾಪ್‌ಗಳ ವಿತರಣೆ ಮಾಡಿದ್ದೇವೆ ಎಂದರು.

ವಿದ್ಯಾರ್ಥಿಗಳ ಅನುಕುಲಕ್ಕಾಗಿ ಚಿಕ್ಕೋಡಿಯಲ್ಲಿ ಎರಡು ಮೌಲಾನಾ ಆಜಾದ್ ಹಾಗೂ ವಿದ್ಯಾರ್ಥಿಗಳ ಎರಡು ವಸತಿ ನಿಲಯಗಳು ಮಂಜೂರಾಗಿವೆ. ಶೀಘ್ರದಲ್ಲಿ ಅವುಗಳ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಸರ್ಕಾರ ಆದೇಶ ಮಾಡಿದೆ. ಶಿಕ್ಷಕರ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ ಮಾತನಾಡಿ, ಜಾತಿ, ಮತ, ಪಂಥ ಬೇಧಭಾವ ಇಲ್ಲದೇ ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ ಕಾಣುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ. ಇವತ್ತಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ.

ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ 16 ಲ್ಯಾಪ್ಟಾಪ್‌ ವಿತರಿಸಲಾಗಿದೆ. ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಎರಡು ಕೇಂದ್ರೀಯ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಳೆ ಹಾಗೂ ಪ್ರವಾಹದಿಂದ ಹಾಳಾದ ಶಾಲಾ ಕೊಠಡಿಗಳಿಗೆ ಅನುದಾನ ಮಂಜೂರು ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಿಡಿಪಿಐ ಬಿ.ಎ. ಮೆಕನಮರಡಿ, ಜಿಲ್ಲಾ ಮಟ್ಟದ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ.ಲೋಕನ್ನವರ, ತಹಸೀಲ್ದಾರ ಪಿ.ಚಿದಬರಂ, ಪುರಸಭೆ ಸದಸ್ಯರಾದ ರಾಮಾ ಮಾನೆ, ಗುಲಾಬ ಹುಸೇನ ಬಾಗವಾನ, ಸಾಬೀರ್ ಜಮಾದಾರ, ಈರ್ಫಾನ್‌ ಬೇಪಾರಿ, ನರೇಂದ್ರ ನೇರ್ಲಿಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.