ಮರಳು ಮಾಫಿಯಾ ಬಗ್ಗೆ ಮಾಹಿತಿ ಇಲ್ಲ: ಭೀಮಣ್ಣ

KannadaprabhaNewsNetwork |  
Published : Jan 09, 2024, 02:00 AM ISTUpdated : Jan 09, 2024, 04:38 PM IST
ಶಿರಸಿ ತಾಲೂಕು ಹುಲೇಕಲ್ ನಾಡ ಕಚೇರಿಯನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮರಳು ಅಕ್ರಮವಾಗಿ ತಂದು ಹೆಚ್ಚಿನ ದರಕ್ಕೆ ಮಾರುತ್ತಿದ್ದರೆ ಅಂಥವರ ಮೇಲೆ ಪೊಲೀಸರು ಕ್ರಮಕೈಗೊಳ್ಳಬೇಕು. ಬಡವರು ಕಟ್ಟುತ್ತಿರುವ ಮನೆಗಳಿಗೆ ಮರಳು ಅನಿವಾರ್ಯವಾಗಿದೆ. ಮರಳು ಬರುವಾಗ ಸಣ್ಣಪುಟ್ಟ ತಪ್ಪುಗಳಾಗಬಹುದು.

ಶಿರಸಿ: ನನ್ನ ಕ್ಷೇತ್ರದಲ್ಲಿ ಮರಳು ಮಾಫಿಯ ನಡೆದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಒಂದು ವೇಳೆ ನಡೆದರೆ ಆ ಬಗ್ಗೆ ಪರಿಶೀಲನೆ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಹತೋಟಿಗೆ ತರಲು ಪ್ರಯತ್ನಿಸುವುದಾಗಿ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.

ತಾಲೂಕಿನ ಹುಲೇಕಲ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಜನರಿಗೆ ಮನೆಗಳನ್ನು ನೀಡಲಾಗಿದೆ. ಮನೆ ಕಟ್ಟಲು ಮರಳು ಮತ್ತು ಕಲ್ಲು ಸಾಗಿಸಲು ಅಧಿಕಾರಿಗಳು ಕಾನೂನಾತ್ಮಕವಾಗಿಯೇ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಈ ಭಾಗದಲ್ಲಿ ಗುಣಮಟ್ಟದ ಮರಳು ಸಿಗದ ಕಾರಣಕ್ಕೆ ಘಟ್ಟದ ಕೆಳಗಿನಿಂದ ಮರಳು ತರಲಾಗುತ್ತಿದೆ. ಮರಳು ಅಕ್ರಮವಾಗಿ ತಂದು ಹೆಚ್ಚಿನ ದರಕ್ಕೆ ಮಾರುತ್ತಿದ್ದರೆ ಅಂಥವರ ಮೇಲೆ ಪೊಲೀಸರು ಕ್ರಮಕೈಗೊಳ್ಳಬೇಕು. ಬಡವರು ಕಟ್ಟುತ್ತಿರುವ ಮನೆಗಳಿಗೆ ಮರಳು ಅನಿವಾರ್ಯವಾಗಿದೆ. 

ಮರಳು ಬರುವಾಗ ಸಣ್ಣಪುಟ್ಟ ತಪ್ಪುಗಳಾಗಬಹುದು. ಅದಕ್ಕಾಗಿ ಪೊಲೀಸರಿದ್ದಾರೆ, ಸಂಬಂಧಿಸಿದ ಅಧಿಕಾರಿಗಳಿದ್ದಾರೆ. ಆದರೆ ಜನರು ಅದನ್ನು ದೊಡ್ಡದಾಗಿ ಮಾಡಬಾರದೆಂದು ಹೇಳಿದರು.ಗ್ರಾಮೀಣ ಭಾಗದ ಜನರು ಸರ್ಕಾರದ ಯೋಜನೆಗಳನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಹುಲೇಕಲ್‌ನಲ್ಲಿ ಸುಮಾರು ₹೧೮.೮೪ ಲಕ್ಷ ವೆಚ್ಚದಲ್ಲಿ ನೂತನವಾಗಿ ನಾಡ ಕಚೇರಿ ನಿರ್ಮಾಣ ಮಾಡಲಾಗಿದೆ. ಇದರ ಪ್ರಯೋಜನವನ್ನು ಈ ಭಾಗದ ಜನರು ಪಡೆದುಕೊಳ್ಳಬೇಕು ಎಂದರು. 

ಹುಲೆಕಲ್ ಹೋಬಳಿಯಲ್ಲಿ ನಿರ್ಮಿಸಿರುವ ನಾಡ ಕಚೇರಿ ಉದ್ಘಾಟಸಿದ ಬಳಿಕ ಮಾತನಾಡಿದ ಅವರು, ಹುಲೇಕಲ್‌ನಲ್ಲಿ ಹಿಂದಿದ್ದ ನಾಡ ಕಚೇರಿಯು ಶಿಥಿಲಾವಸ್ಥೆ ತಲುಪಿತ್ತು. ಈ ಭಾಗದ ಜನರು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಬೇಡಿಕೆಯಿಟ್ಟಿದ್ದರು. 

ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಹೊಸ ಕಚೇರಿಗೆ ಬೇಕಾಗುವ ಸಿಬ್ಬಂದಿ ತುಂಬಲಾಗಿದ್ದು, ಹಳೆಯ ಕಟ್ಟಡವನ್ನು ಸಹ ಬಳಸಿಕೊಳ್ಳಲಾಗುವುದು ಎಂದರು.

ಹುಲೇಕಲ್ ಗ್ರಾಮದ ಜನರು ಸರ್ಕಾರದ ಹೊಸ ಯೋಜನೆಗಳ ಲಾಭ ಪಡೆಯಲು ದೂರದ ಶಿರಸಿಗೆ ಬರಬೇಕಿತ್ತು. ನಗರಕ್ಕೆ ಬಂದು ಸರ್ಕಾರದ ಕೆಲಸ ಮಾಡಿಕೊಳ್ಳುವಾಗ ಗ್ರಾಮಸ್ಥರಿಗೆ ಸಾಕಷ್ಟು ಅನನುಕೂಲವಾಗುತ್ತಿತ್ತು. ಇದನ್ನು ತಪ್ಪಿಸಲು ಹುಲೇಕಲ್ ಹೋಬಳಿಯಲ್ಲಿ ನಾಡ ಕಚೇರಿ ತೆರೆಯಲಾಗಿದೆ ಎಂದರು.ತಹಸೀಲ್ದಾರ್ ಶ್ರೀಧರ ಮುಂದಲಮನಿ, ಹುಲೇಕಲ್ ಗ್ರಾಪಂ ಅದ್ಯಕ್ಷ ಖಾಶಿಂ ಇಬ್ರಾಹಿಂ ಸಾಬ್, ಉಪಾಧ್ಯಕ್ಷೆ ಬಿ.ಬಿ. ಫೌಜಿಯಾ ಇತರರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ