ಚಿತ್ರದುರ್ಗ: ಲೋಕಸಭೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್‍ನ ಐದು ಗ್ಯಾರೆಂಟಿಗಳು ಮೂಲೆ ಗುಂಪಾಗುತ್ತವೆ. ಕಾಂಗ್ರೆಸ್ ಶಾಸಕರಿಗೆ ಈ ಸಂಗತಿ ಗೊತ್ತಿದೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾರವರ ಮನೆಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾದಿಗ ಜನಾಂಗದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ನಮ್ಮವರಿಗೆ ಸ್ಥಾನ ಕೊಟ್ಟಿಲ್ಲ. ರಾಮಕೃಷ್ಣ ಹೆಗಡೆ ನನ್ನನ್ನು ರಾಜಕೀಯಕ್ಕೆ ತಂದವರು. ನಮ್ಮ ಸಮಾಜವನ್ನು ಗುರುತಿಸಿದವರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಎಂದು ಸ್ಮರಿಸಿಕೊಂಡರು. ಮಾದಿಗ ಸಮಾಜದ ಮುಖಂಡರು ಪ್ರತಿ ಹಟ್ಟಿಗೆ ಹೋಗಿ ಮತ ಕೇಳುವ ಮೂಲಕ ನನ್ನನ್ನು ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ವಿನಂತಿಸಿದರು.
ಚುನಾವಣೆ ರಾಜಕೀಯದಲ್ಲಿ ಇರಬೇಕೋ, ಬೇಡವೋ ಎಂಬ ಬಗ್ಗೆ ಚಿಂತಿಸುತ್ತಿರುವೆ. ಆದರೂ ಸಕ್ರಿಯವಾಗಿ ರಾಜಕಾರಣದಲ್ಲಿರುತ್ತೇನೆ. ಮಾದಿಗ ಸಮಾಜವನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಮಹತ್ವವಿದೆ. ಯಾವುದೆ ಕಾರಣಕ್ಕೂ ಮತದಾನದಿಂದ ಹಿಂದೆ ಸರಿಯಬೇಡಿ. ಮಾದಿಗ ಜನಾಂಗದಲ್ಲಿ ಪ್ರಜ್ಞೆ ಬೆಳೆಯಬೇಕಾದರೆ ಒಗ್ಗಟ್ಟಾಗಿರಬೇಕು. ನನ್ನ ಗೆಲುವು ನಿಮ್ಮ ಕೈಯಲ್ಲಿದೆ. ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಬೇಕು. ಇದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಮಾದಿಗ ಜನಾಂಗ ಒಂದಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಕ್ಕೆ ಸೇರಿದ 25 ಸಾವಿರ ಕೋಟಿ ರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಮುದೋಳ ಬಾಗಲಕೋಟೆಯನ್ನು ಅಭಿವೃದ್ದಿಪಡಿಸಿರುವ ರೀತಿಯಲ್ಲಿ ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಪಡಿಸಬೇಕೆಂಬ ಉದ್ದೇಶವಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಬಡ, ಅನಾಥ ಮಕ್ಕಳು ಹಾಗೂ ದೇವದಾಸಿಯರ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ, ಹಾಸ್ಟೆಲ್‍ಗಳನ್ನು ನಿರ್ಮಿಸಿದ್ದೇನೆ. ಹತ್ತು ಸಾವಿರ ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ. ಶಿಕ್ಷಣದಿಂದ ಮಾತ್ರ ಮಾದಿಗ ಜನಾಂಗದ ಬದಲಾವಣೆ ಕಂಡುಕೊಳ್ಳಬಹುದು ಎಂದರು.
ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗಾ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಗೆಲ್ಲಿಸಿಕೊಂಡು ಮಾದಿಗ ಜನಾಂಗದ ಶಕ್ತಿ ಏನೆಂಬುದನ್ನು ತೋರಿಸಬೇಕಾಗಿದೆ. ಎಲ್ಲರೂ ಒಟ್ಟಾಗಿ ಗೋವಿಂದ ಕಾರಜೋಳರನ್ನು ಗೆಲ್ಲಿಸಿಕೊಂಡರೆ ಕೇಂದ್ರದಲ್ಲಿ ಮಂತ್ರಿಯಾಗುವ ಸಾಧ್ಯತೆಗಳಿವೆ. ದೇಶದ ಪ್ರಧಾನಿಯಾಗಿದ್ದ ಅಟಲ್‍ಬಿಹಾರಿ ವಾಜಪೇಯಿ, ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಪ್ರಧಾನಿ ನರೇಂದ್ರಮೋದಿ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೋವಿಂದಕಾರಜೋಳ ಅವರನ್ನು ಗೆಲ್ಲಿಸಿಕೊಳ್ಳೋಣ ಎಂದು ವಿನಂತಿಸಿದರು.
ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾದಿಗ ಮಹಾಸಭಾದ ದೇವರಾಜ್ ಟಿ.ನಗರಂಗೆರೆ ಮಾತನಾಡಿ ನಾನು ಕೂಡ ನಾಮಪತ್ರ ಸಲ್ಲಿಸಿದ್ದೆ. ಆದರೆ ಅನೇಕರ ಅಭಿಪ್ರಾಯದಂತೆ ನಾಮಪತ್ರ ಹಿಂದಕ್ಕೆ ಪಡೆದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಬೆಂಬಲಿಸುತ್ತಿದ್ದೇನೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮಾದಿಗ ಜನಸಂಖ್ಯೆಯಿದ್ದು, ಬೇರೆ ಪಕ್ಷಗಳಿಗೆ ನಮ್ಮ ಓಟು ಚದುರದಂತೆ ನೋಡಿಕೊಂಡು ಗೋವಿಂದ ಕಾರಜೋಳ ಅವರ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣಪ್ಪ, ಶಿವಣ್ಣಾಚಾರ್, ಕೆಂಚಣ್ಣ, ರಾಮಚಂದ್ರ, ಶಂಕರ್, ನಾಗರಾಜ್, ಗುಬ್ಬಿ ಹನುಮಂತಪ್ಪ, ಕೃಷ್ಣಮೂರ್ತಿ, ದಗ್ಗೆ ಶಿವಪ್ರಕಾಶ್ ಸೇರಿ ಮಾದಿಗ ಜನಾಂಗದ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.