ಜಿ. ಸೋಮಶೇಖರ
ಕೊಟ್ಟೂರು: ಇಲ್ಲಿನ ಕೊಟ್ಟೂರು ಕೆರೆ ಬಿರು ಬಿಸಿಲಿನಿಂದಾಗಿ ಸಂಪೂರ್ಣ ಖಾಲಿಯಾಗಿದ್ದು, ಗುಬ್ಬಿ ಕೂಡ ನೀರು ಕುಡಿಯಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಐತಿಹಾಸಿಕ ಕೊಟ್ಟೂರು ಕೆರೆ 852 ಎಕರೆ ಪ್ರದೇಶ ವ್ಯಾಪ್ತಿ ಹೊಂದಿದೆ. ಮೊದಲು ಈ ಕೆರೆಯಲ್ಲಿ ಅಷ್ಟಿಷ್ಟು ನೀರು ಕಂಡು ಬರುತ್ತಿತ್ತು. ಆದರೆ ಕಳೆದ ವರ್ಷ ಕೈಕೊಟ್ಟ ವರುಣನ ಅವಕೃಪೆಯಿಂದ ಕೆರೆಯ ಅಂಗಳ ಬಿಕೋ ಎನ್ನುತ್ತಿದೆ. ಇದರಿಂದ ನೂರಾರು ಜಾನುವಾರುಗಳು ಬಾಯಾರಿಕೆ ತೀರಿಸಿಕೊಳ್ಳಲು ಒದ್ದಾಡುವಂತಾಗಿದೆ. ಜತೆಗೆ ಕೆರೆಯ ನೀರಿನಿಂದಾಗ 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಸುತ್ತಲಿನ ಕೃಷಿ ಭೂಮಿಗಳು ಅಂರ್ತಜಲ ಕುಸಿತಕ್ಕೆ ಒಳಗಾಗಿವೆ.
ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಅಭಿವೃದ್ಧಿಗೆ ಯಾವುದೇ ಯೋಜನೆ ಹಮ್ಮಿಕೊಂಡಿಲ್ಲ. ವಾರ್ಷಿಕ ಅನುದಾನ ಅಂದಾಜು ₹1 ಕೋಟಿ ಬರುತ್ತಿದೆ. ಈ ಅನುದಾನವನ್ನು ಕೇವಲ ಕೆರೆ ವ್ಯಾಪ್ತಿಯ ಜಂಗಲ್ ಕಟ್ಟಿಂಗ್ಸ್ ಮತ್ತಿತರ ಕೆಲಸಗಳಿಗೆ ಬಳಸಿಕೊಂಡು ಕೈ ತೊಳೆದುಕೊಳ್ಳುವ ಪ್ರಯತ್ನವನ್ನು ಅಧಿಕಾರಿಗಳು ಸಾಗಿಸಿದ್ದಾರೆ ಎಂದು ಜನತೆ ಆರೋಪಿಸಿದ್ದಾರೆ.ಕೊಟ್ಟೂರು ಕೆರೆ ಒಂದು ಬಾರಿ ತುಂಬಿದರೆ ರೈತರು ತಮ್ಮ ಕೃಷಿ ಭೂಮಿಗಳಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು. ಜತೆಗೆ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿನ ಅಂತರ್ಜಲ ವೃದ್ಧಿಗೊಂಡು ಉತ್ತಮ ಬೆಳೆ ಕಾಣಲು ಅನುಕೂಲವಾಗುತ್ತಿತ್ತು. ಜತೆಗೆ ರೈತರಲ್ಲಿ ಆರ್ಥಿಕ ಸದೃಢತೆ ತರಲು ಈ ಕೆರೆ ಸಹಕಾರಿಯಾಗಿತ್ತು. ಕೆರೆ ಖಾಲಿಯಾಗಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೂ ತೊಂದರೆಯಾಗಿದೆ.
ಹೇಗೂ ಈಗ ಕೆರೆ ಖಾಲಿಯಾಗಿದೆ. ಕೆರೆಯ ಹೂಳು ತೆಗೆಸುವ ಕಾರ್ಯವಾದರೆ ಮತ್ತಷ್ಟು ಪ್ರಮಾಣದಲ್ಲಿ ನೀರು ಕೆರೆ ಅಂಗಳದಲ್ಲಿ ತುಂಬಿಕೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಯಾವ ಪ್ರಯತ್ನವೂ ನಡೆದಿಲ್ಲ. ಹಾಗಾಗಿ ಕೆರೆ ಅಭಿವೃದ್ಧಿಯಾಗುವ ಸೂಚನೆಗಳೇ ಕಾಣುತ್ತಿಲ್ಲ. ಇದು ಕೆರೆ ಪ್ರಿಯರು ಮತ್ತು ರೈತರನ್ನು ಕಂಗೆಡಿಸಿದೆ.ಈ ವರ್ಷ ಭರಪೂರ ಮಳೆಯಾಗುವ ಸೂಚನೆ ವ್ಯಕ್ತವಾಗಿದೆ. ಈ ಬಾರಿ ಕೆರೆ ಸಂಪೂರ್ಣ ತುಂಬಿ ತುಳುಕುವಂತಾದರೆ ತಾಲೂಕಿನ ಸಂಪೂರ್ಣ ರೈತರ ಕೃಷಿ ಭೂಮಿಗಳು ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಲಿದೆ. ಈ ನಿರೀಕ್ಷೆ ನಿಜವಾಗಲಿ ಎನ್ನುವುದೇ ರೈತರ ಆಶಯ.
ಕೊಟ್ಟೂರು ಕೆರೆ ತಾಲೂಕಿನ ಇಡೀ ರೈತರ ಬದುಕಿನ ಜೀವಾಳ. ಇಂತಹ ಕೆರೆಯನ್ನು ಸರ್ಕಾರ ತುಂಬಿಸಬೇಕು. ಕೆರೆ ತುಂಬಲು ಮಳೆ ಬಿಟ್ಟರೆ ಬೇರೆ ಯಾವುದೇ ಮೂಲಗಳಿಲ್ಲ ಎನ್ನುತ್ತಾರೆ ಹವ್ಯಾಸಿ ಬರಹಗಾರ ಅಂಚೆ ಕೊಟ್ರೇಶ್.