ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಬೆಂಗಳೂರು ಮತ್ತು ಮೈಸೂರು ನಡುವೆ ಇರುವ ಮಂಡ್ಯ ಅಭಿವೃದ್ಧಿಯಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧಿಸಲಿಲ್ಲ. ಮಂಡ್ಯ ಮೇಲೆ ಯಾರೂ ಅವಲಂಬಿತರೂ ಆಗಿಲ್ಲ. ಏಕೆಂದರೆ, ಇಲ್ಲಿ ಹೊರಗಿನವರನ್ನು ಆಕರ್ಷಿಸುವಂತಹ ಯಾವುದೇ ಪ್ರಗತಿದಾಯಕ ಚಟುವಟಿಕೆಗಳು ಇಲ್ಲಿಲ್ಲ. ರಸ್ತೆ, ಚರಂಡಿ ನಿರ್ಮಾಣವನ್ನೇ ದೊಡ್ಡ ಅಭಿವೃದ್ಧಿ ಎಂದು ಭಾವಿಸಿದ್ದಾರೆ. ಮಂಡ್ಯವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಬಹುದಾದ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಇದುವರೆಗೂ ಸಿದ್ಧವಾಗದಿರುವುದು ದುರಂತ.
ಈಗ ಕಾಲ ಬದಲಾಗಿದೆ. ನವ ಪೀಳಿಗೆಯ ಆಲೋಚನೆಗಳು, ಆಕಾಂಕ್ಷೆಗಳು ಬದಲಾವಣೆಯಾಗಿವೆ. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ದೊರಕಿಸಿಕೊಡಬೇಕಿದೆ. ತಾಂತ್ರಿಕತೆ ವೇಗದಲ್ಲಿ ಸಾಗುತ್ತಿದೆ. ಅದಕ್ಕೆ ತಕ್ಕಂತೆ ಅಭ್ಯುದಯದಲ್ಲೂ ಹೊಸತನವನ್ನು ಇಲ್ಲಿಗೆ ಪರಿಚಯಿಸಬೇಕಿದೆ. ಆ ದಿಸೆಯಲ್ಲಿ ಪ್ರಯತ್ನಗಳು ನಡೆಯದಿರುವುದು ವಿಷಾದದ ಸಂಗತಿಯಾಗಿದೆ.ವರ್ತುಲ ರಸ್ತೆ ಇನ್ನೂ ಕನಸು:
ರಸ್ತೆ, ಚರಂಡಿ ನಿರ್ಮಾಣವನ್ನು ಅಭಿವೃದ್ಧಿಯ ಸಂಕೇತವೆಂದು ಬಿಂಬಿಸಲಾಗುತ್ತಿದೆ. ಅದರಿಂದಾಚೆಗೆ ಯಾರೂ ಆಲೋಚನೆಗಳನ್ನೇ ಮಾಡುತ್ತಿಲ್ಲ. ರಸ್ತೆಗಳು ಅಭಿವೃದ್ಧಿಯಾಗಬೇಕು. ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಜಿಲ್ಲಾ ಹಾಗೂ ರಸ್ತೆಗಳು ಜೋಡಣೆಯಾಗಬೇಕು. ಬೈಪಾಸ್-ವರ್ತುಲ ರಸ್ತೆಗಳ ಅಗತ್ಯವಿದೆ. ಇದರಿಂದ ನಗರ ಬೆಳವಣಿಗೆ ಕಾಣುತ್ತವೆ. ಅದರಲ್ಲೂ ಮಂಡ್ಯ ಹಿಂದೆ ಬಿದ್ದಿದೆ. ನಗರದ ಬೆಳವಣಿಗೆ ದೃಷ್ಟಿಯಿಂದ ಇದುವರೆಗೂ ಮಂಡ್ಯಕ್ಕೆ ವರ್ತುಲ ರಸ್ತೆ ನಿರ್ಮಾಣವಾಗಿಲ್ಲ. ಎರಡು ದಶಕಗಳ ಕನಸು ಈಗಲೂ ಕನಸಾಗಿಯೇ ಉಳಿದುಕೊಂಡಿದೆ.ಮಂಡ್ಯ ನಗರದೊಳಗೆ ಬೆಂಗಳೂರು ಕಡೆಯಿಂದ ಬಲಭಾಗಕ್ಕೆ ಬೈಪಾಸ್ ರಸ್ತೆ ನಿರ್ಮಾಣವಾಗಿದೆ. ಎಡಭಾಗದ ವರ್ತಲ ರಸ್ತೆ ನೆನೆಗುದಿಗೆ ಬಿದ್ದಿದೆ. ಅದಕ್ಕೆ ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ ೯೦೦ ಕೋಟಿ ರು.ಗೆ ಪ್ರಸ್ತಾವನೆ ಸಲ್ಲಿಸಿದ್ದರೆ, ರಾಜ್ಯ ಸರ್ಕಾರ ಉದ್ದೇಶಿತ ಯೋಜನೆಗಿಂತ ೨೦೦ ಮೀ. ಮುಂದಕ್ಕೆ ಹೋಗಿ ರಸ್ತೆ ನಿರ್ಮಿಸುವುದಕ್ಕೆ ಆಲೋಚಿಸಿದೆ. ಸದ್ಯಕ್ಕೆ ಇವೆರಡೂ ಯೋಜನೆಗಳು ಕೇಂದ್ರ- ರಾಜ್ಯಸರ್ಕಾರದ ಅಧಿಕೃತ ಮುದ್ರೆ ಒತ್ತಿಲ್ಲ. ರಾಜಕೀಯ ಮೇಲಾಟಗಳೇ ಜೋರಾಗಿ ನಡೆದಿದೆ.
ಆರೋಗ್ಯ-ಶಿಕ್ಷಣದಲ್ಲೂ ಹಿನ್ನಡೆ:ಮಂಡ್ಯದಲ್ಲಿದ್ದ ಸರ್ಕಾರಿ ಭೂಮಿಗಳು ಅಭಿವೃದ್ಧಿದಾಯಕ ಚಟುವಟಿಕೆಗಳಿಗೆಗೆ ದೊರಕುವುದಕ್ಕಿಂತ ಖಾಸಗಿಯವರ ವಶಕ್ಕೆ ನೀಡಿದ್ದೇ ಹೆಚ್ಚು. ಅಸಿಟೇಟ್ ಕಾರ್ಖಾನೆ ಮುಚ್ಚಿದ ಬಳಿಕ ಆ ಭೂಮಿಯನ್ನು ಸಂರಕ್ಷಿಸುವ ಕೆಲಸ ಅಂದಿನ ಜನಪ್ರತಿನಿಧಿಗಳಿಂದ ನಡೆಯಲೇ ಇಲ್ಲ. ಆ ವಿಶಾಲವಾದ ಪ್ರದೇಶವನ್ನು ಉಳಿಸಿಕೊಂಡಿದ್ದರೆ ದಂತ ವೈದ್ಯಕೀಯ ಕಾಲೇಜು, ಆಯುರ್ವೇದ ಕಾಲೇಜು, ಸರ್ಕಾರಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್, ನರ್ಸಿಂಗ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಸೇರಿದಂತೆ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ಅವಕಾಶವಿತ್ತು. ಅದನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವಶಕ್ಕೆ ನೀಡಿದ್ದರಿಂದ ಭೂಮಿಯ ಉಪಯೋಗ ಸ್ಥಳೀಯ ಜನರಿಗೆ ದೊರಕಲೇ ಇಲ್ಲ. ಆರೋಗ್ಯ-ಶಿಕ್ಷಣಕ್ಕೆ ಪೂರಕವಾದ ಯೋಜನೆಗಳ ಅನುಷ್ಠಾನಗೊಳಿಸುವುದಕ್ಕೆ ಸರ್ಕಾರದ ಗಮನಸೆಳೆಯುವ ಪ್ರಯತ್ನವೂ ಇದುವರೆಗೆ ಯಾರಿಂದಲೂ ನಡೆಯದೂ ಇಲ್ಲ.
ಮೈಷುಗರ್ ನಷ್ಟದೊಳಗೆ ನರಳಾಟ..!ಮಂಡ್ಯದಲ್ಲಿರುವ ಮೈಷುಗರ್ ಕಾರ್ಖಾನೆಯನ್ನು ಎರಡು ದಶಕಗಳಿಂದ ಈವರೆಗೆ ಸುಸ್ಥಿಗೆ ತರಲಾಗಿಲ್ಲ. ಕಾರ್ಖಾನೆಗೆ ೪೦೦ ಕೋಟಿಗೂ ಹೆಚ್ಚು ಹಣ ಈ ಅವಧಿಯಲ್ಲಿ ದೊರಕಿದ್ದರೂ ಕಬ್ಬು ಅರೆಯುವ ಮಿಲ್, ಬಾಯ್ಲಿಂಗ್ ಹೌಸ್, ಡಿಸ್ಟಿಲರಿ ಘಟಕ, ಸಹ ವಿದ್ಯುತ್ ಘಟಕಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಕೌಶಲ್ಯವನ್ನು ಸಂಪದಿಸಲಿಲ್ಲ. ಎಥೆನಾಲ್ ಘಟಕ ಸೇರಿದಂತೆ ಉಪ ಉತ್ಪನ್ನಗಳ ಘಟಕಗಳನ್ನು ತಂದು ಉದ್ಯೋಗ ಸೃಷ್ಟಿಸುವ, ನವೀನ ತಂತ್ರಜ್ಞಾನಕ್ಕೆ ಪೂರಕವಾಗಿ ಕಾರ್ಖಾನೆಯ ಮೂಲ ರೂಪವನ್ನು ಬದಲಾಯಿಸಿ ನವ ಪೀಳಿಗೆಯ ತಂತ್ರಜ್ಞರನ್ನು ಬಳಸಿಕೊಂಡು ಕಾರ್ಖಾನೆಯನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ಆಲೋಚನೆಯುಳ್ಳ ನಾಯಕರ ಕೊರತೆಯಿಂದ ಸರ್ಕಾರಿ ಒಡೆತನದ ಮೈಷುಗರ್ ಕಾರ್ಖಾನೆ ನಷ್ಟದೊಳಗೇ ನರಳಾಡುತ್ತಿದೆ.
ಹೊಸತನ್ನು ತರುವುದಕ್ಕೆ ಜಾಗದ ಕೊರತೆ:ಇದ್ದುದೆಲ್ಲವನ್ನೂ ಕಳೆದುಕೊಂಡು ಇದೀಗ ನಗರದ ಸುತ್ತಮುತ್ತ ಏನಾದರೂ ಹೊಸತನ್ನು ತರಬೇಕೆಂದರೆ ಜಾಗದ ಕೊರತೆ ಪ್ರಮುಖವಾಗಿ ಕಾಡುತ್ತಿದೆ. ಮಿಮ್ಸ್ ಆಸ್ಪತ್ರೆಯ ಪಕ್ಕದ ಜಾಗವನ್ನು ಪಡೆದುಕೊಳ್ಳುವುದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಗರಕ್ಕೆ ಇನ್ನೂ ಕನಸಾಗಿಯೇ ಉಳಿದಿದೆ. ತಾಯಿ-ಮಗು ಆಸ್ಪತ್ರೆ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೂ ನಗರ ವ್ಯಾಪ್ತಿಯೊಳಗೆ ಜಾಗ ದೊರಕಿಸಲಾಗದೆ ಮಂಡ್ಯದಿಂದ ಎಂಟು ಕಿ.ಮೀ. ದೂರದ ಪ್ರದೇಶದಲ್ಲಿ ನಿರ್ಮಿಸುವ ಅನಿವಾರ್ಯತೆಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ.
ಈಗಲಾದರೂ ಜನಪ್ರತಿನಿಧಿಗಳ ಅಭಿವೃದ್ಧಿಯ ಆಲೋಚನೆಗಳು ಬದಲಾಗಬೇಕು. ದೂರದೃಷ್ಟಿಯೊಂದಿಗೆ ಇಂದಿನ ಪೀಳಿಗೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಪ್ರಸ್ತುತ ಯಾವುದಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ, ಯಾವುದನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕೆಂಬುದನ್ನು ಇಂದಿನಯುವಕರೊಂದಿಗೆ ಸಂವಾದ, ಸಮಾಲೋಚನೆ ನಡೆಸಿ ಅವರಿಗೆ ಬೇಕಾದ ಶಿಕ್ಷಣ, ಉದ್ಯೋಗವಕಾಶಗಳ ಸೃಷ್ಟಿಗೆ ಪೂರಕ ಕಂಪನಿಗಳು, ಕೈಗಾರಿಕೆಗಳ ಸ್ಥಾಪನೆಗೆ ಪ್ರಾಮಖ್ಯತೆ ನೀಡುವುದು ಔಚಿತ್ಯಪೂರ್ಣವಾಗಿದೆ.ಇ-ವೆಹಿಕಲ್ ಕಾಂಪೋನೆಂಟ್ ತಯಾರಿಕೆ ಕಂಪನಿಗಳಿಲ್ಲಈಗ ದೇಶಾದ್ಯಂತ ಹೊಸ ಕ್ರಾಂತಿ ಸೃಷ್ಟಿಸಿರುವುದು ಎಲೆಕ್ಟ್ರಾನಿಕ್ ವೆಹಿಕಲ್. ಈ ವಾಹನಗಳಿಗೆ ಕಂಟ್ರೋಲರ್, ಕನ್ವರ್ಟರ್, ಚಾರ್ಜರ್ ಇನ್ನಿತರ ಸಾಮಗ್ರಿಗಳು ಅವಶ್ಯವಾಗಿ ಬೇಕಿವೆ. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಂಪನಿಗಳನ್ನು ಮಂಡ್ಯ ಸುತ್ತಮುತ್ತ ಆರಂಭಿಸುವ ಪ್ರಯತ್ನಗಳು ಯಾರಿಂದಲೂ ನಡೆಯುತ್ತಿಲ್ಲ. ಇವುಗಳಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳು ಲಭ್ಯವಾಗಲಿವೆ. ಯುವಜನರು ಉದ್ಯೋಗಕ್ಕೆ ವಲಸೆ ಹೋಗುವುದನ್ನು ತಪ್ಪಿಸುವುದಕ್ಕೆ ಉತ್ತಮ ಯೋಜನೆ ಇದಾಗಿದೆ.
ಬದಲಾವಣೆಯ ಪರ್ವ ಕಾಲವನ್ನು ಗಮನದಲ್ಲಿಟ್ಟುಕೊಂಡು ನಗರ ಪ್ರದೇಶದ ಅಭಿವೃದ್ಧಿಯ ಪಥವನ್ನೂ ಬದಲಿಸಬೇಕಿದೆ. ಇಂದಿನ ಪೀಳಿಗೆಯ ಆಯ್ಕೆಗಳೇನು, ಅವರ ಆಸಕ್ತಿಯ ಕ್ಷೇತ್ರಗಳು ಯಾವುವು, ಯಾವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕಿದೆ. ತಾಂತ್ರಿಕತೆಯನ್ನು ಅಭಿವೃದ್ಧಿಗೆ ಬಳಸಿಕೊಳ್ಳುವುದು ಹೇಗೆ, ಉದ್ಯೋಗ ಸೃಷ್ಟಿಗೆ ಇರುವ ಅವಕಾಶಗಳು ಯಾವುವು ಎಂಬುದನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಯುವಜನರನ್ನು ಗಮನದಲ್ಲಿಟ್ಟುಕೊಂಡು, ಬದಲಾಗಿರುವ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಸ್ಥಳೀಯ ಮಟ್ಟದಲ್ಲಿ ಅದಕ್ಕೆ ಪೂರಕವಾದ ಕಂಪನಿಗಳು, ಕಾಲೇಜುಗಳು, ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಜನಪ್ರತಿನಿಧಿಗಳು ಪ್ರಾಮುಖ್ಯತೆಯನ್ನು ನೀಡಿದರೆ ಆಗ ಪ್ರಗತಿಯಲ್ಲಿ ಏನಾದರೊಂದು ಬದಲಾವಣೆಯನ್ನು ಕಾಣಲು ಸಾಧ್ಯವಾಗಲಿದೆ.ಸಾಫ್ಟ್‌ವೇರ್ ಪಾರ್ಕ್ಗಳಿಲ್ಲಮಂಡ್ಯದಲ್ಲಿ ನವೀನ ಕಾರ್ಖಾನೆಗಳು, ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿದ್ದರೂ ತಾಂತ್ರಿಕತೆ ಬೆಳವಣಿಗೆಗೆ ತಕ್ಕಂತೆ ಕಾರ್ಖಾನೆಗಳು, ಕೃಷಿ ಆಧಾರಿತ ಘಟಕಗಳು, ಕೈಗಾರಿಕೆಗಳು ಸ್ಥಾಪನೆಯಾಗುತ್ತಿಲ್ಲ. ಮಂಡ್ಯ ಸುತ್ತಮುತ್ತ ಎಲ್ಲೂ ಸಾಫ್ಟ್‌ವೇರ್ ಪಾರ್ಕ್‌ಗಳಿಲ್ಲ. ಸರ್ಕಾರ ಅಥವಾ ಇನ್‌ಫೋಸಿಸ್ ಸೇರಿದಂತೆ ಇನ್ನಿತರ ಕಂಪನಿಗಳ ಗಮನಸೆಳೆದು ಇಲ್ಲಿಗೆ ತರುವ ಪ್ರಯತ್ನವನ್ನೂ ಜನಪ್ರತಿನಿಧಿಗಳಾದಿಯಾಗಿ ಯಾರೊಬ್ಬರೂ ಮಾಡುತ್ತಿಲ್ಲ. ಹೀಗಾಗಿ ವಿವಿಧ ವಿಭಾಗಗಳಲ್ಲಿ ಎಂಜಿನಿಯರಿಂಗ್ ಮುಗಿಸಿದವರು ಉದ್ಯೋಗನ್ನರಸಿಕೊಂಡು ಬೆಂಗಳೂರು, ಮೈಸೂರು ಹಾದಿ ಹಿಡಿಯುವುದು ಸರ್ವೇಸಾಮಾನ್ಯವಾಗಿದೆ. ಎಲ್ಲವನ್ನೂ ಹೊರಗಿನಿಂದ ತರಿಸಿಕೊಳ್ಳುತ್ತಿದ್ದೇವೆಯೇ ವಿನಃ ಮಂಡ್ಯದಿಂದ ಹೊರಗೆ ಕೈಗಾರಿಕೆ, ಕಾರ್ಖಾನೆ ಉತ್ಪನ್ನವನ್ನು ಕಳುಹಿಸಿಕೊಡಲಾಗುತ್ತಿಲ್ಲ.