ಪುತ್ತೂರು: ಹಬ್ಬಗಳನ್ನು ಸಮಾಜದ ಎಲ್ಲಾ ವರ್ಗದ ಜನರು ಸಂತೋಷ ಸಂಭ್ರಮಗಳಿಂದ ಆಚರಿಸಬೇಕು ಎಂಬ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪಾರಂಪರಿಕ ಹಬ್ಬದ ಆಚರಣೆಗಳಿಗೆ ಕಾನೂನು ಯಾವತ್ತೂ ಅಡ್ಡಿ ಪಡಿಸುವುದಿಲ್ಲ ಎಂದು ದ.ಕ. ಜಿಲ್ಲಾ ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಭೂಮಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಮುಂಬರುವ ದಿನಗಳಲ್ಲಿ ನಡೆಸಲಾಗುತ್ತಿರುವ ಸಾರ್ವಜನಿಕ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಕೆ.ಎ. ಸಿದ್ದೀಕ್, ಕಾವು ಹೇಮನಾಥ ಶೆಟ್ಟಿ, ನೇಮಿರಾಜ್, ರಾಧಾಕೃಷ್ಣ, ಲೋಕೇಶ್ ಹೆಗ್ಡೆ, ಸುಂದರ ಪೂಜಾರಿ ಬಡಾವು, ಅಶ್ರಫ್ ಕಲ್ಲೇಗ, ಅಬೂಬಕ್ಕರ್ ಮಳಾರ್, ಎಂ.ಎ. ರಫೀಕ್ ಸವಣೂರು, ಹನೀಫ್ ಬಗ್ಗುಮೂಲೆ ಮಾತನಾಡಿ ಸಲಹೆಗಳನ್ನು ನೀಡಿದರು. ಪುತ್ತೂರಿನಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಸೌಹಾರ್ದತೆಯಿಂದ ನಡೆಯುತ್ತಿದ್ದು, ಈ ತನಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶೋಭಾಯಾತ್ರೆ ಇರುವುದರಿಂದ ರಾತ್ರಿ ೧೦ ಗಂಟೆಯ ಬಳಿಕ ಮೈಕ್ ಬಳಸಲು ನಿಷೇಧ ಮಾಡಿರುವುದನ್ನು ಸಡಿಲಗೊಳಿಸಿ ೧೨ ಗಂಟೆಯ ತನಕ ಅವಕಾಶ ನೀಡಬೇಕು ಎಂದು ವಿನಂತಿಸಿದರು. ಇದಕ್ಕೆ ಉತ್ತರಿಸಿದ ಅಡಿಷನಲ್ ಎಸ್‌ಪಿ ಅವರು ಶಬ್ದ ಮಾಲಿನ್ಯ ನಿಯಂತ್ರಣ ನಿಬಂಧನೆಯ ಅಡಿಯಲ್ಲಿ ರಾತ್ರಿ ೧೦ ಗಂಟೆಯಿಂದ ಬೆಳಗ್ಗಿನ ೬ ಗಂಟೆಯ ತನಕ ಮೈಕ್ ಬಳಕೆ ನಿಷೇಧಿಸಲಾಗಿದ್ದು, ಸುಪ್ರೀಂ ಕೋರ್ಟಿನ ಗೈಡ್‌ಲೈನ್ ಅಡಿಯಲ್ಲಿ ಈ ನಿಯಮ ಪಾಲನೆ ಮಾಡಲಾಗುತ್ತಿದೆ. ರಾತ್ರಿ ಹೆಚ್ಚು ತಡವಾಗದಂತೆ ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿಬಿಡಿ ಎಂದು ಸಲಹೆ ನೀಡಿದರು. ಡಿವೈಎಸ್‌ಪಿ ಅರುಣ್ ನಾಗೇಗೌಡ, ನಗರ ಠಾಣಾ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ, ಮಹಿಳಾ ಠಾಣಾ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭಾ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ ಉಪಸ್ಥಿತರಿದ್ದರು.