ಕೊಟ್ಟೂರು: ಹರಿಹರ ಮತ್ತು ಕೂಡಲ ಸಂಗಮ ಪಂಚಮಸಾಲಿ ಪೀಠಗಳ ಸ್ವಾಮೀಜಿಗಳ ನಡುವೆ ಭಿನ್ನಾಭಿಪ್ರಾಯವಿಲ್ಲ. ಇಬ್ಬರೂ ಪಂಚಮಸಾಲಿ ಸಮಾಜದ ಏಳಿಗೆಗೆ ಹಾಗೂ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀ ಹೇಳಿದರು.
ಯಾವುದೇ ಸಂಘಟನೆಯಲ್ಲಿ ಹೊಸತನಕ್ಕೆ ಅವಕಾಶ ಇದ್ದಾಗ ಮಾತ್ರ ಅದು ಪ್ರಬಲವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಪಂಚಮಸಾಲಿ ಎರಡೂ ಪೀಠದ ಸ್ವಾಮೀಜಿಗಳ ಪ್ರಯತ್ನದಿಂದಲೇ ದೆಹಲಿಯ ಸಂಸತ್ ಭವನದಲ್ಲಿ ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಾಣವಾಗಿದೆ. ಹರಿಹರದಲ್ಲಿ ಮಕರ ಸಂಕ್ರಾಂತಿಯಂದು ನಡೆಸುವ ಹರ ಜಾತ್ರೆಯಲ್ಲಿ ಸಮಾಜದ ಎಲ್ಲರೂ ಪಾಲ್ಗೊಂಡು, ಎಲ್ಲ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ನಡೆಯುವುದಕ್ಕೆ ಮುಂದಾಗಬೇಕು. ಅನೇಕ ದೇಶಗಳಲ್ಲಿ ನನಗೆ ಅಲ್ಲಿಯೇ ಉಳಿಯಲು ಬೇಡಿಕೆ ಇದ್ದರೂ ನಮ್ಮ ದೇಶ, ನಾಡು ಹಾಗೂ ನಮ್ಮ ಸಮಾಜ ಮುಖ್ಯ ಎಂಬ ಕಾರಣಕ್ಕೆ ಅವುಗಳನ್ನು ತಿರಸ್ಕರಿಸಿರುವೆ. ಪೀಠದ ಟ್ರಸ್ಟ್ನಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಕೊಟ್ಟೂರಿನ ವೀರಶೈವ ಪತ್ತಿನ ಸಹಕಾರ ಸಂಘ ಮತ್ತಷ್ಟು ಆರ್ಥಿಕವಾಗಿ ಪ್ರಬಲವಾಗಿ ಬೆಳೆಯಲಿ ಎಂದರು.
ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ರಾಜ್ಯದಲ್ಲಿನ 84 ಲಕ್ಷ ಪಂಚಮಸಾಲಿ ಜನರೆನ್ನೆಲ್ಲ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಯೋಜನೆ ಹೊಂದಿರುವೆ. ಪೀಠದಲ್ಲಿನ ಸ್ವಾಮೀಜಿಗಳನ್ನು ತೆಗೆದುಹಾಕುವ ಯತ್ನ ನಡೆದಿರುವುದು ಸರಿಯಲ್ಲ. ಹರ ಜಾತ್ರೆ ನಡೆಸಲೂ ಉಂಟಾದ ವಿರೋಧಗಳಿಗೆ ಮಣೆ ಹಾಕದೇ ಈ ಬಾರಿ ಹರಿಹರದಲ್ಲಿ ಸಂಕ್ರಾಂತಿಯಂದು ಜಾತ್ರೆ ನಡೆಸಲಾಗುತ್ತಿದೆ. ಸಂಘಟನೆಯಲ್ಲಿ ಹಿರಿಯರು ಮಾರ್ಗದರ್ಶನ ನೀಡಬೇಕು. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಗೆಹರಿಸಿಕೊಂಡು ಸಂಘಟನೆಯನ್ನು ಬಲಗೊಳಿಸುವ ಅವಶ್ಯವಿದೆ. ಸಮಾಜದ ಆಸ್ತಿಯಾಗಿರುವ ಹ.ಬೊ.ಹಳ್ಳಿಯ ಪಂಚಮಸಾಲಿ ಭವನದಲ್ಲಿ ಸಭೆ ನಡೆಸಲು ನನಗೆ ಅವಕಾಶ ನೀಡಲಿಲ್ಲ. ವಚನಾನಂದ ಶ್ರೀ ಮಾರ್ಗದರ್ಶನದಲ್ಲಿ ಇಡೀ ರಾಜ್ಯದ ಪ್ರತಿಯೊಂದು ಹಳ್ಳಿಗೆ ತೆರಳಿ ಸಂಘಟನೆಯನ್ನು ಗಟ್ಟಿಗೊಳಿಸುತ್ತೇನೆ ಎಂದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡಮಣಗು ತಿಪ್ಪೇಸ್ವಾಮಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ನಂತರ ಸಾಕಷ್ಟು ಪಂಚಮಸಾಲಿ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡಿದ್ದೇನೆ. ಕೊಟ್ಟೂರು ವೀರಶೈವ ಪತ್ತಿನ ಸಹಕಾರ ಸಂಘಕ್ಕೂ ಬಿಡಿಸಿಸಿಯಿಂದ ಸೌಲಭ್ಯಗಳನ್ನು ಕಲ್ಪಿಸುವೆ. ಸಂಘದ ಶಾಖೆಯನ್ನು ಕೂಡ್ಲಿಗಿ, ಹೊಸಹಳ್ಳಿಯಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ವಿವೇಕಾನಂದ, ಪಂಚಮಸಾಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಉತ್ತಂಗಿ ರವಿ, ಮುಖಂಡರಾದ ಭರಮನಗೌಡ, ಪಂಪಾಪತಿ ಅಂಗಡಿ ಮಾತನಾಡಿದರು.ಬಿಡಿಸಿಸಿ ಬ್ಯಾಂಕ್‌ನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಂಘದ ನಿರ್ದೇಶಕ ಪಂಪಾಪತಿ ಬಸಾಪುರ ಪ್ರಾಸ್ತಾವಿಕ ಮಾತನಾಡಿದರು. ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ, ಮುಖಂಡರಾದ ರೇವಣ್ಣ, ಚಿರಿಬಿ ಪ್ರಕಾಶ್, ಗಾಯತ್ರಿ ಅಶೋಕ, ಡಿ.ಉಮಾ, ಕೆಎಸ್‌ವೀಣಾ, ಮಲ್ಲಿನಾಥ, ಕೆ.ನೀಲಕಂಠಪ್ಪ, ಚಪ್ಪರದಹಳ್ಳಿ ಕೊಟ್ರೇಶ್, ನಿಂಬಳಗೇರೆ ಕಲ್ಲೇಶಪ್ಪ, ಹಳ್ಳಿ ಅಶೋಕ, ಅನಿಲ್ ಹೊಸಮನಿ, ಕೆ.ಮಂಜುನಾಥಗೌಡ ಸೇರಿ ಅನೇಕರು ಇದ್ದರು. ಬಸಾಪುರ ಅರವಿಂದ ನಿರೂಪಿಸಿದರು.