ಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯದ ಜನತೆ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದೆ ಸರ್ಕಾರ ಉಳಿಯುವ ಗ್ಯಾರಂಟಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಭವಿಷ್ಯ ನುಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದು, ಸರ್ಕಾರದ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.ಸಚಿವರು ಸ್ಥಾನಗಳನ್ನು ಬದಲಾವಣೆ ಮಾಡಿ ಎನ್ನುತ್ತಿದ್ದು, ಯಾರು ಕಪ್ಪ ಹಣ ಕೊಡುತ್ತಾರೆ, ಅವರನ್ನು ಮಾತ್ರ ಉಳಿಸುವ ಪ್ರಯತ್ನ ನಡೆಸಿ, ಇನ್ನುಳಿದವರಿಗೆ ಗೇಟ್‌ಪಾಸ್ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಪರಿಸ್ಥಿತಿ ಐಪಿಎಲ್ ಬೆಟ್ಟಿಂಗ್‌ನಂತಾಗಿದೆ ಎಂದು ಲೇವಡಿ ಮಾಡಿದರು.ದೇಶಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲೂ ಭ್ರಷ್ಟಾಚಾರ ನಡೆದಿದೆ. ನಿಗಮದ ಹಣವನ್ನು ತೆಲಂಗಾಣಕ್ಕೆ ಕಳಿಸಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಎಂದು ಆಕ್ರೋಶ ವ್ಯಕ್ತಡಿಸಿದರು.
ಸುಮಾರು ನೂರು ವರ್ಷದಿಂದ ದೇಶಸೇವೆ ಮಾಡುತ್ತಿರುವ ಆರ್‌ಎಸ್‌ಎಸ್ ನಿಷೇಧಿಸುವುದು ಯಾರಿಂದಲೂ ಸಾಧ್ಯವಿಲ್ಲ. ದೇಶಸೇವೆ, ಜನಸೇವೆ, ದೇಶಭಕ್ತಿ ಬೆಳೆಸುವ ಸಂಘವಾಗಿದ್ದು, ಆರ್‌ಎಸ್‌ಎಸ್ ಏನಾದರೂ ತಪ್ಪು ಮಾಡಿದ್ದರೆ ತೋರಿಸಿ. ಬಳಿಕ ನಿಷೇಧಿಸುವ ವಿಚಾರ ಮಾಡಿ ಎಂದು ಸವಾಲು ಹಾಕಿದರು.ಬಿಜೆಪಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸಹಜ. ಎಲ್ಲರೂ ಪಕ್ಷದ ತೀರ್ಮಾನವನ್ನು ಒಪ್ಪುತ್ತೇವೆ. ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದರು.
ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದೇವೆ ಹೊರತು ಸುಮ್ಮನೆ ಉದ್ಯೋಗ ಕೊಡುವುದಾಗಿ ಪೊಳ್ಳು ಭರವಸೆ ನೀಡುವುದಿಲ್ಲ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿರುವ ಸರ್ಕಾರಗಳ ಕಥೆ ಏನಾಗಿದೆ? ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಾಸಕ ಡಾ. ಚಂದ್ರು ಲಮಾಣಿ, ಸುನೀಲ ಮಹಾಂತಶೆಟ್ಟರ ಇದ್ದರು.