ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸತೀಶ ಜಾರಕಿಹೊಳಿಗೆ ಪರ್ಯಾಯವಾಗಿ ಓಬಿಸಿ ನಾಯಕನನ್ನಾಗಿ ನನ್ನನ್ನು ಡಿಕೆಶಿ ಬೆಳೆಸುತ್ತಿದ್ದಾರೆಂಬ ಆರೋಪ ತಳ್ಳಿ ಹಾಕಿರುವ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ ಅವರು ಜಾರಕಿಹೊಳಿಗೆ ಪರ್ಯಾಯವಾಗಿ ಡಿಕೆಶಿ ನನ್ನನ್ನು ಬೆಳೆಸಿಲ್ಲ. ಆ ಉದ್ದೇಶವೂ ಅವರಿಗಿಲ್ಲ. ನನಗೂ ಆ ತರದ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೇನು ಬೆಳಗಾವಿಗೆ ಹೋಗಿ ಎಲೆಕ್ಷನ್‌ಗೆ ನಿಲ್ಲುವ ಇಚ್ಛೆಯೂ ಇಲ್ಲ. ಯಾವ ಮಿನಿಸ್ಟರ್ ಕಡೆ ಹೋಗಲಿ, ಸಿಎಂ ಕಡೆ ಹೋಗಲಿ, ಯಾರ ಕಡೆ ಹೋದ್ರೂ ಬೆಳಗಾವಿಯಲ್ಲಿ ನಮ್ಮ ಜನ ಇದ್ದಾರೆ. ಅಂದ್ರೆ ಅವರು ಕನ್ಸಿಡರೇ ಆಗಲ್ಲ, ಆಗ ನಾನೇನು ಮಾಡಬೇಕು ಎಂದು ಯಾದವ ಸಮುದಾಯದ ಡಿ.ಟಿ.ಶ್ರೀನಿವಾಸ ಪ್ರಶ್ನೆ ಮಾಡಿದರು.
ಜಾರಕಿಹೊಳಿ ಜತೆಗೆ ಕೂತು ಫೈನಲ್ ಮಾಡಿದ್ದೇವೆ:ಇತ್ತೀಚೆಗೆ ಸತೀಶ ಜಾರಕಿಹೊಳಿ ಅವರ ಜೊತೆ ಕೂತು ಸಮಾವೇಶ ಫೈನಲ್ ಮಾಡಿದ್ದೇವೆ. ಅಧ್ಯಕ್ಷನಾಗಿ ನಾನು ಕಮೆಂಟ್ ಮಾಡೋದಕ್ಕೆ ಹೋದರೆ ತಪ್ಪಾಗುತ್ತದೆ. ಸಮಾಜ ಒಡೆದು ಹೋಗುತ್ತದೆ. ಹೀಗಾಗುವುದು ಬೇಡ. ಸಮಾಜದ 28 ಉಪಜಾತಿಗಳನ್ನು ಕೂಡಿಸುವುದು ನನ್ನ ಜವಾಬ್ದಾರಿ ಎಂದರು.
ಯಾದವ ಸಮಾವೇಶದ ಮೂಲಕ ಶ್ರೀನಿವಾಸರನ್ನು, ಸತೀಶ ಜಾರಕಿಹೊಳಿಗೆ ಪರ್ಯಾಯವಾಗಿ ಓಬಿಸಿ ನಾಯಕನನ್ನಾಗಿಸಲು ಡಿಕೆಶಿ ಹೊರಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಓಬಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಓಬಿಸಿ ಅಧ್ಯಕ್ಷ ಮಾಡಬೇಕೆಂದು ಪ್ರಸ್ತಾವನೆ ಕಳಿಸಿಕೊಟ್ಟಿದ್ದರು. ಆ ಸಮಯದಲ್ಲಿ ಅದಕ್ಕೆ ತಡೆಯಾಯಿತು. ಓಬಿಸಿ ಅಧ್ಯಕ್ಷ ಸ್ಥಾನಕ್ಕೆ ಹೋರಾಟ ಮಾಡುವುದಕ್ಕೆ ಅದೇನು ಸಚಿವ ಸ್ಥಾನದ ಹುದ್ದೆ ಅಲ್ಲ. ಟೈಂ ವೇಸ್ಟ್ ಮಾಡಿಕೊಂಡು, ದುಡ್ಡು ಖರ್ಚು ಮಾಡಿ ರಾಜ್ಯ ಸುತ್ತುವ ಕೆಲಸ ಅದು. ಅದಕ್ಕೋಸ್ಕರ ನಾನು ಒತ್ತು ಕೊಡೋದಕ್ಕೆ ಹೋಗಿಲ್ಲ, ಕೇಳುವುದಕ್ಕೂ ಹೋಗಿಲ್ಲ ಎಂದು ಹೇಳಿದರು.ನಾವು ಎಲ್ಲಿ ಇರುತ್ತೇವೆಯೋ ಅಲ್ಲಿ ನಿಷ್ಠೆಯಿಂದ ಇರುತ್ತೇವೆ. ಹಿಂದೆ ಅನ್ಯಾಯ ಆಗಿದೆ ಎಂದು ಬಿಜೆಪಿಗೆ ಹೋಗಿದ್ದೆವು. ಅಲ್ಲಿ ನಿಷ್ಠೆಯಿಂದ ಕೆಲಸ ಮಾಡಿದೆವು. ಪೂರ್ಣಿಮಾಗೆ ಮಿನಿಸ್ಟರ್ ಸೀಟ್ ಸಿಗದೇ ಇರುವುದಕ್ಕೆ ಅರ್ಧದಲ್ಲೇ ಕಾಂಗ್ರೆಸ್‌ಗೆ ಬಂದೆವು. ಅಧ್ಯಕ್ಷ ಸ್ಥಾನ ಸಿಗದೇ ಇರೋದು ಹಿನ್ನಡೆ ಅನಿಸಲಿಲ್ಲ. ನನಗೆ ಹಿನ್ನಡೆ ಮಾಡಿದವರಿಗೆ ಹಿನ್ನಡೆ ಅನಿಸುತ್ತಿದೆ ಎಂದು ಹೇಳಿದರು.