ಕಸಾಪಗೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಬಾರದೆಂಬ ವಾದದಲ್ಲಿ ಅರ್ಥವಿಲ್ಲ

KannadaprabhaNewsNetwork |  
Published : Nov 08, 2026, 01:15 AM IST
7ಕೆಆರ್ ಎಂಎನ್ 1.ಜೆಪಿಜಿಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಬಾರದೆಂಬ ವಾದದಲ್ಲಿ ಯಾವುದೇ ಅರ್ಥವಿಲ್ಲ. ಕಸಾಪದ ಗತವೈಭವವನ್ನು ಮರಳಿ ಸ್ಥಾಪಿಸುವುದರ ಜೊತೆಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ರೂಪಿಸುವ ಹಂಬಲದಿಂದ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು

ರಾಮನಗರ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಬಾರದೆಂಬ ವಾದದಲ್ಲಿ ಯಾವುದೇ ಅರ್ಥವಿಲ್ಲ. ಕಸಾಪದ ಗತವೈಭವವನ್ನು ಮರಳಿ ಸ್ಥಾಪಿಸುವುದರ ಜೊತೆಗೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ರೂಪಿಸುವ ಹಂಬಲದಿಂದ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ತಿನ ನಿಯಮದಂತೆ ಆಜೀವ ಸದಸ್ಯರೆಲ್ಲರಿಗೂ ಸ್ಪರ್ಧಿಸಲು ಅವಕಾಶ ಇದೆ. ತಾವು ವಿದ್ಯಾರ್ಥಿ ದಿಸೆಯಿಂದಲೂ ಕನ್ನಡವನ್ನು ಅಪ್ಪಿಕೊಂಡಿದ್ದು, ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆದು ಕೇಂದ್ರ ಸೇವೆಗೆ ಸೇರಿದ್ದೆ. ಕೇಂದ್ರ ಪ್ರಥಮ ದರ್ಜೆ ಸೇವೆಗೆ ಆಯ್ಕೆಯಾದ ನಂತರ ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ಆಡಳಿತ ಸೇವೆಯನ್ನು ಆಯ್ಕೆ ಮಾಡಿಕೊಂಡೆ ಎಂದು ಹೇಳಿದರು.

ಅಬಕಾರಿ ಆಯುಕ್ತರಾಗಿ, ಕೃಷಿ ಮಾರುಕಟ್ಟೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹಾಗೂ ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೇರಿದಂತೆ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಕನ್ನಡ ನಾಡು-ನುಡಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಆಡಳಿತದಲ್ಲಿ ಗಳಿಸಿದ ಅನುಭವವನ್ನು ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರದ ಕೇಂದ್ರವಾಗದೆ, ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಸೇವಾ ಕೇಂದ್ರವಾಗಬೇಕು. ಆಡಳಿತವೆಂದರೆ ಅಧಿಕಾರವಲ್ಲ, ಅದೊಂದು ಸೇವೆ ಎಂಬ ತತ್ವವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ಕಸಾಪ ಅಧ್ಯಕ್ಷ ಸ್ಥಾನ ಅಧಿಕಾರ ಅನುಭವಿಸುವ ಹುದ್ದೆಯಲ್ಲ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜನಪದದ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವ ಜವಾಬ್ದಾರಿಯುತ ಸ್ಥಾನ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಎಂಬ ಪರಿಕಲ್ಪನೆಯಡಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ನಿರಂತರ ಅನುಷ್ಠಾನಗೊಳಿಸುವ ಮೂಲಕ ಕಸಾಪ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ರೂಪಿಸುವ ಹಂಬಲದಿಂದ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದು ತಿಳಿಸಿದರು.

ಕಸಾಪ ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಆಶಯ ಹೊಂದಿದ್ದೇನೆ. ಪ್ರಸ್ತುತ ಸುಮಾರು 4 ಲಕ್ಷ ಇರುವ ಪರಿಷತ್ತಿನ ಸದಸ್ಯತ್ವವನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿಯ ನಿತ್ಯೋತ್ಸವದ ಜೊತೆಗೆ ಯುವಕರು, ಮಹಿಳೆಯರು ಹಾಗೂ ಮಕ್ಕಳನ್ನು ಸಾಹಿತ್ಯ ಚಟುವಟಿಕೆಗಳತ್ತ ಆಕರ್ಷಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ :

ಪರಿಷತ್ತಿನ ವತಿಯಿಂದ ಪ್ರತಿ ತಿಂಗಳು ಸಾಹಿತ್ಯ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಪ್ರಕಟಿತ ವಿದ್ವಾಂಸರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡಲಾಗುವುದು. ಸಾಹಿತ್ಯದ ಮೂಲಕ ಸಾಮರಸ್ಯ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪ್ರಯತ್ನಿಸಲಾಗುವುದು. ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಎದುರಿಸುವ ಅಭ್ಯರ್ಥಿಗಳಿಗೆ ಪರಿಷತ್ತಿನ ಮೂಲಕ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಕನ್ನಡ ಹೋರಾಟಗಾರರು, ಸಾಹಿತಿಗಳು ಹಾಗೂ ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಪರಿಷತ್ತು ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದು ಡಾ. ಸೋಮಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ, ಯೋಗಾನಂದ, ರಾ.ಬಿ.ನಾಗರಾಜು, ಎಂ.ಆರ್.ಶಿವಕುಮಾರಸ್ವಾಮಿ, ಜಗದೀಶ್, ಎಂಎನ್‌ಆರ್‌ ಜಗದೀಶ್, ಶಿವಲಿಂಗಯ್ಯ, ಗೋವಿಂದರಾಜು, ಎನ್‌ಎಸ್ ಕುಮಾರ್, ಪಾಲನೇತ್ರ, ರೂಪಾ ಇತರರಿದ್ದರು.

ಬಾಕ್ಸ್ .............

ಆಡಳಿತದ ಪಟ್ಟು ಗೊತ್ತಿರುವ ಕನ್ನಡ ಮನಸ್ಸುಳ್ಳವರು ಸ್ಪರ್ಧಿಸಬಹುದು - ಡಾ.ತಲಕಾಡು ಚಿಕ್ಕರಂಗೇಗೌಡ

ರಾಮನಗರ: ಕೆಲ ಸ್ವಯಂ ಘೋಷಿತ ಸಾಹಿತಿಗಳು ಕಸಾಪವನ್ನು ಸಾಹಿತಿಗಳೇ ನಡೆಸಬೇಕೆಂದು ವಾದ ಮಾಡುತ್ತಿದ್ದಾರೆ. ಇದು ತಪ್ಪು. ಪರಿಷತ್ತಿನಲ್ಲಿ ಆಡಳಿತಾತ್ಮಕ ಅಂಶವೂ ಪ್ರಮುಖವಾಗಿದೆ. ಹೀಗಾಗಿ ಆಡಳಿತದ ಪಟ್ಟು ಗೊತ್ತಿರುವ ಕನ್ನಡ ಮನಸ್ಸಿನ ಡಾ.ಸಿ.ಸೋಮಶೇಖರ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿ ಎಂದು ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಾಪ ಹುಟ್ಟು ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಮೊದಲು ಮೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರೂ ಕೂಡ ಸಾಹಿತಿಗಳಲ್ಲ. ಹೀಗಿರುವಾಗ ಕಸಾಪಗೆ ನಿವೃತ್ತ ಅಧಿಕಾರಿಗಳು ಸ್ಪರ್ಧಿಸಬಾರದೆಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಕಸಾಪ ಅಧ್ಯಕ್ಷರನ್ನು ಹೊರತುಪಡಿಸಿದರೆ ಬೇರೆಯವರಿಗೆ ಅವಕಾಶ ಇಲ್ಲ. ಇದಕ್ಕೆ ಆಡಳಿತದ ಎಲ್ಲ ಪಟ್ಟುಗಳು ಗೊತ್ತಿರಬೇಕು. ಅದು ಸೋಮಶೇಖರ್ ಕರಗತ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕಸಾಪ ರಾಜ್ಯಾಧ್ಯಕ್ಷರಾದವರಿಗೆ ಆಡಳಿತ ನಡೆಸುವ ಅಧಿಕಾರಿಗಳೊಂದಿಗೆ ನೇರ ಸಂಪರ್ಕ ಇರಬೇಕು. ಅದು ಈವರೆಗೆ ರಾಜ್ಯಾಧ್ಯಕ್ಷರಾದವರಲ್ಲಿ ಇರಲಿಲ್ಲ. ಈ ಕಾರಣದಿಂದಲೇ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ತಡವಾಗಿ ಸಿಕ್ಕಿತು. ಅಲ್ಲದೆ, ತಮಿಳು ಮತ್ತು ಸಂಸ್ಕೃತ ಭಾಷೆಗೆ ಸಿಕ್ಕಷ್ಟು ಅನುದಾನವೂ ಸಿಗಲಿಲ್ಲ. ಕನ್ನಡದ ಕೆಲಸಗಳು ಸಾಕಾರಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

7ಕೆಆರ್ ಎಂಎನ್ 1.ಜೆಪಿಜಿ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ